ಶಿರೂರು ಮಠ: ಮಧ್ಯ ಪ್ರವೇಶ ಮಾಡುವುದಿಲ್ಲ– ಡಾ.ಜಿ.ಪರಮೇಶ್ವರ್

5
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ

ಶಿರೂರು ಮಠ: ಮಧ್ಯ ಪ್ರವೇಶ ಮಾಡುವುದಿಲ್ಲ– ಡಾ.ಜಿ.ಪರಮೇಶ್ವರ್

Published:
Updated:

ಮಂಗಳೂರು: ‘ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದು, ಮಾದಕವಸ್ತು ಪೂರೈಕೆ ಜಾಲದಲ್ಲಿ ಸಕ್ರಿಯವಾಗಿದ್ದ ದಕ್ಷಿಣ ಆಫ್ರಿಕಾದ 107 ಪ್ರಜೆಗಳನ್ನು ಪೊಲೀಸರು ಸೆರೆ ಹಿಡಿದಿದ್ದು, ಶೀಘ್ರದಲ್ಲೇ ಅವರ ದೇಶಕ್ಕೆ ಗಡೀಪಾರು ಮಾಡಲಾಗುವುದು’ ಎಂದು ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಂಗ್ಲಾದೇಶದ ಪ್ರಜೆಗಳೂ ಸೇರಿದಂತೆ ಅಕ್ರಮ ವಲಸಿಗರನ್ನು ಹೊರಹಾಕುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈಗ ಬಂಧಿಸಿರುವ 107 ಮಂದಿಯನ್ನು ವಾಪಸು ಕಳಿಸುವ ಸಂಬಂಧ ದಕ್ಷಿಣ ಆಫ್ರಿಕಾ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿ ಇದ್ದೇವೆ. ರಾಜ್ಯ ಸರ್ಕಾರದ ವೆಚ್ಚದಲ್ಲೇ ಅವರನ್ನು ವಾಪಸು ಕಳಿಸಲಾಗುವುದು. ನಂತರ ಆ ದೇಶದ ರಾಯಭಾರ ಕಚೇರಿಯಿಂದ ವೆಚ್ಚದ ಮೊತ್ತ ಪಡೆಯಲಾಗುವುದು’ ಎಂದರು.

ವೀಸಾ, ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳಿಲ್ಲದೇ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವವರನ್ನು ಪತ್ತೆ ಮಾಡಲಾಗುತ್ತಿದೆ. ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿಯೇ ಇರುವವರ ಪತ್ತೆಗೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.

ಮಧ್ಯ ಪ್ರವೇಶ ಮಾಡುವುದಿಲ್ಲ: ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಸ್ವಾಮೀಜಿ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ಪೊಲೀಸರು ಕೈಗೊಳ್ಳುವ ತೀರ್ಮಾನಗಳಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಪೂಜೆ, ಪುಣ್ಯತಿಥಿಗೆ ಅವಕಾಶ ನೀಡುವ ಸಂಬಂಧ ಪೊಲೀಸರೇ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು.

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರು ಅಧಿಕೃತವಾಗಿ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅನುದಾನ ಕಡಿತವಿಲ್ಲ: ಸಾಲ ಮನ್ನಾ ಕಾರಣದಿಂದ ಯಾವುದೇ ಇಲಾಖೆಗಳಿಗೂ ಅನುದಾನ ಕಡಿತ ಮಾಡುವುದಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯುತ್ತವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಜೆಟ್‌ ಈಗ ಮುಂದುವರಿದಿದೆ. ಹೀಗಾಗಿ ಬಿದಾಯಿ, ಅನ್ನಭಾಗ್ಯ ಸೇರಿದಂತೆ ಯಾವುದೇ ಯೋಜನೆಗಳಿಗೆ ಹಂಚಿಕೆ ಮಾಡಿರುವ ಅನುನಾದಲ್ಲಿ ಬದಲಾವಣೆ ಆಗುವುದಿಲ್ಲ ಎಂದು ಹೇಳಿದರು.

ರೈತರ ಆತ್ಮಹತ್ಯೆ ತಡೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಸಾಲ ಮನ್ನಾ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ಮನ್ನಾ ಯೋಜನೆ ಬೆಂಬಲಿಸಿದ್ದರೆ ರಾಜ್ಯದ ಮೇಲಿನ ಹೊರೆ ತಗ್ಗುತ್ತಿತ್ತು. ಈಗ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಸಾಲ ಮನ್ನಾ ಯೋಜನೆ ಜಾರಿಗೆ ಬರಲಿದೆ ಎಂದರು.

ಶೀಘ್ರದಲ್ಲಿ ವರ್ಗಾವಣೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಆಗಿರುವ ಕಾರಣದಿಂದ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ವಿಳಂಬವಾಯಿತು. ರಾಜ್ಯ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಗಳ ಆಧಾರದಲ್ಲಿ ವರ್ಗಾವಣೆ ಪಟ್ಟಿ ಸಿದ್ಧವಾಗಿದೆ. ಒಂದೆರಡು ದಿನಗಳಲ್ಲಿ ವರ್ಗಾವಣೆ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.

ಮಹಿಳಾ ಕಾನ್‌ಸ್ಟೆಬಲ್‌ಗಳು ಸೀರೆ ಧರಿಸಿಕೊಂಡು ಕೆಲಸ ಮಾಡಲು ಕಷ್ಟವಾಗುತ್ತಿದೆ. ಈ ಕಾರಣದಿಂದ ಎಲ್ಲ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಪ್ಯಾಂಟ್‌ ಮತ್ತು ಷರ್ಟ್ ಧರಿಸಲು ಅವಕಾಶ ನೀಡುವ ಪ್ರಸ್ತಾವ ಇಲಾಖೆ ಮುಂದಿದೆ. ಶೀಘ್ರದಲ್ಲಿ ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.

ಬಿಜೆಪಿಯ ಸಣ್ಣತನ ಪ್ರದರ್ಶನ

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾದ ಎಲ್ಲರೂ ರಾಜ್ಯ ಸರ್ಕಾರದ ಅತಿಥಿಗಳು. ಅವರಿಗೆ ಊಟ, ಉಪಹಾರಾ ವಸತಿ ಒದಗಿಸಿರುವ ವಿಷಯದಲ್ಲಿ ಬಿಜೆಪಿ ಸಣ್ಣತನ ಪ್ರದರ್ಶನ ಮಾಡುತ್ತಿದೆ’ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಸರ್ಕಾರದ ಅತಿಥಿಗಳಿಗೆ ಸರ್ಕಾರವೇ ಊಟ, ಉಪಾಹಾರ, ವಸತಿ ಒದಗಿಸಬೇಕಲ್ಲವೇ? ಆ ಹಣವನ್ನು ಸರ್ಕಾರದ ಖಜಾನೆಯಿಂದ ಭರಿಸಿದರೆ ತಪ್ಪೇನು? ಎಂದು ಪ್ರಶ್ನಿಸಿದ ಅವರು, ಇದರಿಂದ ಬಿಜೆಪಿಯ ಸಣ್ಣತನ ಬಹಿರಂಗವಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !