ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ವಾಪಸ್‌ ಆದ ‘ಗಲಭೆಕೋರರು’, ಎರಡೇ ದಿನಕ್ಕೆ ಸ್ಥಳಾಂತರ ಪ್ರಹಸನ ಅಂತ್ಯ

ಐವರಲ್ಲಿ ಕೋವಿಡ್‌-19 ಸೋಂಕು ಧೃಡ
Last Updated 24 ಏಪ್ರಿಲ್ 2020, 14:35 IST
ಅಕ್ಷರ ಗಾತ್ರ

ರಾಮನಗರ: ಪಾದರಾಯನಪುರ ಗಲಭೆ ಆರೋಪಿಗಳ ರಾಮನಗರ ಜೈಲು ವಾಸ ಎರಡನೇ ದಿನಕ್ಕೆ ಅಂತ್ಯ ಕಂಡಿದೆ. ಇಲ್ಲಿದ್ದ ಐವರಲ್ಲಿ ಕೋವಿಡ್‌-19 ಸೋಂಕು ಖಾತ್ರಿಯಾದ ಹಿನ್ನೆಲೆಯಲ್ಲಿ ಎಲ್ಲರನ್ನೂ ಶುಕ್ರವಾರ ಬೆಂಗಳೂರಿನ ಹಜ್‌ ಭವನಕ್ಕೆ ಸ್ಥಳಾಂತರಿಸಲಾಯಿತು.

ಜೈಲಿನಲ್ಲಿ ಇದ್ದವರ ಪೈಕಿ ಗುರುವಾರ ರಾತ್ರಿ ಇಬ್ಬರಿಗೆ ಸೋಂಕು ಧೃಡಪಟ್ಟಿದ್ದು, ಶುಕ್ರವಾರ ಇನ್ನೂ ಮೂವರಿಗೆ ಸೋಂಕು ತಗುಲಿರುವುದು ಖಾತ್ರಿಯಾಯಿತು. ಕೂಡಲೇ ಎಚ್ಚೆತ್ತ ಸರ್ಕಾರ ಇಲ್ಲಿನ ಜೈಲಿನಲ್ಲಿದ್ದ ಎಲ್ಲ ಆರೋಪಿಗಳನ್ನು ಬೆಂಗಳೂರಿಗೆ ಕರೆದೊಯ್ಯಲು ಆದೇಶ ನೀಡಿತು.

ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ರಾಮನಗರ ಜೈಲಿನ ಮುಂಭಾಗ ಬಂದು ನಿಂತವು. ಮಳೆ ಕಾರಣ ಸ್ಥಳಾಂತರ ಪ್ರಕ್ರಿಯೆ ಕೊಂಚ ತಡವಾಯಿತು. ಮಧ್ಯಾಹ್ನ 1.40ರ ಸುಮಾರಿಗೆ ಒಟ್ಟು 7 ಕೆಎಸ್‌ಆರ್‌ಟಿಸಿ ಬಸ್‌ ಗಳ ಮೂಲಕ ಎಲ್ಲರನ್ನೂ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.

ಈ ವೇಳೆ ಪೊಲೀಸ್‌ ಸಿಬ್ಬಂದಿ, ವೈದ್ಯರು, ಜೈಲು ಸಿಬ್ಬಂದಿಗಳು ಪಿಪಿಟಿ ಕಿಟ್‌ಗಳ ಮೂಲಕ ರಕ್ಷಣೆ ಪಡೆದಿದ್ದರು. ಇಡೀ ಜೈಲು ಖಾಲಿಯಾದ ಬಳಿಕ ಜಿಲ್ಲಾಡಳಿತ ಭವನ, ಜೈಲಿನ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ಇಡೀ ಜೈಲು ಖಾಲಿ ಹೊಡೆಯುತ್ತಿದೆ.

ಇನ್ನಷ್ಟು ಸೋಂಕಿನ ಭೀತಿ: ರಾಮನಗರ ಜೈಲು ತೀರ ಚಿಕ್ಕದಾಗಿದ್ದು, ಅಲ್ಲಿ ದೊಡ್ಡದಾದ ನಾಲ್ಕು ಬ್ಯಾರಕ್‌ಗಳು ಮಾತ್ರವೇ ಇವೆ. ಪ್ರತಿ ಬ್ಯಾರಕ್‌ನಲ್ಲಿ 20-25 ಜನರನ್ನು ಒಟ್ಟಿಗೆ ಇಡಲಾಗಿತ್ತು. ಶುಕ್ರವಾರ ಸೋಂಕು ಪತ್ತೆಯಾದ ಮೂವರು ಒಂದೇ ಬ್ಯಾರಕ್‌ನಲ್ಲಿ ಇದ್ದು, ಅಲ್ಲಿ ಅವರೊಟ್ಟಿಗೆ ಇನ್ನೂ 22ಮಂದಿ ಇದ್ದರು. ಅವರನ್ನೂ ಮತ್ತೆ ತಪಾಸಣೆಗೆ ಒಳಪಡಿಸಿದ್ದು, ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ ಜೈಲಿನಲ್ಲಿ ಇದ್ದ ವಿಚಾರಣಾಧೀನ ಕೈದಿಗಳನ್ನೂ ಮತ್ತೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರಿನಿಂದ ರಾಮನಗರಕ್ಕೆ ಒಟ್ಟು 121 ಆರೋಪಿಗಳನ್ನು ಕರೆತರಲಾಗಿತ್ತು. ಜತೆಗೆ ಜೈಲಿನಲ್ಲಿ ಇತರ 18 ಕೈದಿಗಳೂ ಇದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT