ಸೋಮವಾರ, ಮೇ 10, 2021
19 °C
ರಾಜ್ಯದ ಎಂಟು ಮಂದಿಗೆ ಪದ್ಮಶ್ರೀ ಪುರಸ್ಕಾರ

ವಿಶ್ವೇಶತೀರ್ಥರಿಗೆ ಪದ್ಮವಿಭೂಷಣ: ರಾಜ್ಯದ ಎಂಟು ಮಂದಿಗೆ ಪದ್ಮಶ್ರೀ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇತ್ತೀಚೆಗೆ ನಿಧನರಾದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ (ಅಧ್ಯಾತ್ಮ) ಹಾಗೂ ಕೇಂದ್ರದ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ಸೇರಿದಂತೆ ಒಟ್ಟು ಏಳು ಮಂದಿಯನ್ನು ದೇಶದ ಉನ್ನತ ನಾಗರಿಕ ಗೌರವವಾದ ‘ಪದ್ಮವಿಭೂಷಣ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಮೂಲದ ಈ ಇಬ್ಬರ ಜತೆಗೆ ಕೇಂದ್ರದ ಮಾಜಿ ಸಚಿವರಾದ ಅರುಣ್‌ ಜೇಟ್ಲಿ ಹಾಗೂ ಸುಷ್ಮಾಸ್ವರಾಜ್‌ ಅವರಿಗೂ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇವರಲ್ಲದೆ ಕ್ರೀಡಾಪಟು ಮೇರಿಕೋಮ್‌, ಉತ್ತರಪ್ರದೇಶದ ಕಲಾವಿದ ಛನ್ನುಲಾಲ್‌ ಮಿಶ್ರಾ ಹಾಗೂ ಮಾರಿಷಸ್‌ನ ರಾಜಕಾರಣಿ ಅನಿರುದ್ಧ ಜಗನ್ನಾಥ್‌ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ 16 ಮಂದಿಯನ್ನು ಪದ್ಮಭೂಷಣ ಪ್ರಶಸ್ತಿ ಹಾಗೂ 118 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರಲ್ಲಿ 8 ಮಂದಿ ಕರ್ನಾಟಕದವರಿದ್ದಾರೆ.

ಪದ್ಮಭೂಷಣ ಪ್ರಶಸ್ತಿಗೆ ರಾಜ್ಯದ ಯಾರೂ ಆಯ್ಕೆಯಾಗಿಲ್ಲ. ರಾಷ್ಟ್ರಪತಿಭವನದಲ್ಲಿ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಅವರೇ ಈ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.‘

‘ಅಕ್ಷರ ಸಂತ’ ಹರೇಕಳ ಹಾಜಬ್ಬ

ಮಂಗಳೂರು: ಹರೇಕಳ ನಿವಾಸಿ ಹಾಜಬ್ಬ (64) ನಿತ್ಯವೂ 25 ಕಿ.ಮೀ. ದೂರದ ಮಂಗಳೂರಿಗೆ ಬಂದು ತಲೆಯ ಮೇಲೆ ಬುಟ್ಟಿಯಲ್ಲಿ ಕಿತ್ತಳೆ ಹಣ್ಣು ಮಾರುತ್ತಾ ಅದರಿಂದ ಗಳಿಸಿದ ಹಣದಲ್ಲಿ ಶಾಲೆ ಕಟ್ಟಿದವರು.

‘ಅಕ್ಷರ ಸಂತ’ ಎಂದೇ ಖ್ಯಾತಿಯಾದವರು. ಅಕ್ಷರ ಕಲಿಯದ ಕಾರಣದಿಂದ ವಿದೇಶಿ ಪ್ರವಾಸಿಗರಿಗೆ ಕಿತ್ತಳೆ ಹಣ್ಣು ಮಾರಲಾಗದ ಸ್ಥಿತಿಯಿಂದ ಎಚ್ಚೆತ್ತು ಭವಿಷ್ಯದ ಪೀಳಿಗೆಗಾಗಿ ಶಾಲೆ ಆರಂಭಿಸಿದರು. ಈಗ ಅದು ಸರ್ಕಾರಿ ಶಾಲೆಯಾಗಿ ಬದಲಾಗಿದೆ.

ಪ್ರಶಸ್ತಿಯ ಮಾಹಿತಿ ನೀಡಲು ಅಧಿಕಾರಿಗಳು ಕರೆ ಮಾಡಿದ ಸಮಯದಲ್ಲಿ ಹಾಜಬ್ಬ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಸಾಲಿನಲ್ಲಿ ನಿಂತಿದ್ದರು.

ವಾಹನ ಉದ್ಯಮ ಸಾಧನೆಗೆ ಗೌರವ

ಹುಬ್ಬಳ್ಳಿ: ವಿಆರ್‌ಎಲ್‌ ಸಮೂಹ ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ವಿಜಯ ಸಂಕೇಶ್ವರ ಗದುಗಿನಲ್ಲಿ 1950 ಆ.2 ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದಿದ್ದಾರೆ. ವಿಆರ್‌ಎಲ್‌ ಖಾಸಗಿ ವಲಯದಲ್ಲಿ ಅತಿ ಹೆಚ್ಚು ವಾಹನಗಳನ್ನು ಹೊಂದಿರುವ ಏಕ ಮಾಲೀಕತ್ವದ ಕಂಪನಿ ಎಂದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಸರಕು ಸಾಗಣೆ, ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದರು. ವಿಧಾನ ಪರಿಷತ್‌ ಸದಸ್ಯರೂ ಆಗಿದ್ದರು. 

‘ಇದು ಸಂಸ್ಕೃತ ಪತ್ರಿಕೆಗೆ ಸಂದ ಗೌರವ’

ಮೈಸೂರು: ಸಂಸ್ಕೃತ ಭಾಷೆಯ ಏಕೈಕ ಪತ್ರಿಕೆ ಎನಿಸಿಕೊಂಡಿರುವ ‘ಸುಧರ್ಮ’ದ 50ನೇ ವರ್ಷಾಚರಣೆ ಸಂದರ್ಭದಲ್ಲೇ ಇದರ ಸಂಪಾದಕರಾದ ಕೆ.ವಿ.ಸಂಪತ್‌ ಕುಮಾರ್ ಹಾಗೂ ಅವರ ಪತ್ನಿ ಕೆ.ಎಸ್‌.ಜಯಲಕ್ಷ್ಮಿ ಅವರಿಗೆ ‘ಪದ್ಮಶ್ರೀ’ ಒಲಿದು ಬಂದಿದೆ.

‘ಇದು ಪತ್ರಿಕೆಗೆ ಸಂದ ಗೌರವ. ಪತ್ರಿಕೆ ಶುರು ಮಾಡಿದ ತಂದೆಗೆ ಸಂದ ಗೌರವ. ಅವರು ಕಟ್ಟಿದ್ದನ್ನು ನಾವು ಮುನ್ನಡೆಸಿಕೊಂಡು ಬಂದಿದ್ದೇವೆ ಅಷ್ಟೆ. ನಾವು ತುಂಬಾ ಚಿಕ್ಕವರು’ ಎಂದು 63 ವಯಸ್ಸಿನ ಸಂಪತ್‌ ಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಿರೀಕ್ಷೆ ಇರಲಿಲ್ಲ: ‘ನಮ್ಮಂಥವರಿಗೆ ಯಾರು ಪ್ರಶಸ್ತಿ ಕೊಡುತ್ತಾರೆ? ಈ ಪ್ರಶಸ್ತಿ ಪಡೆಯಲು ತುಂಬಾ ದೊಡ್ಡವರು ಇದ್ದಾರೆ. ಹೀಗಾಗಿ, ಯಾವುದೇ ನಿರೀಕ್ಷೆ ಕೂಡ ಇಟ್ಟುಕೊಂಡಿರಲಿಲ್ಲ’ ಎಂದು ವಿದುಷಿ ಜಯಲಕ್ಷ್ಮಿ ನುಡಿದರು.

52 ವರ್ಷ ವಯಸ್ಸಿನ ಜಯಲಕ್ಷ್ಮಿ ಅವರು ಸಂಸ್ಕೃತದಲ್ಲಿ ಎಂ.ಎ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರಿನ ಇವರು ವಿವಾಹದ ಬಳಿಕ ಮೈಸೂರಿಗೆ ಬಂದರು.

‘ಟ್ಯಾಲಿ’ ಜನಕ ಭರತ್‌ ಗೋಯೆಂಕಾ

ಭರತ್‌ ಗೋಯೆಂಕಾ ಅವರು ‘ಟ್ಯಾಲಿ’ ಸಲ್ಯೂಷನ್‌ನ ವ್ಯವಸ್ಥಾಪಕ ನಿರ್ದೇಶಕ. ಬಿಜಿನೆಸ್‌ ಅಕೌಂಟಿಂಗ್‌ ತಂತ್ರಾಂಶ ತಯಾರಿಸುವ ದೇಶದ ಬಹುದೊಡ್ಡ ಕಂಪನಿ. ಬೆಂಗಳೂರಿನ ಈ ಕಂಪನಿ ವಿಶ್ವದಲ್ಲಿ 10.60 ಲಕ್ಷ ಗ್ರಾಹಕರನ್ನೂ ಹೊಂದಿದೆ. ಭರತ್‌ ಗಣಿತದ ವಿಷಯದಲ್ಲಿ ಪದವೀಧರರಾಗಿದ್ದು, ಅಕೌಂಟೆನ್ಸಿ ವಿಷಯದಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಬಗ್ಗೆ ಕನಸು ಕಂಡಿದ್ದರು. ಅದಕ್ಕೆ ಪೂರಕವಾಗಿ ಅವರ ತಂದೆ 1984 ರಲ್ಲಿ ಐಬಿಎಂ ಪರ್ಸನಲ್‌ ಕಂಪ್ಯೂಟರ್‌ ತರಿಸಿಕೊಟ್ಟಿದ್ದರು. ಇವರು ‘ದ ಅಕೌಂಟೆಂಟ್‌’ ಎಂಬ ತಂತ್ರಾಂಶ ಅಭಿವೃದ್ಧಿ
ಪಡಿಸಿದರು. ಬಳಿಕ ಟ್ಯಾಲಿ ಎಂದು ಪುನರ್‌ ನಾಮಕರಣ ಮಾಡಿದರು.

ಅರಣ್ಯ ರಕ್ಷಣೆಗೆ ‘ತುಳಸಿ’ ಕೊಡುಗೆ

ಕಾರವಾರ: ಮರಗಿಡಗಳನ್ನೇ ಮಕ್ಕಳಂತೆ ಕಾಣುವ ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಈ ಸಾಲಿನ ಪದ್ಮಶ್ರೀಗೆ
ಭಾಜನರಾಗಿದ್ದಾರೆ.

ಅವರಿಗೀಗ 72ರ ಹರೆಯ. ಬೆಳೆಸಿದ ಮರಗಳ ಸಂಖ್ಯೆ 40 ಸಾವಿರ!: ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಯ ಪುತ್ರಿ. ತುಳಸಿ, ಗೋವಿಂದೇ ಗೌಡ ಅವರನ್ನು ಮದುವೆಯಾದರು. ಪತಿಯ ಮರಣದ ನಂತರ ಕಾಡಿನ ಸಂರಕ್ಷಣೆಗೆ ಮುಂದಾದರು. ನೆಟ್ಟ ಸಸಿಯ ಜಾತಿ, ಉಪಯೋಗ, ಬೇಕಾಗುವ ನೀರಿನ ಪ್ರಮಾಣ ಹೀಗೆ ಎಲ್ಲ ಮಾಹಿತಿಯನ್ನೂ ನೀಡಬಲ್ಲರು.

ವೈದ್ಯ ಸೇವೆಗೆ ಗೌರವ 

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನಿರ್ದೇಶಕರಾಗಿ ಡಾ.ಬಿ.ಎನ್‌.ಗಂಗಾಧರ್‌ ಅವರು 2016ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನವರಾಗಿರುವ ಅವರು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ 38 ವರ್ಷಗಳ ಅನುಭವ ಪಡೆದಿದ್ದಾರೆ. 1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದ ಅವರು, 1981 ರಲ್ಲಿ ಅದೇ ಸಂಸ್ಥೆಯಲ್ಲಿ ಎಂ.ಡಿ ಸೈಕಿಯಾಟ್ರಿ ಮುಗಿಸಿದರು. 1982ರಲ್ಲಿ ನಿಮ್ಹಾನ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯಾರಂಭಿಸಿದರು. 2006 ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ (ಎಫ್ಎಎಂಎಸ್) ಪದವಿ ಪಡೆದರು. 2012ರಲ್ಲಿ ‘ಯೋಗ ಮತ್ತು ಮಾನಸಿಕ ಆರೋಗ್ಯ’ ಎಂಬ ಅವರ ಸಂಶೋಧನಾ ಪ್ರಬಂಧಕ್ಕೆ ಎಸ್‌.ವ್ಯಾಸ ಯೋಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಸಂಸ್ಥೆಯಲ್ಲಿ ವೈದ್ಯಕೀಯ ಅಧೀಕ್ಷಕ, ವಿಭಾಗಗಳ ಮುಖ್ಯಸ್ಥ, ಡೀನ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಿರ್ದೇಶಕ ಹುದ್ದೆಗೆ ಏರಿದರು. ಅವರು 50ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದು, 400ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸರ್‌.ಸಿ.ವಿ.ರಾಮನ್ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು