ಕೊಡಗು: ಗದ್ದೆಗಳಲ್ಲಿ ನೀರಿಲ್ಲ: ಭತ್ತದ ಕೃಷಿಗೆ ಆಪತ್ತು

ಶನಿವಾರ, ಜೂಲೈ 20, 2019
28 °C
ಮಲೆನಾಡು ಭಾಗದಲ್ಲಿ ಮುಂಗಾರು ದುರ್ಬಲ; ಉತ್ತರ ಕೊಡಗಿನಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ

ಕೊಡಗು: ಗದ್ದೆಗಳಲ್ಲಿ ನೀರಿಲ್ಲ: ಭತ್ತದ ಕೃಷಿಗೆ ಆಪತ್ತು

Published:
Updated:
Prajavani

ಮಡಿಕೇರಿ: ಪ್ರತಿವರ್ಷ ಹವಾಮಾನ ಬದಲಾವಣೆಯು ಕೊಡಗು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಒಂದು ವರ್ಷ ಭಾರೀ ಮಳೆಯಾದರೆ, ಮತ್ತೊಂದು ಸಲ ದುರ್ಬಲ ಮುಂಗಾರು. ಈ ಬಾರಿ ಮುಂಗಾರು ದುರ್ಬಲವಾದಂತೆ ಕಾಣಿಸಿದ್ದು ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಹೆಚ್ಚಿನ ನೀರನ್ನು ಬೇಡುವ ಭತ್ತದ ಬೆಳೆಗೆ ಸದ್ಯಕ್ಕೆ ನೀರಿಲ್ಲದ ಸ್ಥಿತಿಯಿದೆ. ಗದ್ದೆಗಳು ಭಣಗುಡುತ್ತಿವೆ. ನದಿ, ತೊರೆಗಳಲ್ಲೂ ನೀರಿನ ಮಟ್ಟ ಏರಿಕೆ ಕಾಣಿಸುತ್ತಿಲ್ಲ.

2018ರಲ್ಲಿ ಮೂರು ತಿಂಗಳು ಆರ್ಭಟಿಸಿದ ಮಳೆಗೆ ಕಾಫಿ, ಕಾಳುಮೆಣಸು, ಬಾಳೆ ಹಾಗೂ ಏಲಕ್ಕಿ ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿದ್ದವು. ಆದರೆ, ಈ ವರ್ಷ ಸಸಿಮಡಿಗೂ ಕೆಲವು ಭಾಗದಲ್ಲಿ ನೀರಿಲ್ಲದೇ ರೈತರು ಆಕಾಶ ನೋಡುವಂತಹ ಪರಿಸ್ಥಿತಿಯಿದೆ. ಕೇರಳ ಭಾಗಕ್ಕೆ ಹೊಂದಿಕೊಂಡಿರುವ ದಕ್ಷಿಣ ಕೊಡಗಿನಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದೆ. ಆದರೆ, ಉತ್ತರ ಭಾಗದಲ್ಲಿ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. 

ಜುಲೈ ಅಂತ್ಯದ ತನಕವೂ ಮಳೆ ಕಣ್ಣಾಮುಚ್ಚಾಲೆಯಾಡಿರದೆ ಹಾರಂಗಿ ಜಲಾಶಯವಿರಲಿ ಜಿಲ್ಲೆಯ ಹಳ್ಳ, ನದಿ, ತೋಡುಗಳು ತುಂಬುವುದಿಲ್ಲ ಎಂದು ರೈತರು ಹೇಳುತ್ತಾರೆ.

ಜೂನ್‌ ಮೊದಲ ವಾರದಲ್ಲಿ ಮುಂಗಾರು ಆರಂಭವಾದ ಕೂಡಲೇ ‘ಮಳೆ ಬರಲಿ, ಆಪತ್ತು ತರದಿರಲಿ’ ಎಂದು ರೈತರೂ ಸೇರಿದಂತೆ ಜಿಲ್ಲೆಯ ಜನರು ಪ್ರಾರ್ಥಿಸಿದ್ದರು. ಆದರೆ, ಈಗ ಮಳೆಯು ಬಿರುಸು ಪಡೆದುಕೊಂಡಿಲ್ಲ. ಗದ್ದೆಗಳು ಭಣಗುಡುತ್ತಿವೆ.

ದಕ್ಷಿಣ ಕೊಡಗಿನ ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಕೆದಮಳ್ಳೂರು, ಭಾಗಮಂಡಲ, ಕಕ್ಕಬ್ಬೆ, ನಾಪೋಕ್ಲು ವ್ಯಾಪ್ತಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಾಕಷ್ಟು ಮಳೆ ಸುರಿದಿದೆ. ಅದೇ ಗದ್ದೆಯಲ್ಲಿ ಕೃಷಿ ಚಟುವಟಿಕೆ ನಡೆಸಲು ನೀರಿಲ್ಲ.

ಕಳೆದ ವರ್ಷ ಜುಲೈ ಮೊದಲ ವಾರದ ವೇಳೆಗೆ ನದಿ ಹಾಗೂ ಹಳ್ಳಗಳು ಮೈದುಂಬಿಕೊಂಡಿದ್ದವು. ಕಾವೇರಿ, ಲಕ್ಷ್ಮಣತೀರ್ಥ ನದಿಯಲ್ಲೂ ನೀರಿನಮಟ್ಟ ಏರಿಕೆಯಾಗಿ ಕೆಆರ್‌ಎಸ್‌ನತ್ತ ನೀರು ಹರಿಯಲು ಆರಂಭಿಸಿತ್ತು. ಈ ವರ್ಷ ಮಲೆನಾಡಿನ ಕೊಡಗಿನಲ್ಲಿ ಮಳೆ ಬಿರುಸು ಪಡೆದುಕೊಂಡಿಲ್ಲ.

‘ಕಳೆದ ವರ್ಷ ಮುಂಗಾರು ಅಬ್ಬರದಿಂದ ಭೂಕುಸಿತ ಉಂಟಾಗಿತ್ತು. ಜಿಲ್ಲೆಯೇ ದ್ವೀಪವಾಗಿತ್ತು. ಬೆಳೆಯನ್ನೂ ಕಳೆದುಕೊಂಡಿದ್ದೆವು. ಅದೊಂದು ಕಹಿ ನೆನಪು. ಈ ಬಾರಿ ಮಳೆ ಕಡಿಮೆಯಾಗಲಿ ಎಂದು ಬೇಡಿಕೊಂಡಿದ್ದವು. ಆದರೆ, ವಾಡಿಕೆ ಮಳೆಯೂ ಸುರಿಯುತ್ತಿಲ್ಲ’ ಎಂದು ಮಾದಾಪುರ ಭಾಗದ ರೈತರು ನೋವು ತೋಡಿಕೊಳ್ಳುತ್ತಾರೆ.

‘ಅರ್ಧ ಮಳೆಗಾಲ ಪೂರ್ಣವಾಗಿದೆ. ಹಿಂದೆಲ್ಲಾ ಜುಲೈನಲ್ಲಿ ದಟ್ಟವಾದ ಮೋಡ ಕವಿದ ವಾತಾವರಣ ಇರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಒಂದು ವರ್ಷ ರಣಮಳೆ, ಮತ್ತೊಂದು ಅವಧಿಯಲ್ಲಿ ಬರ. ಇದು ಕೃಷಿಯ ಮೇಲೆ ಪರಿಣಾಮ ಬೀರಿದೆ’ ಎಂದು ರೈತ ಮುತ್ತಪ್ಪ ನೋವು ತೋಡಿಕೊಳ್ಳುತ್ತಾರೆ.  

‘ಜುಲೈನಲ್ಲಿ ಎರಡನೇ ವಾರದಲ್ಲಿ ಭತ್ತದ ಸಸಿ ನಾಟಿ ಮಾಡಿದರೆ ಮಾತ್ರ ನಿಗದಿತ ಅವಧಿಯಲ್ಲಿ ಭತ್ತವು ಕೊಯ್ಲಿಗೆ ಬರಲಿದೆ. ವಿಳಂಬವಾದರೆ ಭತ್ತದ ಕದಿರು ಬರುವಾಗ ನೀರಿನ ಕೊರತೆ ಎದುರಾಗಲಿದೆ’ ಎಂದು ಮೂರ್ನಾಡು ಭಾಗದ ರೈತರು ಹೇಳುತ್ತಿದ್ದು, ‘ಮಳೆ ಬರದಿದ್ದರೆ ಗದ್ದೆಗಳನ್ನು ಪಾಳು ಬಿಡಲೂ ಆಲೋಚಿಸಿದ್ದೇವೆ’ ಎನ್ನುತ್ತಾರೆ ಅವರು.

ಜಲಪಾತಗಳಲ್ಲೂ ನೀರಿಲ್ಲ...:

ಅಬ್ಬಿ, ಮಲ್ಲಳ್ಳಿ, ಇರ್ಫು ಸೇರಿದಂತೆ ಹಲವು ಜಲಪಾತಗಳು ಕೊಡಗಿನಲ್ಲಿವೆ. ಮಳೆಗಾಲದಲ್ಲಿ ಅವೆಲ್ಲವೂ ಮೈದುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು. ಮಡಿಕೇರಿಯಲ್ಲಿ ಮಳೆ ಸುರಿದ ಕೂಡಲೇ ಅಬ್ಬಿ ಜಲಪಾತವು ಹಾಲ್ನೊರೆಯಂತೆ ಧುಮ್ಮಿಕ್ಕಲು ಆರಂಭಿಸುತ್ತಿತ್ತು. ನಿರೀಕ್ಷಿತ ಮಳೆಯಾಗದೇ ಅಬ್ಬಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿಲ್ಲ. ಇನ್ನು ಮಲ್ಲಳ್ಳಿ ಜಲಪಾತವು ಸೊರಗಿದೆ. ಇರ್ಫು ಸಹ ಪ್ರವಾಸಿಗರಿಗೆ ಮುದ ನೀಡುತ್ತಿಲ್ಲ. ಹೀಗಾಗಿ, ಪ್ರವಾಸಿಗರು ಸಂಖ್ಯೆ ಕಡಿಮೆಯಿದೆ.

2018ರಲ್ಲಿ ಮಳೆ ಹೆಚ್ಚಾದ ಪರಿಣಾಮ ಅಬ್ಬಿ, ಇರ್ಫು ಹಾಗೂ ಮಲ್ಲಳ್ಳಿ ಜಲಾಶಯಕ್ಕೆ ಒಂದುವಾರದ ಮಟ್ಟಿಗೆ ಪ್ರವಾಸಿಗರಿಗೆ ಪ್ರವೇಶವನ್ನೇ ನಿರ್ಬಂಧಿಸಲಾಗಿತ್ತು. ಅಷ್ಟರ ಮಟ್ಟಿಗೆ ಮಳೆ ಆರ್ಭಟಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !