ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಪರ್ ಟೈಗರ್ ರೇರಾ: ಬಗ್ಗದ ರಿಯಲ್ ಎಸ್ಟೇಟ್

ಹಲ್ಲು ಕಿತ್ತ ಹಾವಾದ ಪ್ರಾಧಿಕಾರ‌ * ಅಸಹಾಯಕ ಸ್ಥಿತಿಯಲ್ಲೇ ಗ್ರಾಹಕ
Last Updated 15 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್‌ ಎಸ್ಟೇಟ್‌ ಮಾಫಿಯಾ ಅಕ್ರಮಗಳಿಂದ ಬೇಸತ್ತ ಗ್ರಾಹಕರಿಗೆ ಕಾರ್ಗತ್ತಲ ಕೋಲ್ಮಿಂಚಿನಂತೆ ಕಂಡಿದ್ದು ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ). ಎರಡು ವರ್ಷದ ಹಿಂದೆ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಾಗ ‘ನಮ್ಮ ಬವಣೆಗಳಿಗೆ ಇನ್ನಾದರೂ ನ್ಯಾಯ ಸಿಕ್ಕೀತು’ ಎಂದು ಸಾವಿರಾರು ಮಂದಿ ನಿಟ್ಟುಸಿರು ಬಿಟ್ಟಿ ದ್ದರು. ಆದರೆ, ವಂಚನೆ ವಿರುದ್ಧ ಸಿಡಿ ದೆದ್ದು ಕೆ–ರೇರಾ ಬಾಗಿಲು ತಟ್ಟಿದವರಿಗೆ ನ್ಯಾಯ ಮರೀಚಿಕೆಯಾಗೇ ಉಳಿದಿದೆ.

ರಾಜ್ಯದಲ್ಲಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು 2017ರ ಜುಲೈನಲ್ಲಿ. ಈ ವರೆಗೆ 3,500 ಅಧಿಕ ದೂರು ದಾಖಲಾಗಿವೆ. ಕಾಯ್ದೆಯ ಪ್ರಕಾರ 60 ದಿನದಲ್ಲಿ ಪ್ರಾಧಿಕಾರ ಪ್ರಕರಣ ಇತ್ಯರ್ಥ ಮಾಡಬೇಕು. ಪ್ರಾಧಿಕಾರದ ಆದೇಶದ ವಿರುದ್ಧ ಬಿಲ್ಡರ್‌ಗಳು 60 ದಿನದೊಳಗೆ ಮೇಲ್ಮನವಿ ಸಲ್ಲಿಸಬಹುದು. ಇಲ್ಲದಿದ್ದರೆ ಆದೇಶ ಪಾಲನೆ ಮಾಡಬೇಕು. ಆದರೆ, ಪ್ರಾಧಿಕಾರವು 60 ದಿನಗಳಲ್ಲಿ ದೂರು ಇತ್ಯರ್ಥಪಡಿಸಿ ನ್ಯಾಯಕೊಡಿಸಿದ ಒಂದೇ ಒಂದು ಉದಾಹರಣೆಯೂ ಇಲ್ಲ. 2017ರ ಆಗಸ್ಟ್‌ನಲ್ಲಿ ದಾಖಲಾದ ದೂರುಗಳ ವಿಚಾರಣೆ ಈಗಲೂ ನಡೆಯುತ್ತಿದೆ. ವಿಚಾರಣೆಗಾಗಿ ಹತ್ತಾರು ಬಾರಿ ಅಲೆದಾಡಿರುವ ದೂರುದಾರರು ಹೈರಾಣಾಗಿದ್ದಾರೆ.

ಇನ್ನಷ್ಟು ‘ಒಳನೋಟ’ ವಿಶೇಷ ವರದಿಗಳನ್ನು ಓದಲುಈ ಲಿಂಕ್ ಕ್ಲಿಕ್ ಮಾಡಿ:https://www.prajavani.net/tags/olanota

ರೇರಾ ಪ್ರಕಾರ ‘ಖರೀದಿ ಒಪ್ಪಂದ ಪತ್ರ’ (ಅಗ್ರಿಮೆಂಟ್‌ ಆಫ್‌ ಸೇಲ್‌) ಪ್ರಮುಖ ದಾಖಲೆ. ಇದರಲ್ಲಿ ಏನೆಲ್ಲ ಅಂಶಗಳಿರಬೇಕು ಎಂದು ವಿವರಿಸುವ ಕರಡು ಸಿದ್ಧವಾಗಿದೆ. ಅದಕ್ಕೆ ರಾಜ್ಯ ಸಚಿವ ಸಂಪುಟದ ಅನುಮತಿ ಇನ್ನೂ ಸಿಕ್ಕಿಲ್ಲ. ಕೇಂದ್ರ ಸರ್ಕಾರ ನೀಡಿರುವ ಮಾದರಿ ನಮೂನೆಯನ್ನೇ ಬಳಸಿಕೊಳ್ಳಲು ಅನುಮತಿ ನೀಡಿದರೂ ಸಾಕು. ಆದರೆ, ಬಿಲ್ಡರ್‌ಗಳ ಲಾಬಿಗೆ ಮಣಿದಂತಿರುವ ರಾಜ್ಯ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ ಎಂಬುದು ರೇರಾ ಹೋರಾಟಗಾರರ ದೂರು.

‘ಖರೀದಿ ಒಪ್ಪಂದ ಪತ್ರ ಕುರಿತು ಸರ್ಕಾರ ಸ್ಪಷ್ಟ ನಿಲುವು ತಳೆಯಲೇ ಬೇಕು. ಬೇರೆ ರಾಜ್ಯಗಳಲ್ಲೂ ಗೊಂದಲಗಳಿದ್ದವು. ಅವುಗಳನ್ನು ಅನೇಕ ರಾಜ್ಯಗಳು ಈಗಾಗಲೇ ನಿವಾರಿಸಿವೆ’ ಎನ್ನುತ್ತಾರೆ ಹೋರಾಟಗಾರರು.

ಇತ್ತೀಚಿನ ವರ್ಷಗಳಲ್ಲಿ ಹುಬ್ಬಳ್ಳಿ, ಮೈಸೂರು, ಮಂಗಳೂರು, ದಾವಣಗೆರೆಯಂತಹ ಎರಡನೇ ಹಂತದ ನಗರಗಳಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ವ್ಯಾಪಕವಾಗಿ ಬೆಳೆದಿದೆ. ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ವಸತಿ ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಆದರೆ, ರೇರಾದಲ್ಲಿ ನೋಂದಣಿಯಾಗಿದ್ದು 3,200 ಮಾತ್ರ. ನೋಂದಣಿಯಾಗದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವ ಧೈರ್ಯವನ್ನು ಪ್ರಾಧಿಕಾರ ತೋರಿಲ್ಲ.

ಮನೆ ನಿರ್ಮಾಣ ತಡವಾದರೆ, ವಿಳಂಬದ ಅವಧಿಗೆ ಡೆವೆಲಪರ್‌ಗಳು ಮನೆ ಮಾರಾಟವಾದ ಮೊತ್ತಕ್ಕೆ ವಾರ್ಷಿಕ ಶೇ 10.75ರಂತೆ ಬಡ್ಡಿಯನ್ನು ಗ್ರಾಹಕರಿಗೆ ಕೊಡಬೇಕಾಗುತ್ತದೆ. ಪ್ರಾಧಿಕಾರದ ನ್ಯಾಯನಿರ್ಣಯ ಅಧಿಕಾರಿ ಈ ಕುರಿತು ಆದೇಶ ನೀಡಿದರೂ ಬಿಲ್ಡರ್‌ಗಳು ಗ್ರಾಹಕರಿಗೆ ದುಡ್ಡು ಕೊಡುತ್ತಿಲ್ಲ. ಇಂಥಹ ಪ್ರಕರಣಗಳಲ್ಲಿ ವಸೂಲಿ ಆದೇಶವನ್ನು ರೇರಾ ನೀಡಿ ಅದನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಕೈತೊಳೆದುಕೊಳ್ಳುತ್ತಿದೆ. ಆದರೆ, ಆ ಆದೇಶಗಳು ಜಾರಿಯಾಗುತ್ತಿಲ್ಲ. ಇದಕ್ಕಡ ಯಾರನ್ನು ಹೊಣೆ ಮಾಡಬೇಕು ಎಂಬ ಗೊಂದಲ ಎದುರಾಗಿದೆ.

ಸ್ಥಳೀಯ ನಗರಾಡಳಿತ ನೀಡುವ ಯೋಜನಾ ಮಂಜೂರಾತಿಯ ಅವಧಿ 5 ವರ್ಷಕ್ಕೆ ಸೀಮಿತ. ಡೆವೆಲಪರ್‌ಗಳು 5 ವರ್ಷಗಳ ಒಳಗೆ ಯೋಜನೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಮಂಜೂರಾತಿಯನ್ನು ನವೀಕರಿಸಬೇಕು. ಬೆರಳೆಣಿಕೆ ಸಂಸ್ಥೆಗಳಷ್ಟೇ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುತ್ತಿವೆ. ವಿಳಂಬವಾದರೂ ಮಂಜೂರಾತಿಯನ್ನು ನವೀಕರಿ ಸುವುದೇ ಇಲ್ಲ.

‘ನಗರದಲ್ಲಿ 10 ಗ್ರಾಹಕರನ್ನು ಮಾತನಾಡಿಸಿದರೆ, ಒಬ್ಬರಾದರೂ ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಂದ ವಂಚನೆಗೆ ಒಳಗಾಗಿರುವುದು ಕಂಡುಬರುತ್ತದೆ. ಇಂತಹವರ ಪರ ಪ್ರಾಧಿಕಾರ ನಿಲ್ಲಬೇಕಿತ್ತು. ವಿಚಾರಣೆಗಾಗಿ ಮೈಸೂರು, ಮಂಗಳೂರಿನಿಂದ ದೂರುದಾರರು ಬರುತ್ತಾರೆ. ಪ್ರಾಧಿಕಾರ ವಿಚಾರಣಾ ದಿನಾಂಕ ನಿಗದಿ ಮಾಡಿ ದೂರುದಾರರನ್ನು ಸಾಗ ಹಾಕುತ್ತದೆ. ಬಿಲ್ಡರ್‌ಗಳು ವಿಚಾರಣೆಗೆ ಹಾಜರಾಗುವುದೇ ಕಡಿಮೆ. ಅವರು ತಮ್ಮ ಪರ ವಕೀಲರನ್ನು ಕಳುಹಿಸುತ್ತಾರೆ’ ಎಂದು ರೇರಾ ಹೋರಾಟಗಾರ ಎಂ.ಎಸ್‌.ಶಂಕರ್‌ ಆಕ್ರೋಶ ವ್ಯಕ್ತಪಡಿಸಿದರು.

ನಿಯಮದ ತಪ್ಪು ವ್ಯಾಖ್ಯಾನ

ಮೂಲ ಕಾಯ್ದೆ ಗ್ರಾಹಕಸ್ನೇಹಿಯಾಗಿದೆ. ಆದರೆ, ನಿಯಮ ರೂಪಿಸುವ ವೇಳೆ ರಾಜ್ಯ ಸರ್ಕಾರದಲ್ಲಿದ್ದ ಪ್ರಭಾವಿಗಳು ಅದನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದ್ದಾರೆ. ಪ್ರಾಧಿಕಾರ ಅಸ್ತಿತ್ವಕ್ಕೆ ಬರುವಾಗ ಶೇ 60ರಷ್ಟು ಪೂರ್ಣಗೊಂಡ ಯೋಜನೆಗಳು ರೇರಾ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಮೂಲಕ ಗ್ರಾಹಕರಿಗೂ ತಪ್ಪು ಮಾಹಿತಿ ನೀಡಲಾಯಿತು. ಗ್ರಾಹಕರು ಇದನ್ನೇ ನಂಬಿದರು. ಆದರೆ, ವಾಸ್ತವವೇ ಬೇರೆ. ನಿರ್ಮಾಣದ ಒಳಾಂಗಣ ಹಾಗೂ ಹೊರಾಂಗಣ ಕೆಲಸ ಸಂಪೂರ್ಣಗೊಂಡು, ಶೇ 60ರಷ್ಟು ಮನೆಗಳು ಮಾರಾಟವಾದ ಯೋಜನೆಗಳಷ್ಟೇ ರೇರಾ ವ್ಯಾಪ್ತಿಗೆ ಬರುವುದಿಲ್ಲ ಎಂಬ ಅಂಶ ಮೂಲಕಾಯ್ದೆಯಲ್ಲಿ ಇದ್ದಿದ್ದು. ವಸತಿ ಇಲಾಖೆ ಹಾಗೂ ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಹೀಗೆ ರೇರಾ ನಿಯಮಗಳನ್ನು ಆರಂಭದಲ್ಲೇ ಹಳ್ಳ ಹಿಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT