ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಜಿಲ್ಲೆಯಾದ್ಯಂತ ಲಾಕ್‌ಡೌನ್ ಭಾಗಶಃ ಸಡಿಲಿಕೆ

Last Updated 27 ಏಪ್ರಿಲ್ 2020, 3:41 IST
ಅಕ್ಷರ ಗಾತ್ರ

ಬಳ್ಳಾರಿ: ಕೆಲದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಮುಕ್ತರಾದ ಮೂವರೊಂದಿಗೆ ಇನ್ನೂ ಇಬ್ಬರನ್ನು ಕೋವಿಡ್‌ ಆಸ್ಪತ್ರೆಯಿಂದ ಭಾನುವಾರ ಮಧ್ಯಾಹ್ನ ಬಿಡುಗಡೆ ಮಾಡಿದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಮಧ್ಯರಾತ್ರಿಯಿಂದಲೇ ಲಾಕ್‌ಡೌನ್‌ ಭಾಗಶಃ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಭಾನುವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಅದೇ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರೂ ಸೋಮವಾರ ಆದೇಶ ಹೊರಡಿಸಿದ್ದು, ತಮ್ಮ ಸಿಬ್ಬಂದಿಗೂ ಆದೇಶವನ್ನು ಪಾಲಿಸಿ ಜನರಿಗೆ ಸಹಕರಿಸುವಂತೆ ಸೂಚನೆ ನೀಡಿದ್ದಾರೆ.

ಎಲ್ಲ ಆರೋಗ್ಯ ಸೇವೆಗಳೂ ಕಾರ್ಯನಿರ್ವಹಿಸಬಸಹುದು. ಔಷಧ ಅಂಗಡಿಗಳು.ಪ್ರಯೋಗಾಲಯಗಳು ಎಂದಿನಂತೆ ತೆರೆಯಬಹುದು. ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿಯು ಅಂತರ ಜಿಲ್ಲಾ. ಅಂತರರಾಜ್ಯ ಪ್ರಯಾಣ ಮಾಡಬಹುದು.

ಕೃಷಿ ಮತ್ತು ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಚಟುವಟಿಕೆಗಳನ್ನು ನಡೆಸಬಹುದು. ಎಪಿಎಂಸಿಗಳ ಎಲ್ಲ ಮಂಡಿಗಳೂ, ಕೃಷಿ ಉಪಕರಣ ಮಾರಾಟ ಮಳಿಗೆ, ರಸಗೊಬ್ಬರ ಮಾರಾಟ ಮಳಿಗೆ ತೆರೆಯಬಹುದು. ಕಿರು ಅರಣ್ಯ ಉತ್ಪನ್ನಗಳ ಮಾರಾಟ ಮಾಡಬಹುದು.

ಅಂಗವಿಕಲ ಮಕ್ಕಳು, ಅನಾಥರ ಪಾಲನೆ ಕೇಂದ್ರ, ವೃದ್ಧಾಶ್ರಮಗಳು, ಬಾಲಮಂದಿರಗಳು ಕಾರ್ಯನಿರ್ವಹಿಸಬಹುದು. ಸಾಮಾಜಿಕ ಭದ್ರತಾ ಪಿಂಚಣಿ ವಿತರಿಸಬಹುದು.

ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ 15ದಿನಕ್ಕೊಮ್ಮೆ ಪೌಷ್ಠಿಕ ಆಹಾರವನ್ನು ಅವರ ಮನೆ ಬಾಗಿಲಿಗೆ ವಿತರಿಸಲೆಂದು ಅಂಗನವಾಡಿಗಳು ಬಾಗಿಲು ತೆರೆಯಬಹುದು.

ಉದ್ಯೋಗಖಾತ್ರಿ, ಜಲಸಂರಕ್ಷಣೆ, ನೀರಾವರಿ ಯೋಜನೆಗಳ ಚಟುವಟಿಕೆಗಳನ್ನು ನಡೆಸಬಹುದು.ಸಿಮೆಂಟ್‌, ಜಲ್ಲಿ, ಉಕ್ಕು, ಟೈಲ್ಸ್‌, ಪೇಂಟ್ಸ್‌ ಸಾಗಿಸಬಹುದು. ಪ್ರತಿ 20 ಕಿಮೀಗೆ ಒಂದರಂತೆ ಟ್ರಕ್‌ ರಿಪೇರಿ ಅಂಗಡಿಗಳು ಹಾಗೂ ಡಾಬಾಗಳು ತೆರೆಯಬಹುದು.

ಎಲ್ಲ ಅಗತ್ಯ ವಸ್ತುಗಳ ಉತ್ಪಾದನೆ, ಸಾಗಾಟ ಮತ್ತು ಮಾರಾಟಕ್ಕೆ ಮುಕ್ತ ಅವಕಾಶ. ಗ್ರಾಮ ಪಂಚಾಯ್ತಿ ರಾಜೀವ್‌ ಗಾಂಧಿ ಸೇವಾ ಕೇಂದ್ರಗಳೂ ಕಾರ್ಯನಿರ್ವಹಿಸಬಹುದು. ಎಲೆಕ್ಟ್ರಿಶಿನಿಯನ್‌, ಪ್ಲಂಬರ್‌, ಮೋಟರ್‌ ಮೆಕ್ಯಾನಿಕ್‌, ಕಾರ್ಪೆಂಟರ್‌ಗಳು ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಜನರಿಗೆ ಸೇವೆ ನೀಡಬಹುದು.

ಆಹಾರ ಸಂಸ್ಕರಣೆ, ಗಣಿಗಾರಿಕೆ ಘಟಕಗಳೂ ಎಂದಿನಂತೆ ಕಾರ್ಯನಿರ್ವಹಿಸಬಹುದು. ಕಟ್ಟಡ, ರಸ್ತೆ ನಿರ್ಮಾಣ ಕಾರ್ಯಗಳಿಗೂ ಅವಕಾಶ.ತುರ್ತು ವೈದ್ಯಕೀಯ ಮತ್ತು ಪಶುವೈದ್ಯಕೀಯ ಸೇವೆಗಾಗಿ ನಿಯೋಜಿತರಾಗಿ ಪಾಸ್‌ ಹೊಂದಿರುವ ವಾಹನಗಳು, ಕೆಲಸದ ಸ್ಥಳಕ್ಕೆ ಹಾಗೂ ಅಲ್ಲಿಂದ ಮನೆಗೆ ತೆರಳಲು ಪಾಸ್‌ ಪಡೆದ ಸಿಬ್ಬಂದಿಯಷ್ಟೇ ಪ್ರಯಾಣಿಸಬಹುದು.

ಇವುಗಳ ಸೇವೆ ಇಲ್ಲ...
* ರೈಲು, ಬಸ್‌ ಸಂಚಾರ ಇಲ್ಲ
* ತುರ್ತು ವೈದ್ಯಕೀಯ ಕಾರಣವಿಲ್ಲದೆ ಅಂತರಜಿಲ್ಲಾ ಮತ್ತು ಅಂತರರಾಜ್ಯ ಪ್ರಯಾಣ ಕೈಗೊಳ್ಳುವಂತಿಲ್ಲ.
* ಶಿಕ್ಷಣ ಸಂಸ್ಥೆಗಳು ತೆರೆಯುವಂತಿಲ್ಲ.
* ಆಟೋರಿಕ್ಷಾ, ಕ್ಯಾಬ್‌ಗಳ ಸಂಚಾರಕ್ಕೆ ಅವಕಾಶವಿಲ್ಲ.
* ಚಿತ್ರಮಂದಿರ, ಜಿಮ್‌ಗಳು, ಶಾಪಿಂಗ್‌ ಕಾಂಪ್ಲೆಕ್ಸ್‌, ಕ್ರೀಡಾ ಸಂಕೀರ್ಣಗಳು, ಈಜುಕೊಳಗಳು,ಬಾರ್‌ಗಳನ್ನು ತೆರೆಯುವಂತಿಲ್ಲ. ಸಂತಸ ಕೂಟಗಳನ್ನು ಆಯೋಜಿಸುವಂತಿಲ್ಲ.
ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಇಪ್ಪತ್ತು ಮಂದಿಗಿಂತ ಹೆಚ್ಚು ಪಾಲ್ಗೊಳ್ಳುವಂತಿಲ್ಲ

ಪೊಲಿಸರು ತಡೆಯುವಂತಿಲ್ಲ
ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್‌ ಸಿಬ್ಬಂದಿಗೆ ಜನರೊಂದಿಗೆ ಸಹಕರಿಸಬೇಕು. ಅನವಶ್ಯಕವಾಗಿ ಯಾರನ್ನೂ ತಡೆಯಬಾರದು. ಆಯಾ ಪ್ರದೇಶಗಳ ಗ್ರಾಮ ಮತ್ತು ನಗರ ಆಡಳಿತ ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ಲಾಕ್‌ಡೌನ್‌ ನಿಯಮ ಉಲ್ಲಂಘನೆ ವಿರುದ್ಧ ದೂರು ನೀಡಿದರೆ ಮಾತ್ರ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಆದೇಶ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಅಂತರ ಜಿಲ್ಲಾ ಮತ್ತು ಅಂರರಾಜ್ಯ ಚೆಕ್‌ಪೋಸ್ಟ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದಿದ್ದಾರೆ.

ಲಾಕ್‌ಡೌನ್‌ ನಿಯಮ ಉಲ್ಲಂಘನೆ, ಸಡಿಲಿಕೆ ನಿಯಮ ಪಾಲನೆ ಮೇಲೆ ಕಣ್ಗಾವಲು ಇಡಲು ಮಹಾನಗರ ಪಾಲಿಕೆಗೆ ಜವಾಬ್ದಾರಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ಆಯುಕ್ತೆ ಎಂ.ವಿ.ತುಷಾರಮಣಿ: 94839 47666, ಕಾರ್ಯನಿರ್ವಾಹಕ ಎಂಜಿನಿಯರ್‌ ಖಾಜಾ ಮೊಯಿನುದ್ದೀನ್‌: 94480 28676, ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ: 94489 68514

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT