ಭಾನುವಾರ, ಫೆಬ್ರವರಿ 23, 2020
19 °C
ಕೇರಳ ಮಾದರಿಯಲ್ಲಿ ಉಪಶಾಮಕ ಚಿಕಿತ್ಸೆ ವಿಸ್ತರಿಸಲು ಮುಂದಾದ ಆರೋಗ್ಯ ಇಲಾಖೆ

ಕೊನೆಯ ದಿನಗಳಲ್ಲಿ ಮನೆಯಲ್ಲಿಯೇ ಆರೈಕೆ

ವರುಣ್ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬದುಕಿನ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿ ನೋವಿನೊಂದಿಗೆ ಕಳೆಯುತ್ತಿರುವವರಿಗೆ ಮನೆಯಲ್ಲಿಯೇ ಉಪಶಾಮಕ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಆರಂಭಿಸಿದೆ. ಇದರಿಂದಾಗಿ ರೋಗಿಗಳು ಅಂತಿಮ ದಿನಗಳನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯುವ ಅವಕಾಶ ಸಿಗಲಿದೆ.

ಕ್ಯಾನ್ಸರ್‌, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶ ಮತ್ತು ಮೂತ್ರಪಿಂಡ ಸಮಸ್ಯೆ, ಎಚ್‌ಐವಿ ಸೇರಿದಂತೆ ವಿವಿಧ ಅಸಾಂಕ್ರಾಮಿಕ ಕಾಯಿಲೆಗಳನ್ನು ಮಾರಣಾಂತಿಕ ಎಂದು ಗುರುತಿಸಲಾಗಿದೆ. ಕೊನೆಯ ಹಂತದಲ್ಲಿ ಈ ಕಾಯಿಲೆ ಪತ್ತೆಯಾದಲ್ಲಿ ರೋಗಿಗಳು ಉಳಿಯುವ ಸಾಧ್ಯತೆ ಕಡಿಮೆ ಎನ್ನುವುದು ವೈದ್ಯರ ಅಭಿಮತ. ಆದ್ದರಿಂದ ಚಿಕಿತ್ಸೆ ಫಲಿಸುವುದಿಲ್ಲ ಎನ್ನುವುದು ಖಚಿತವಾಗಿರುವಂತಹ ರೋಗಿಗಳು ಕೊನೆಯ ದಿನಗಳನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯಬೇಕೆಂಬ ಉದ್ದೇಶದಿಂದ ಉಪಶಾಮಕ ಚಿಕಿತ್ಸೆಯನ್ನು ಪರಿಚಯಿಸಲಾಗಿದೆ. ಈ ಚಿಕಿತ್ಸೆಯಿಂದ ರೋಗಿಗಳಿಗೆ ಕಾಯಿಲೆಯ ನೋವು ಅಷ್ಟಾಗಿ ಬಾಧಿಸುವುದಿಲ್ಲ.

ಸದ್ಯ ಬೆಂಗಳೂರು ನಗರ ಜಿಲ್ಲೆಯೂ ಸೇರಿದಂತೆ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯವಿದೆ. ಈ ಸೇವೆಯನ್ನು ಮನೆಗಳಿಗೆ ವಿಸ್ತರಿಸಲು ಇಲಾಖೆ ಮುಂದಾಗಿದೆ. ಈಗಾಗಲೇ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಈ ಚಿಕಿತ್ಸೆಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಕೇರಳದಲ್ಲಿ ಮನೆಯಲ್ಲಿಯೇ ಉಪಶಾಮಕ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಅದೇ ಮಾದರಿಯನ್ನು ಅನುಸರಿಸಲು ಇಲಾಖೆ ನಿರ್ಧರಿಸಿದೆ.

ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಿಗೆ ಈ ಚಿಕಿತ್ಸೆಯನ್ನು ವಿಸ್ತರಿಸಲಾಗುತ್ತದೆ. ಅಲ್ಲಿಯೇ ರೋಗಿಯ ಕುಟುಂಬದ ಸದಸ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಉಪಶಾಮಕ ಚಿಕಿತ್ಸೆ ಅಗತ್ಯ ಇರುವವರ ಮನೆಗೆ ತೆರಳಿ, ಆರೈಕೆ ಮಾಡಲಿದ್ದಾರೆ. 

‘ಶೇ 63 ರಷ್ಟು ರೋಗಿಗಳು ಅಸಾಂಕ್ರಾಮಿಕ ರೋಗಗಳಿಂದಾಗಿಯೇ ಮರಣ ಹೊಂದುತ್ತಿದ್ದಾರೆ. ಅಸಾಂಕ್ರಾಮಿಕ ರೋಗಗಳ ಚಿಕಿತ್ಸಾ ಕಾರ್ಯಕ್ರಮ ಆರಂಭಿಸಿ 10 ವರ್ಷಗಳಾಗಿವೆ. 2030ರೊಳಗೆ ಅಕಾಲಿಕ ಮರಣದ ಪ್ರಮಾಣವನ್ನು ಮೂರನೇ ಒಂದರಷ್ಟು ಕಡಿಮೆ ಮಾಡಬೇಕು. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು, ನಗರ ಪ್ರದೇಶದ ಜನತೆಗೆ ಈ ಚಿಕಿತ್ಸೆ ದೊರೆಯುತ್ತಿದೆ. ಆದರೆ, ಗ್ರಾಮೀಣ ಭಾಗದ ರೋಗಿಗಳು ಮನೆಯಲ್ಲಿಯೇ ನರಳಬೇಕಾಗಿದೆ. ಹಾಗಾಗಿ, ಸೇವೆ ವಿಸ್ತರಿಸಲು ಮುಂದಾಗಿದ್ದೇವೆ’ ಎಂದು ಇಲಾಖೆಯ ಉಪನಿರ್ದೇಶಕ ಡಾ. ರಂಗಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹಾಸಿಗೆಯಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿರುವ ರೋಗಿಗಳು ಕುಟುಂಬಕ್ಕೆ ಹೊರೆ ಆಗಬಾರದು. ಈ ಚಿಕಿತ್ಸೆ ಉಚಿತವಾಗಿರುತ್ತದೆ’ ಎಂದರು.

‘ಕೇರಳದಲ್ಲಿ ಮನೆಯಲ್ಲೇ ಉಪಶಾಮಕ ಚಿಕಿತ್ಸೆ ನೀಡುವ ಕಾರ್ಯಕ್ರಮ ವಿಸ್ತರಿಸಲು ಸರ್ಕಾರಕ್ಕೆ ಸಂಘ–ಸಂಸ್ಥೆಗಳು ನೆರವಾಗಿವೆ. ಇದೇ ಮಾದರಿಯಲ್ಲಿ ನಮ್ಮಲ್ಲಿಯೂ ಸೇವೆ ವಿಸ್ತರಿಸಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)