ಎಸ್‌ಎಸ್‌ಎಲ್‌ಸಿ ಆದವರಿಂದ ಪಂಚಾಯ್ತಿ ಆಡಿಟ್‌ !

7
ಹೌಹಾರಿದ ಸಚಿವ ಕೃಷ್ಣ ಬೈರೇಗೌಡ

ಎಸ್‌ಎಸ್‌ಎಲ್‌ಸಿ ಆದವರಿಂದ ಪಂಚಾಯ್ತಿ ಆಡಿಟ್‌ !

Published:
Updated:

ಬೆಂಗಳೂರು: ನಂಬಿದರೆ ನಂಬಿ ಬಿಟ್ಟರೆ ಬಿಡಿ; ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾಡಿರುವವರು ಗ್ರಾಮ ಪಂಚಾಯ್ತಿಗಳ ಆಡಿಟಿಂಗ್‌ ಮಾಡುತ್ತಾರೆ !

ವಿಧಾನಪರಿಷತ್ತಿನಲ್ಲಿ ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೃಷ್ಣ ಬೈರೇಗೌಡ ಹೌಹಾರಿದರು. ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್‌ ಈ ವಿಷಯವನ್ನು ಸಚಿವರ ಗಮನಕ್ಕೆ ತಂದಾಗ ಇತರ ಸದಸ್ಯರೂ ಬೆರಗಾದರು. ತಕ್ಷಣವೇ ತಲೆ ಮೇಲೆ ಕೈ ಇಟ್ಟ ಸಚಿವರು, ‘ಎಸ್‌ಎಸ್‌ಎಲ್‌ಸಿ, ಪಿಯುಸಿ ಆದವರು ಏನು ಆಡಿಟ್‌ ಮಾಡುತ್ತಾರೆ. ಕನಿಷ್ಟ ಲೆಕ್ಕಪತ್ರ ನೋಡುವ ಜ್ಞಾನ ಇರಬೇಕಲ್ಲ. ಇಂತಹವರು ಏನು ಲೆಕ್ಕ ನೋಡುತ್ತಾರೆ’ ಎಂದು ಪ್ರಶ್ನಿಸಿದರು.

‘ಈ ವಿಷಯ ನನಗೆ ಗೊತ್ತಿರಲಿಲ್ಲ. ಗಮನಕ್ಕೆ ತಂದದ್ದು ಒಳ್ಳೆಯದೇ ಆಯಿತು. ಯಾಕೆ ಈ ರೀತಿ ಆಗಿದೆ ನೋಡುತ್ತೇನೆ. ಆಡಿಟಿಂಗ್‌ ಜ್ಞಾನ ಇದ್ದವರಿಂದಲೇ ಆ ಕೆಲಸ ಮಾಡಿಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಆಡಿಟಿಂಗ್‌ ಅನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ಇದರಿಂದ ಇಂತಹವರಿಂದ ಆಡಿಟ್‌ ಮಾಡಿಸಲಾಗುತ್ತಿದೆ ಎಂದು ಪ್ರಾಣೇಶ್‌ ಹೇಳಿದರು.

ರಾಜ್ಯದಲ್ಲಿ 1624 ಗ್ರಾಮ ಪಂಚಾಯಿತಿಗಳಿಗೆ ಪಿಡಿಒ ಮತ್ತು ಕಾರ್ಯದರ್ಶಿಗಳಾಗಿ ಆಯ್ಕೆಯಾದವರಿಗೆ ಆದೇಶ ಪತ್ರಗಳನ್ನು ನೀಡಲಾಗುವುದು. ಆದೇಶ ನೀಡಿದ ಬಳಿಕ ತರಬೇತಿ ನೀಡಿ 2– 3 ತಿಂಗಳಲ್ಲಿ ಪಂಚಾಯತ್‌ಗಳಿಗೆ ಕಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

 815 ಪಿಡಿಒಗಳು ಮತ್ತು 809 ಕಾರ್ಯದರ್ಶಿಗಳ ನೇಮಕ ಆಗುತ್ತಿದೆ. ಅಲ್ಲದೆ, ಎಲ್ಲ ಗ್ರಾಮ ಪಂಚಾಯಿತಿಗಳ ಡೆಟಾ ಎಂಟ್ರಿ ಆಪರೇಟರ್‌ಗಳ ನೇರ ನೇಮಕಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ನೇಮಕದಲ್ಲಿ ರೋಸ್ಟರ್‌ ಪಾಲನೆ ಮಾಡಲು ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !