ಗುರುವಾರ , ಡಿಸೆಂಬರ್ 12, 2019
25 °C
ನಷ್ಟ ಸರಿದೂಗಿಸಲು ಹೊಸ ವ್ಯವಸ್ಥೆಗೆ ಚಿಂತನೆ l ಹೊರಗುತ್ತಿಗೆಗೆ ಕೊಕ್‌

ಪಾರ್ಸೆಲ್‌ ಸೇವೆಯತ್ತ ಕೆಎಸ್‌ಆರ್‌ಟಿಸಿ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡೀಸೆಲ್‌ ಬೆಲೆ ಏರಿಕೆ, ಏರಿದ ನಿರ್ವಹಣಾ ವೆಚ್ಚದಿಂದಾಗಿ ಸುಮಾರು ₹ 500 ಕೋಟಿ ನಷ್ಟದಲ್ಲಿ ನಲುಗಿರುವ ಕೆಎಸ್‌ಆರ್‌ಟಿಸಿ ಅದನ್ನು ಸರಿದೂಗಿಸಲು ಈಗ ಪಾರ್ಸೆಲ್‌ ಸೇವೆಯನ್ನು ತಾನೇ ನಿರ್ವಹಿಸುವ ಯೋಜನೆಗೆ ಮುಂದಾಗಿದೆ. 

ಇದುವರೆಗೆ ಹೊರಗುತ್ತಿಗೆಯಲ್ಲಿ ಇದ್ದ ಈ ಸೇವೆಯನ್ನು ಇನ್ನು ಮುಂದೆ ನಿಗಮ ತಾನೇ ನಿರ್ವಹಿ ಸಲಿದೆ ಎಂದು ಸಂಸ್ಥೆಯ ಉನ್ನತ ಮೂಲಗಳು ಖಚಿತ ಪಡಿಸಿವೆ. ಇದುವರೆಗೆ ರಾಜ್ಯದ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಮಹಾಲಸಾ ಕೊರಿಯರ್‌ ಆ್ಯಂಡ್‌ ಪಾರ್ಸೆಲ್‌ ಸಂಸ್ಥೆ ಈ ಕಾರ್ಯ ನಿರ್ವಹಿಸುತ್ತಿತ್ತು. ಅದರೊಂದಿಗಿನ ಒಪ್ಪಂದದ ಅವಧಿ ಮುಕ್ತಾಯವಾಗಿದೆ.

ಖಾಸಗಿ ಬಸ್ ಕಂಪನಿಗಳು ಪಾರ್ಸೆಲ್‌ ಸಾಗಾಟ ದಿಂದಲೇ ತಮ್ಮ ಓಡಾಟ ವೆಚ್ಚ ನಿರ್ವಹಿಸುತ್ತಿವೆ. ಅವು ಗಳಿಗಿಂತ ಅಗಾಧ ಕಾರ್ಯಜಾಲ ಹೊಂದಿರುವ ಕೆಎಸ್‌ ಆರ್‌ಟಿಸಿಗೆ ಏಕೆ ಸಾಧ್ಯವಾಗದು ಎಂದು ಚಿಂತನೆ ನಡೆಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿದ್ದಾರೆ. 

ನಿಗಮದ ಮುಖ್ಯ ವಾಣಿಜ್ಯ ವ್ಯವಸ್ಥಾ ಪಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡವೊಂದು ಆಂಧ್ರಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿದೆ. ಅಲ್ಲಿನ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ತಾನೇ ಈ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದನ್ನು ಗಮನಿಸಿದ ತಂಡ ಇಲ್ಲಿಯೂ ಅದೇ ಮಾದರಿಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.

‘ನಾವು ಈ ಯೋಜನೆಯ ನೀಲನಕ್ಷೆ ರೂಪಿಸು ತ್ತಿದ್ದೇವೆ. ಸದ್ಯ ಪಾರ್ಸೆಲ್‌ ಬುಕ್ಕಿಂಗ್‌ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ. ಸರಕುಗಳನ್ನು ನೇರವಾಗಿ ಬಸ್‌ಗೆ ಹಾಕಿ ಲಗೇಜ್‌ ಟಿಕೆಟ್‌ ಪಡೆದು ಸಾಗಿಸಬಹುದು. ಮುಂದೆ ಸಾರಿಗೆ ಸಂಸ್ಥೆಯೇ ಪಾರ್ಸೆಲ್‌ ಬುಕ್ಕಿಂಗ್‌ ಸೇವೆ ತರಲಿದೆ’ ಎಂದು ಅಧ್ಯಯನ ತಂಡದಲ್ಲಿದ್ದ ಅಧಿಕಾರಿಯೊಬ್ಬರು ಹೇಳಿದರು.

ಸಮಸ್ಯೆಗಳೇನು?: ಮಿತದರದಲ್ಲಿ ಪಾರ್ಸೆಲ್‌ ಸಾಗಾಟದ ಕೆಎಸ್‌ಆರ್‌ಟಿಸಿಯ ಈ ವ್ಯವಸ್ಥೆಗೆ ಬೇಡಿಕೆ ಇತ್ತು. ಆದರೆ, ಆಯ್ದ ಕೇಂದ್ರಗಳಲ್ಲಿ ಮಾತ್ರ ಇದು ಲಭ್ಯವಿತ್ತು. ಗ್ರಾಹಕರು ಪಾರ್ಸೆಲ್‌ ಕೊಡಲು ಅಥವಾ ಪಡೆಯಲು ಆಯಾ ಕೇಂದ್ರಗಳಿಗೆ ಹೋಗಬೇಕಿತ್ತು. ಹೆಚ್ಚಿನ ಕಡೆಗಳಲ್ಲಿ ಈ ಸೇವೆ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಲಭ್ಯವಿತ್ತು. 

ಆದರೆ, ಖಾಸಗಿ ಬಸ್‌ಗಳ ಪಾರ್ಸೆಲ್‌ ಸೇವೆ ಗ್ರಾಮೀಣ ಪ್ರದೇಶಗಳಿಗೂ ತಲುಪುತ್ತಿವೆ. ಬಸ್‌ಗಳ ಲಗೇಜ್‌ ಬಾಕ್ಸ್‌ ತುಂಬಿದ ಬಳಿಕ ಅವರದೇ ಟೆಂಪೋ ಅಥವಾ ವ್ಯಾನ್‌ಗಳಲ್ಲಿ ಹಾಕಿ ಕಳುಹಿಸುವ ಸೌಲಭ್ಯವೂ ಇದೆ. ಮಾರ್ಗಮಧ್ಯೆಯೂ ಗ್ರಾಹಕರು ತಮಗೆ ಸೇರಿದ ಸರಕನ್ನು ಪಡೆಯಬಹುದು. ಹೀಗಾಗಿ ಖಾಸಗಿ ಬಸ್‌ಗಳ ಬುಕ್ಕಿಂಗ್‌ ಕಚೇರಿಯಲ್ಲಿ ಪಾರ್ಸೆಲ್ ಸರಕುಗಳು ರಾಶಿಬೀಳುತ್ತಿದ್ದವು. ಸಂಸ್ಥೆಯ ಸಂಪನ್ಮೂಲ ಮತ್ತು ಕಾರ್ಯಜಾಲ, ತಂತ್ರಜ್ಞಾನವನ್ನು ಬಳಸಿ ಕೊಂಡು ಸರಕು ಸಾಗಾಟ ಮಾರುಕಟ್ಟೆಯ ಕಠಿಣ ಸ್ಪರ್ಧೆ ಎದುರಿಸಬೇಕು. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದರು.

ಸಾಧಕ–ಬಾಧಕ: ಅಧ್ಯಯನ ಸಾಗಿದೆ

ಪಾರ್ಸೆಲ್‌ ಸೇವೆ ಒದಗಿಸುವ ಸಾಧ್ಯತೆ ಬಗ್ಗೆ ಅಧ್ಯಯನ ಸಾಗಿದೆ. ಪ್ರಯಾಣಿಕರ ಸುರಕ್ಷಿತ ಸಾರಿಗೆಗೆ ನಮ್ಮ ಆದ್ಯತೆ. ಹಾಗೆಂದು ಸಂಸ್ಥೆಯನ್ನು ನಷ್ಟದಲ್ಲಿ ನಡೆಸುವುದೂ ಅಸಾಧ್ಯ. ರೈಲ್ವೆ ಇಲಾಖೆ, ಖಾಸಗಿ ಸಂಸ್ಥೆಗಳೂ ಪಾರ್ಸೆಲ್‌ ಸಾಗಾಟದಿಂದ ಆದಾಯ ಗಳಿಸುತ್ತಿವೆ. ಈ ವ್ಯವಸ್ಥೆಯನ್ನು ನಮ್ಮಲ್ಲಿ ಅಳವಡಿಸುವ ಬಗ್ಗೆ ದೀರ್ಘಾವಧಿ ಯೋಜನೆ ರೂಪಿಸಬೇಕು. ಬಳಿಕವಷ್ಟೇ ಇದರ ಸ್ವರೂಪ ತಿಳಿಯಲಿದೆ.

–ಶಿವಯೋಗಿ ಕಳಸದ, ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಆರ್‌ಟಿಸಿ

**
ಪಾರ್ಸೆಲ್‌ ಸೇವೆಗೆ ಕೆಎಸ್‌ಆರ್‌ಟಿಸಿ ಕಾರ್ಯಜಾಲ

* 17 ವಿಭಾಗಗಳು

* 16 ಕಾರ್ಯಾಚರಣೆ ವಿಭಾಗಗಳು

* 83 ಡಿಪೋಗಳು

* 38,299 ಸಿಬ್ಬಂದಿ

* 29 ಲಕ್ಷ ಕಿಲೋಮೀಟರ್‌ – ಪ್ರತಿದಿನ ಸಂಚರಿಸುವ ದೂರ

* 8,779 ಬಸ್‌ಗಳು

* 29.68 ಲಕ್ಷ - ಪ್ರತಿದಿನದ ಸರಾಸರಿ ಪ್ರಯಾಣಿಕರು

* ₹ 8.82 ಕೋಟಿ - ಪ್ರತಿದಿನದ ಸರಾಸರಿ ಆದಾಯ

(ಮಾಹಿತಿ: ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌)

**

ನಿಗಮದ ಸಾಮರ್ಥ್ಯ

* ಮಧ್ಯ ಮತ್ತು ದಕ್ಷಿಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಜಾಲ

* ಈಶಾನ್ಯ ಕರ್ನಾಟಕ, ವಾಯವ್ಯ ಕರ್ನಾಟಕ ಸಾರಿಗೆ ಮತ್ತು ಬಿಎಂಟಿಸಿ ಜತೆ ಸೇರಿ ಕಾರ್ಯನಿರ್ವಹಣೆ ಸಾಧ್ಯತೆ

* ಅಂತರ್‌ ರಾಜ್ಯಗಳಿಗೂ ಸೇವೆ ವಿಸ್ತರಣೆಗೆ ಅವಕಾಶ

**

ಸಂಸ್ಥೆಗೇನು ಲಾಭ?

* ವಾಹನಗಳ ಪರಿಪೂರ್ಣ ಬಳಕೆ

* ಲಾಭದಾಯಕವಾಗಲಿರುವ ದೂರ ಪ್ರಯಾಣದ ಬಸ್‌ ಸಂಚಾರ

* ಪ್ರೀಮಿಯಂ ಸೇವೆಗಳಲ್ಲೂ ಪಾರ್ಸೆಲ್‌ ಸಾಗಾಟ

* ನಷ್ಟದಿಂದ ಹೊರಬಂದು ಸೇವಾ ಗುಣಮಟ್ಟ ವರ್ಧನೆ

* ಯಶಸ್ವಿಯಾದರೆ ಪ್ರತ್ಯೇಕ ಪಾರ್ಸೆಲ್‌ ಸೇವಾ ವಾಹನ ಓಡಿಸಬಹುದು

**

ಜನರಿಗೇನು ಲಾಭ?

* ಗ್ರಾಮೀಣ ಪ್ರದೇಶಗಳಿಗೆ ಮಿತದರದಲ್ಲಿ ಪಾರ್ಸೆಲ್‌ ಸಾಗಾಟ

* ರೈತರು, ಸಣ್ಣ ವ್ಯಾಪಾರಿಗಳಿಗೆ ಅನುಕೂಲ

* ಗ್ರಾಮೀಣ ಪ್ರದೇಶಗಳಲ್ಲಿ ಫ್ರಾಂಚೈಸಿಗಳ ಮೂಲಕ ಉದ್ಯೋಗ ಸೃಷ್ಟಿ

* ಖಾಸಗಿಯವರ ಪಾರ್ಸೆಲ್‌ ಪಾರಮ್ಯಕ್ಕೆ ಕಡಿವಾಣ

* ಸರಕಿನ ಸುರಕ್ಷತೆ ಖಾತ್ರಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು