ಡಾ. ಪಾಟೀಲ ಪುಟ್ಟಪ್ಪ ಹೇಳಿಕೆಗೆ ಖಂಡನೆ

7

ಡಾ. ಪಾಟೀಲ ಪುಟ್ಟಪ್ಪ ಹೇಳಿಕೆಗೆ ಖಂಡನೆ

Published:
Updated:

ಧಾರವಾಡ: ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವುದನ್ನು ವಿರೋಧಿಸಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪಾಟೀಲ ಪುಟ್ಟಪ್ಪ ಅವರ ಹೇಳಿಕೆಯನ್ನು ವಿವಿಧ ದಲಿತ ಮುಖಂಡರು ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದಲಿತ ಮಖಂಡ ಮಹಾದೇವ ದೊಡ್ಡಮನಿ, ‘ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡಿದರು ಎಂಬ ಗಾಧೆ ಮಾತಿನಂತಿದೆ ಪುಟ್ಟಪ್ಪ ಅವರ ವಾದ. ಕನ್ನಡ ಉಳಿದಿರುವುದು ಗ್ರಾಮೀಣ ಬಡ ಹಾಗೂ ದಲಿತ ಮಕ್ಕಳಿಂದ ಮಾತ್ರ ಎನ್ನುವುದನ್ನು ಅವರು ಮನಗಾಣಬೇಕು. ದೊಡ್ಡ ಸಾಹಿತಿಗಳ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ಬಡವರ ಮಕ್ಕಳು ಕನ್ನಡದಲ್ಲಿ ಕಲಿಯಬೇಕು ಎಂಬ ಇವರ ವಾದದಲ್ಲಿ ಯಾವ ನ್ಯಾಯವಿದೆ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

‘ಡಾ. ಪಾಟೀಲ ಪುಟ್ಟಪ್ಪ ಹಾಗೂ ಅವರ ಹಿಂಬಾಲಕರ ಮಕ್ಕಳು ಮತ್ತು ಮೊಮ್ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ. ಕನ್ನಡ ಭಾಷೆ ಉಳಿಸಬೇಕು ಮತ್ತು ಬೆಳೆಸಬೇಕು ಎಂದರೆ ಅದು ಬರೀ ದಲಿತರ ಮಕ್ಕಳಿಂದ ಮಾತ್ರ ಸಾಲದು, ದೊಡ್ಡವರ ಮಕ್ಕಳನ್ನೂ ಕನ್ನಡ ಶಾಲೆಗೆ ಕಳುಹಿಸಿ ಸಮಾಜಕ್ಕೆ ಮಾದರಿಯಾಗಬೇಕು’ ಎಂದಿದ್ದಾರೆ.

‘ಖಾಸಗೀಕರಣ ಮತ್ತು ಕಂಪ್ಯೂಟರ್ ಬಳಕೆ ಅತಿ ಅವಶ್ಯಕವಾಗಿರುವುದರಿಂದ ಗ್ರಾಮೀಣ ಮತ್ತು ದಲಿತ ಪ್ರತಿಭೆಗಳು ಇಂಗ್ಲಿಷ್ ಬಾರದೆ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ 1ನೇ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ವಿಷಯವನ್ನಾಗಿ ಕಲಿಸಬೇಕು. ಇಲ್ಲವೆಂದರೆ ರಾಜ್ಯದಲ್ಲಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 5ನೇ ತರಗತಿವರೆಗೂ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಹೀಗಾದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಕಾಪಾಡಿದಂತಾಗಲಿದೆ. ಈ ನಿಟ್ಟಿನಲ್ಲಿ ಚಿಂತಿಸಿ ಡಾ. ಪುಟ್ಟಪ್ಪ ಅವರು ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ದೊಡ್ಡಮನಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !