ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡದಲ್ಲಿ ರೈತನನ್ನು ಸಾಯಿಸಿದ್ದ ಕರಡಿ ಹತ್ಯೆ

ಪಾವಗಡ ತಾಲ್ಲೂಕಿನ ಸಾಸಲಕುಂಟೆ ಬಳಿ ಘಟನೆ; 10ಕ್ಕೂ ಹೆಚ್ಚು ಮಂದಿಗೆ ಗಾಯ
Last Updated 23 ಮಾರ್ಚ್ 2019, 5:57 IST
ಅಕ್ಷರ ಗಾತ್ರ

ಪಾವಗಡ: ರೈತರ ಮೇಲೆ ತಾಲ್ಲೂಕಿನ ಸಾಸಲಕುಂಟೆ ಗುಡ್ಡದ ಬಳಿ ಶುಕ್ರವಾರ ಬೆಳಿಗ್ಗೆ ಕರಡಿ ದಾಳಿ ಮಾಡಿದ್ದು, ಗ್ರಾಮದ ರೈತ ವೀರಾಂಜನೇಯ (45) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಆಕ್ರೋಶಗೊಂಡ ಜನ ಕರಡಿಯನ್ನು ಗುಡ್ಡದ ಬಳಿ ಕೊಂದಿದ್ದಾರೆ.

ಗ್ರಾಮದ ಬಳಿಯ ಜಮೀನಿಗೆ ಗುಡ್ಡದ ಬಳಿಯಿಂದ ಹೋಗುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ. ಮೃತ ವೀರಾಂಜನೇಯ ಅವರ ಮುಖ, ತಲೆ ಭಾಗವನ್ನು ಕರಡಿ ಕಿತ್ತು ಹಾಕಿದೆ.

ಶಿವಪ್ಪರೆಡ್ಡಿ, ಗೋಪಾಲರೆಡ್ಡಿ, ಮೋಹನ್, ನರಸಿಂಹರೆಡ್ಡಿ, ಎರ್ರಪ್ಪ, ಅಜ್ಜಪ್ಪ, ನಾಗರಾಜು, ಶ್ರೀಮನ್ನಾರಾಯಣ, ಈರಪ್ಪ, ಶಿವಲಿಂಗಪ್ಪ, ಗೋವಿಂದ, ರಾಮಲಿಂಗ ಎಂಬುವರ ಕೈ, ಕಾಲಿಗೆ ಕಚ್ಚಿದೆ. ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ದೇಹ ಸ್ಥಳಾಂತರಿಸಲು ಬಿಡದ ಕರಡಿ: ಸುಮಾರು 3 ಗಂಟೆ ಕಳೆದರೂ ಕರಡಿ ಗುಡ್ಡದಲ್ಲಿಯೇ ಬೀಡು ಬಿಟ್ಟಿತ್ತು. ಮೃತ ದೇಹ ಸ್ಥಳಾಂತರಿಸಲು ಇಲಾಖೆ ಸಿಬ್ಬಂದಿಗೆ ಅವಕಾಶ ಕೊಡಲಿಲ್ಲ.

ಕರಡಿ ವೀಕ್ಷಿಸಲು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮಂದಿ ಸಾಸಲಕುಂಟೆಗೆ ಬಂದಿದ್ದರು. ಆರಂಭದಲ್ಲಿ 5 ಮಂದಿಯನ್ನು ಮಾತ್ರ ಕರಡಿ ಗಾಯಗೊಳಿಸಿತ್ತು. ಜನಸಂದಣಿ ಹೆಚ್ಚಿದಂತೆ ಮೃತದೇಹದ ಹತ್ತಿರ ಹೋದವರ ಮೇಲೆ ಎರಗಿ ಗಾಯಗೊಳಿಸಿತು.

ಆಕ್ರೋಶಗೊಂಡ ಜನ ಕಟ್ಟಿಗೆ, ಮಚ್ಚು, ಕುಡುಗೋಲು ಹಿಡಿದು ಕರಡಿಯನ್ನು ಓಡಿಸಲು ಮುಂದಾದರು. ಕರಡಿ ವ್ಯಕ್ತಿಯೊಬ್ಬನ ಮೇಲೆ ಎರಗಿದ ಕೂಡಲೆ ಕಾಲು ಕಿತ್ತು ಓಡಿದರು. ಕಡೆಗೆ ಗುಂಪಿನಲ್ಲಿದ್ದ ಕೆಲವರನ್ನು ಕರಡಿ ಗಾಯಗೊಳಿಸಿತು. ಆದರೂ ಬಿಡದ ಕೆಲವರು ಕರಡಿಯನ್ನು ಹೊಡೆದು ಕೊಂದರು.

ಸುಮಾರು 4 ವರ್ಷದ ಕರಡಿ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಂತರ ಸಂಪೂರ್ಣ ವಿವರ ತಿಳಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಡಿಎಫ್‌ಒ ವಿ.ರಾಮಲಿಂಗೇಗೌಡ, ಎಸಿಎಫ್ ಬಿ.ಎನ್.ನಾಗರಾಜು, ಆರ್‌ಎಫ್‌ಒ ಎಚ್.ಎಂ.ಸುರೇಶ್ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳು, ಮೃತರ ಕುಟುಂಬಕ್ಕೆ ಅಧಿಕಾರಿಗಳು ಚೆಕ್ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT