ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾವುದೇ ಸಿ.ಎಂ ದುರಾಡಳಿತ ನಡೆಸಿಲ್ಲ’

ಉತ್ತಮ ಆಡಳಿತಕ್ಕೆ ಬೀಜ ಬಿತ್ತಿದವರು ಕೆಂಪೇಗೌಡರು: ಪರಮೇಶ್ವರ
Last Updated 27 ಜೂನ್ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯವು ಈವರೆಗೆ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಒಬ್ಬ ಮುಖ್ಯಮಂತ್ರಿಯೂ ದುರಾಡಳಿತ ನಡೆಸಿಲ್ಲ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಕೆಲವರು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿರಬಹುದೇ ಹೊರತು, ದುರಾಡಳಿತ ನಡೆಸಿಲ್ಲ, ಎಲ್ಲರೂ ರಾಷ್ಟ್ರಕ್ಕೆ ಮಾದರಿ ಆಗುವ ಆಡಳಿತ ನೀಡಿದ್ದಾರೆ’ ಎಂದರು.

ಇದಕ್ಕೆ ಕಾರಣಗಳನ್ನು ವಿವರಿಸಿದ ಅವರು, ‘ಜನಪರ ಮತ್ತು ಉತ್ತಮ ಆಡಳಿತಕ್ಕೆ ಅಡಿಪಾಯ ಹಾಕಿದವರೇ ನಾಡಪ್ರಭು ಕೆಂಪೇಗೌಡರು. ಎಲ್ಲೆ ಮೀರದಂತೆ ಆಡಳಿತ ಚೌಕಟ್ಟು ಹಾಕಿಕೊಟ್ಟಿದ್ದರು. ಈ ಕಾರಣಕ್ಕೆ ಇಡೀ ದೇಶದಲ್ಲಿ ಕರ್ನಾಟಕದ ಆಡಳಿತ ಅತ್ಯುತ್ತಮ ಎನಿಸಿದೆ. ಆಡಳಿತ ನಡೆಸಿದ ಎಲ್ಲ ಮುಖ್ಯಮಂತ್ರಿಗಳೂ ಜನಪರ ಚಿಂತನೆ ನಡೆಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ’ ಎಂದೂ ಹೇಳಿದರು.

ತಮ್ಮ ಆಳ್ವಿಕೆ ಸಂದರ್ಭದಲ್ಲಿ ಕೆಂಪೇಗೌಡರು ಆಡಳಿತ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದರು. ಆ ಪರಂಪರೆ ಮುಂದುವರಿದ ಕಾರಣ, ಬೆಂಗಳೂರು ವಿಶ್ವಮಾನ್ಯವಾಗಲು ಸಾಧ್ಯವಾಯಿತು ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಮಾದರಿಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಸ್ಥಾಪಿಸಲು ಮುಖ್ಯಮಂತ್ರಿಯವರ ಜತೆ ಚರ್ಚಿಸುವುದಾಗಿಯೂ ಪರಮೇಶ್ವರ ಭರವಸೆ ನೀಡಿದರು.

ಕರ್ನಾಟಕ ಸಂಸ್ಕೃತಿ ಕಾರ್ಯಕ್ರಮ: ಇದೇ ಡಿಸೆಂಬರ್‌ನಿಂದ ‘ಕರ್ನಾಟಕ ಸಂಸ್ಕೃತಿ’ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಗುವುದು. 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ಅನುದಾನ ದುರುಪಯೋಗ ಆಗದಿರಲು ಇಂತಹ ಕಾರ್ಯಕ್ರಮ ನಡೆಸಲಾಗುತ್ತದೆ. ಇದಕ್ಕಾಗಿ ಸಲಹೆ– ಸೂಚನೆಗಳನ್ನು ನಾಳೆಯಿಂದಲೇ ಆಹ್ವಾನಿಸುತ್ತೇನೆ. ಎಲ್ಲ ಬಗೆಯ ಕಲೆ ಮತ್ತು ಸಂಸ್ಕೃತಿಗಳಿಗೆ, ಎಲ್ಲ ವಯೋಮಾನದವರಿಗೆ ಅವಕಾಶ ನೀಡುವುದು ನಮ್ಮ ಉದ್ದೇಶ’ ಎಂದು ಅವರು ತಿಳಿಸಿದರು.

ರಾಜ್ಯದ ಉದ್ದಗಲ ಕೆಂಪೇಗೌಡರ ಜಯಂತಿ ಆಚರಣೆಗೆ ಕ್ರಮಕೈಗೊಳ್ಳಲಾಗುವುದು. ಕೆಂಪೇಗೌಡರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಎಲ್ಲರಿಗೂ ಸೇರಿದವರು ಎಂದು ಹೇಳಿದರು.

100 ಅಡಿ ಪ್ರತಿಮೆ ಸ್ಥಾಪಿಸಿ: ‘ನಗರದಲ್ಲಿ ಯಾವುದಾದರೊಂದು ಕಡೆ ಕೆಂಪೇಗೌಡರ 100 ಅಡಿ ಎತ್ತರ ಪ್ರತಿಮೆಯನ್ನು ಸ್ಥಾಪಿಸಬೇಕು. ‘ನಮ್ಮ ಮೆಟ್ರೊ’ವನ್ನು ‘ನಮ್ಮ ಕೆಂಪೇಗೌಡ ಮೆಟ್ರೊ’ ಎಂದು ಹೆಸರು ಬದಲಿಸಬೇಕು ಮತ್ತು ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಸ್ಫಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡ ಕಾಲಘಟ್ಟದಲ್ಲಿ ಕೊಲಂಬಸ್‌ ಭಾರತವನ್ನು ಹುಡುಕಿಕೊಂಡು ಅಮೆರಿಕ ತಲುಪಿದ. ಅಲ್ಲಿಯ ಮೂಲ ನಿವಾಸಿಗಳನ್ನು ಸಂಹಾರ ಮಾಡಿ ದೇಶ ನಿರ್ಮಿಸಿದ. ಆದರೆ, ಕೆಂಪೇಗೌಡರು ಶಾಂತಿ ಮತ್ತು ಸೌಹಾರ್ದದಿಂದಲೇ 64 ಪೇಟೆಗಳನ್ನು ಒಳಗೊಂಡ ನಗರವನ್ನು ನಿರ್ಮಿಸಿದರು.

ಮುಂದಿನ ಬಾರಿ ಕೆಂಪೇಗೌಡ ಜಯಂತಿ ಆಚರಿಸುವಾಗ ಎಲ್ಲ ಸಮಾಜಗಳ ಯತಿಗಳನ್ನು ಆಹ್ವಾನಿಸಬೇಕು. ಅದೇ ರೀತಿ ಬೇರೆ ಬೇರೆ ಜಯಂತಿಗಳನ್ನು ಆಚರಿಸುವಾಗ, ಬೇರೆ ಬೇರೆ ಸಮಾಜದ ಧರ್ಮ ಗುರುಗಳಿಗೂ ಆಹ್ವಾನ ನೀಡಬೇಕು. ಆಗ ಮಾತ್ರ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

‘ಎಚ್‌ಡಿಕೆ ಬಗ್ಗೆ ಎಚ್ಚರಿಕೆಯಿಂದ ಪದ ಬಳಸಿ’

‘ಹೃದಯವಂತ’ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪದಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಅವರ ಹಿಂದೆ ಶಕ್ತಿ, ಸಮೂಹ ಇದೆ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

ಯಾರ ಹೆಸರು ಉಲ್ಲೇಖಿಸದೇ ಅವರು ಕೆಲವು ಎಚ್ಚರಿಕೆಯ ಮಾತುಗಳನ್ನು ಆಡಿದರು. ಇತ್ತೀಚೆಗೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮುಖ್ಯಮಂತ್ರಿ ವಿರುದ್ಧ ಕೆಲವು ಪದಗಳು ಬಳಸಿದ್ದು, ವಿವಾದಕ್ಕೆ ಕಾರಣವಾಗಿತ್ತು.

ಕುಮಾರಸ್ವಾಮಿ ಅವರನ್ನು ಹುಷಾರಾಗಿ ನೋಡಿಕೊಳ್ಳಬೇಕು ಎಂದು ಹಿಂದೆ ಡಿ.ಕೆ.ಶಿವಕುಮಾರ್‌ ಅವರಿಗೆ ಹೇಳಿದ್ದೆ. ಅವರನ್ನು ಹುಷಾರಾಗಿ ನೋಡಿಕೊಳ್ಳುತ್ತಾ ಅವರೇ ಹುಷಾರು ತಪ್ಪಿದರು. ಶ್ರಮ ತ್ಯಾಗ, ನೋವಿನ ಭಾರ ಹೊತ್ತು ಕುಮಾರಸ್ವಾಮಿ ಆಡಳಿತ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT