ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸುಮ ಲೋಕದ ಮಿರಾಕಲ್!

Last Updated 21 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ದುಬೈ ಮಧ್ಯಪ್ರಾಚ್ಯದ ‘ಯುಎಇ’ಯ ಪ್ರಮುಖ ನಗರವಾಗಿದೆ. ಕರ್ನಾಟಕದ ಶೇಕಡಾ 43.58 ವಿಸ್ತೀರ್ಣ (83,600 ಚದರ ಕಿ.ಮೀ) ಹೊಂದಿರುವ ಈ ದೇಶದ ಪ್ರಮುಖ ನಗರವಾಗಿರುವ ದುಬೈ ವಿಸ್ಮಯಕ್ಕೆ ಮತ್ತೊಂದು ಹೆಸರೆಂದರೂ ತಪ್ಪಾಗಲಾರದು. ಆಧುನಿಕತೆಗೆ ಮತ್ತು ಹೊಸತನಕ್ಕೆ ತನ್ನನ್ನು ಒಡ್ಡಿಕೊಂಡು ಬೆರಗಾಗುವ ರೀತಿಯಲ್ಲಿ ಬೆಳೆದಿದೆ.

1960ರ ದಶಕದಲ್ಲಿ ಮತ್ಸ್ಯೋದ್ಯಮವನ್ನು ನೆಚ್ಚಿಕೊಂಡಿದ್ದ ನಗರ ಇಂದು ವಿಶ್ವದ ಅಗ್ರಮಾನ್ಯ ನಗರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ದುಬೈನಲ್ಲಿ ನೆಲೆಸಿರುವ ಕಿರಿಯ ಸಹೋದರನ ಪ್ರೀತಿಪೂರ್ವಕ ಆಹ್ವಾನದ ಮೇರೆಗೆ ಕಳೆದ ಜನವರಿಯಲ್ಲಿ ದುಬೈಗೆ ಭೇಟಿ ನೀಡಿದ್ದೆ. ವಿಮಾನಯಾನದ ದಿನ ಸಂಭ್ರಮ ಮನೆಮಾಡಿತ್ತು.

ಟ್ರಾವೆಲ್ ಎಜನ್ಸಿಯವರು ವ್ಯವಸ್ಥೆ ಮಾಡಿದ್ದ ಕಾರಿನಲ್ಲಿ ಆನಂದರಾವ್ ವೃತ್ತದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣ ತಲಪಿದಾಗ ಬೆಳಗಿನ 6 ಗಂಟೆ. ಸೂರ್ಯ ಇನ್ನೂ ಮೂಡಿರಲಿಲ್ಲ. ಹಿತವಾದ ಚಳಿಯನ್ನನುಭವಿಸುತ್ತಾ ಕಾಫಿ ಗುಟುಕರಿಸುತ್ತಾ ಅಲ್ಲಿ ನೆರೆದಿದ್ದ ಜನಸಾಗರ ನೋಡಿ ದಂಗಾದ್ದೆ. 10 ಗಂಟೆಗೆ ಹಾರಲಿರುವ ನಮ್ಮ ಪುಷ್ಪಕ ವಿಮಾನಕ್ಕೆ ನಿಗದಿ ಪಡಿಸಿದ ದ್ವಾರದ ಬಳಿ ಬಂದು ಕುಳಿತೆ. ವಿಮಾನ ಸರಿಯಾಗಿ ಬೆಳಗಿನ 10.30ಕ್ಕೆ ನಭಕ್ಕೆ ಚಿಮ್ಮಿತು. ತಮ್ಮ ಮಂದಹಾಸದಿಂದ ನಮ್ಮನ್ನು ಮೋಡಿ ಮಾಡಿದ ಗಗನಸಖಿಯರು ನೀಡಿದ ಭೋಜನ ಚಪ್ಪರಿಸುತ್ತಾ ಉದರಕ್ಕೆ ಸೇರಿಸಿದೆ. ಆಗಾಗ ಕಿಟಕಿ ಮೂಲಕ ಹೊರನೋಡುತ್ತ, ಎದುರಿನ ಟಿ.ವಿ. ಪರದೆಯಲ್ಲಿ ಇನ್ನು ಕ್ರಮಿಸಬೇಕಾದ ದೂರ, ಸಮಯ ಗಮನಿಸುತ್ತಾ ಕಾಲ ಕಳೆದೆ.

12.45ಕ್ಕೆ ನಮ್ಮ ಲೋಹದ ಹಕ್ಕಿ ದುಬೈನ ಡೇರಾದಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿಯಿತು. ಎಮಿಗ್ರೇಷನ್ ಮತ್ತು ಬ್ಯಾಗೇಜ್ ಪಡೆದುಕೊಳ್ಳುವ ಕಟ್ಟಡದ ಅಂದ ಮತ್ತು ಶುಚಿತ್ವ ಕಂಡು ದಂಗಾದೆ. ಎಮಿಗ್ರೇಷನ್ ವಿಧಿವಿಧಾನ ಸ್ವಲ್ಪ ಕಠಿಣ ಅಷ್ಟೇ ನಿಖರ. ಅಲ್ಲಿನ ಸಿಬ್ಬಂದಿ ಬಹಳ ಗೌರವದಿಂದ ಸಹಕರಿಸಿದರು. ಕಣ್ಣಿನ ಸ್ಕ್ಯಾನಿಂಗ್ ಮುಖ್ಯ ಘಟ್ಟ. ನಮ್ಮ ವೀಸಾ ಪ್ರತಿಯನ್ನು ಗಣಕವೊಂದು ಶೋಧಿಸಿ ಅದು ನಮ್ಮದೇ ಎಂದು ಖಾತ್ರಿಪಡಿಸಿದ ನಂತರವೇ ನಮ್ಮ ಪಾಸ್‌ಪೋರ್ಟ್‌ನಲ್ಲಿ ಎಮಿಗ್ರೇಷನ್ ಸ್ಟಾಂಪ್‌ ಹಾಕುತ್ತಾರೆ. ನಂತರ ಯುಎಇ ದೇಶ ಪ್ರವೇಶಿಸಲು ನಾವು ಸ್ವತಂತ್ರರು.

ಮಿರಾಕಲ್ ಗಾರ್ಡನ್‌ನಲ್ಲಿ
ಬುರ್ಜ್ ಖಲೀಫಾ, ಮಿರಾಕಲ್ ಗಾರ್ಡನ್, ಡೆಸರ್ಟ್ ಸಫಾರಿ, ಮರೀನಾ, ಗ್ಲೋಬಲ್ ವಿಲೇಜ್ ಹೀಗೆ ಹತ್ತು ಹಲವಾರು ಆಕರ್ಷಣೆಯ ಆಗರ ದುಬೈ ನಗರ. ಪ್ರತಿ ಬಾರಿ ಬಂದಾಗಲೂ ಏನಾದರೂ ಹೊಸ ಆಕರ್ಷಣೆ ನಿಮಗೆ ನೋಡಲು ಸಿಗುತ್ತದೆ. ನನಗಿಷ್ಟವಾದ ಮಿರಾಕಲ್ ಗಾರ್ಡನ್‌ ಕುರಿತು ನಾನೀಗ ಹೇಳ ಹೊರಟಿರುವುದು.

ದುಬೈನ ಅಲ್ ಬರ್ಷಾದ ದಕ್ಷಿಣದಲ್ಲಿರುವ ಮಿರಾಕಲ್ ಗಾರ್ಡನ್‌ನ ಪ್ರವೇಶ ದ್ವಾರವೇ ನಮ್ಮ ಗಮನ ಸೆಳೆಯುತ್ತದೆ. ದೊಡ್ಡ ಆಮೆಯೊಂದನ್ನು ಹೂವಿನಲ್ಲಿ ಶೃಂಗಾರ ಮಾಡಿದ ಪರಿ ಅಚ್ಚರಿ ಮೂಡಿಸುತ್ತದೆ. ಪ್ರವೇಶ ದರ 45 ದಿರಹಮ್ಸ್‌ (ಸುಮಾರು ₹ 800). ರವಿವಾರದಿಂದ ಗುರುವಾರದವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ. ಹಾಗೆಯೇ ವಾರಾಂತ್ಯ ದಿನಗಳಾದ ಶುಕ್ರವಾರ ಮತ್ತು ಶನಿವಾರಗಳಂದು ರಾತ್ರಿ 11ರ ವರೆಗೆ ನೋಡುವ ಅವಕಾಶವಿದೆ. ದುಬೈನಲ್ಲಿ ಶುಕ್ರವಾರ ನಮಗೆ ರವಿವಾರದ ಹಾಗೆ ಪೂರ್ಣ ರಜೆ.


ವಿಮಾನದ ಮೇಲೆ ಪುಷ್ಟಾಲಂಕಾರ

ಪ್ರವೇಶದ ನಂತರ ಯಾವ ಕಡೆ ಹೋಗಬೇಕು ಎನ್ನುವ ಗೊಂದಲ ನಮ್ಮನ್ನು ಕಾಡುತ್ತದೆ. 15 ಅಡಿ ಎತ್ತರದ ಬಾತುಕೋಳಿಗಳನ್ನು ಎರಡು ಬದಿ ಹೂವಿನಿಂದ ಶೃಂಗರಿಸಿದ ಸ್ಥಳದಿಂದ ನನ್ನ ವೀಕ್ಷಣೆ ಆರಂಭಿಸಿದೆ. ಎಲ್ಲೆಡೆ ಆಕರ್ಷಕ ವಿನ್ಯಾಸಗಳ ಹೂವಿನ ಶೃಂಗಾರ ನಮ್ಮ ಮನ ಸೆಳೆದಿತ್ತು. ಕೊಡೆಗಳನ್ನು ಹೂವಿನ ಜೊತೆ ಸೇರಿಸಿ ಸಿಂಗರಿಸಿದ ಕಮಾನುಗಳು ಒಂದೆಡೆಯಾದರೆ, ಹಲವು ಬಣ್ಣಗಳ ಹೂಗಳನ್ನು ಬಳಸಿ ಕ್ರಿಸ್ಮಸ್ ಗಿಡದ ಆಕಾರದಲ್ಲಿ ಮಾಡಿದ ಸಿಂಗಾರ ಮನ ಸೂರೆಗೊಂಡಿತ್ತು.

ಸ್ವಲ್ಪ ಮುಂದೆ ಸಾಗಿದಾಗ ಪುಷ್ಪಕ ವಿಮಾನವೊಂದು ಕಾಣಿಸಿತು. ಅದು ನಿಜವಾಗಿಯೂ ವಿಮಾನವೇ. ಎಮಿರೇಟ್ಸ್‌ನ ವಿಮಾನವನ್ನು ಹೂವಿನಿಂದ ನವವಧು ನಾಚುವ ರೀತಿಯಲ್ಲಿ ಸಿಂಗರಿಸಿದ ರೀತಿಗೆ ವಾವ್‌ ಎನ್ನಲೇಬೇಕಾಯಿತು. ಇಂತಹ ಹಲವು ವಿಸ್ಮಯ ದೃಶ್ಯಗಳು ದುಬೈನ ಮಿರಾಕಲ್ ಗಾರ್ಡನ್‌ನಲ್ಲಿ ನೋಡಲು ಲಭಿಸುತ್ತವೆ. ನೀರೇ ಸಿಗದ ದೇಶದಲ್ಲಿ ಇಂತಹ ಪುಷ್ಪೋದ್ಯಾನವನ್ನು ನಿರ್ಮಿಸಲು ಸಾಧ್ಯವೆ? ಎಂಬ ಪ್ರಶ್ನೆಗೆ ಸಾಧ್ಯ ಎಂದು ಸಾಧಿಸಿ ತೋರಿಸಿದ ಹೆಗ್ಗಳಿಕೆ ದುಬೈರಿಗರದ್ದು.


ಮಿರಾಕಲ್ ಗಾರ್ಡನ್‌ನ ಒಂದು ವೈಮಾನಿಕ ನೋಟ

72,000 ಸಾವಿರ ಚದರ ಮೀಟರ್ (ಸುಮಾರು 17 ಎಕರೆ) ಪ್ರದೇಶದಲ್ಲಿ ವ್ಯಾಪಿಸಿದ ಈ ಹೂವಿನ ತೋಟದಲ್ಲಿ 45 ಮಿಲಿಯನ್ ಹೂಗಳನ್ನು ಪೋಷಿಸಲಾಗುತ್ತಿದೆಯಂತೆ. ಹೂವಿನಿಂದ ಅಲಂಕರಿಸಿದ ಗಡಿಯಾರ ಮತ್ತು ಗೂಬೆಯೂ ಗಮನ ಸೆಳೆಯುತ್ತದೆ. ಕಲುಷಿತ ನೀರನ್ನು ಶುದ್ಧೀಕರಿಸಿ ಹನಿ ನೀರಾವರಿ ಪದ್ಧತಿಯ ಪ್ರಕಾರ ನಿತ್ಯವೂ  7,57,082  ಲೀಟರ್ ನೀರನ್ನು ಉಪಯೋಗಿಸಿ ಈ ಉದ್ಯಾನವನ್ನು ನಿರ್ವಹಿಸಲಾಗುತ್ತದೆ.

ಇಲ್ಲಿನ ಬಟರ್ ಫ್ಲೈ ಗಾರ್ಡನ್ ಇನ್ನೊಂದು ಅದ್ಭುತ. ಸುಮಾರು 26 ಪ್ರಭೇದದ 2 ಲಕ್ಷ ಪಾತರಗಿತ್ತಿಗಳನ್ನು ಪೋಷಿಸಲಾಗುತ್ತಿದೆ. ನವೆಂಬರ್‌ನಿಂದ ಫೆಬ್ರುವರಿ ತಿಂಗಳು ಭೇಟಿಗೆ ಪ್ರಶಸ್ತ ಸಮಯ. ಮರಳಿ ಬೆಂಗಳೂರಿಗೆ ಬರುವ ವಿಮಾನವೇರಲು ಸಮಯವಾಗುತ್ತಿದೆ ಎಂದು ನಮ್ಮ ಗೈಡ್ ಕನ್ನಡತಿ ಫಾತಿಮಾ ಎಚ್ಚರಿಸಿದಾಗಲೇ ಒಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟು ಬರಬೇಕಾಯಿತು. ದುಬೈಗೆ ಹೋದಾಗ ತಪ್ಪದೇ ನೋಡಬೇಕಾದ ತಾಣ ‘ಮಿರಾಕಲ್ ಗಾರ್ಡನ್’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT