ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ಮೈಮೇಲೆ ಆತ್ಮ ಬರುತ್ತದೆ..!

Last Updated 7 ಫೆಬ್ರುವರಿ 2019, 11:40 IST
ಅಕ್ಷರ ಗಾತ್ರ

ಪವನ್ ಒಡೆಯರ್ ಮತ್ತು ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನ ಎರಡನೇ ಸಿನಿಮಾ ‘ನಟಸಾರ್ವಭೌಮ’ ಫೆ. 7ಕ್ಕೆ ತೆರೆಗೆ ಬರುತ್ತಿದೆ. ‘ಇದು ಮನುಷ್ಯನ ಮನಸ್ಸಿನ ಹಲವು ಭಾವನೆಗಳ ಮಿಶ್ರಣದ ಸಿನಿಮಾ’ ಎನ್ನುವ ಪವನ್‌, ಚಿತ್ರದ ಕುರಿತು ಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

* ನಟಸಾರ್ವಭೌಮನ ವಿಶೇಷಗಳೇನು?
ಹೋಮೊಜೀನಿಯಸ್‌ ಮಿಕ್ಶ್ಚರ್ ಆಫ್‌ ಎಮೋಶನ್ಸ್‌ ಅಂತಾರಲ್ಲಾ. ಅಂಥ ಸಿನಿಮಾ ಇದು. ನಾನು ಯಾವುದೋ ಒಂದು ನಿರ್ದಿಷ್ಟ ಜಾನರ್‌ಗೆ ಅಂಟಿಕೊಂಡವನಲ್ಲ. ಕಾಮಿಡಿ ಸಿನಿಮಾದಿಂದ ನಿರ್ದೇಶನದ ಜರ್ನಿ ಆರಂಭಿಸಿ ನಂತರ ಒಂದು ಲವ್‌ ಸ್ಟೋರಿ ಮಾಡಿ, ಹಾರರ್ ಸಿನಿಮಾ ಮಾಡಿ, ಆ್ಯಕ್ಷನ್‌ ಸಿನಿಮಾಗೂ ಆ್ಯಕ್ಷನ್ ಕಟ್ ಹೇಳಿ ಈಗ ಮತ್ತೆ ಬೇರೆಯೇ ರೀತಿಯ ಥ್ರಿಲ್ಲರ್ ಕಥೆ ಹೇಳಲು ಹೊರಟಿದ್ದೇನೆ. ಈ ಪ್ರಯಾಣದಲ್ಲಿ ತುಂಬ ಕಲಿತಿದ್ದೀನಿ.

ನನ್ನ ಮತ್ತು ಅಪ್ಪು ಅವರ ಹಿಂದಿನ ಕಾಂಬಿನೇಷನ್‌ ‘ರಣ ವಿಕ್ರಮ’. ಅದು ದೊಡ್ಡ ಹಿಟ್‌ ಆಗಿ ಪುನೀತ್‌ಗೆ ಫಿಲಂಫೇರ್‌, ಸೈಮಾ ಪ್ರಶಸ್ತಿಗಳೆಲ್ಲ ಬಂತು. ಮತ್ತೆ ಅವರು ನನ್ನ ಮೇಲೆ ನಂಬಿಕೆ ಇಟ್ಟು ಇನ್ನೊಂದು ಸಿನಿಮಾ ನಿರ್ದೇಶಿಸುವ ಅವಕಾಶ ಕೊಟ್ಟಿದ್ದಾರೆ.

* ಈ ಸಿನಿಮಾ ರೂಪುಗೊಂಡಿದ್ದು ಹೇಗೆ?
‘ರಣ ವಿಕ್ರಮ’ ಸಿನಿಮಾ ಆಗುತ್ತಿದ್ದ ಹಾಗೆಯೇ ಒಂದು ಮೀಟಿಂಗ್ ಮಾಡಿದ್ವಿ ಪುನೀತ್ ಅವರ ಜತೆ. ಆಗ ಕಥೆ ಇನ್ನೂ ಏನೋ ಬೇಕು ಎಂದುಕೊಂಡು ಮುಂದಕ್ಕೆ ಹೋಗುತ್ತಲೇ ಹೋಯಿತು. ನಂತರ ಸಂಪೂರ್ಣ ಚಿತ್ರಕಥೆಯನ್ನೇ ಬದಲಾಯಿಸಿಬಿಟ್ಟೆ. ಅದು ಪುನೀತ್‌ಗೆ ತುಂಬ ಇಷ್ಟವಾಯ್ತು. ನಂತರ ರಾಕ್‌ಲೈನ್‌ ವೆಂಕಟೇಶ್ ಹಣ ಹೂಡಲು ಮುಂದೆ ಬಂದರು.

* ಈ ಬದಲಾವಣೆಯಲ್ಲಿ ಹೀರೊಯಿಸಂನ ಪ್ರಭಾವ ಎಷ್ಟಿದೆ?
ಪುನೀತ್‌ ಯಾವತ್ತೂ ಕಥೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಒಬ್ಬ ಪ್ರೇಕ್ಷಕನಾಗಿ ಕಥೆಯನ್ನು ಕೇಳುತ್ತಾರೆ. ನನಗೆ ಈ ಸಿನಿಮಾ ಮಾಡ್ತಿದ್ದಾರೆ; ನನ್ನ ಇಮೇಜ್‌ಗೆ ಸರಿಹೊಂದುತ್ತಾ ಎಂಬುದನ್ನೆಲ್ಲ ಮನಸಲ್ಲಿಟ್ಟುಕೊಂಡು ಕಥೆ ಕೇಳುವುದೇ ಇಲ್ಲ. ಅವರಿಂದ ನಮಗೆ ಒರಿಜಿನಲ್‌ ಫೀಡ್‌ಬ್ಯಾಕ್‌ ಸಿಗುತ್ತದೆ. ಅದು ನನಗೆ ದೊಡ್ಡ ಪ್ಲಸ್‌ಪಾಯಿಂಟ್ ಆಯ್ತು. ನಾವೂ ಒಬ್ಬ ಸೂಪರ್‌ಸ್ಟಾರ್‌ಗೆ ಸಿನಿಮಾ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಯಾಕೆಂದರೆ ಕೊಂಚ ಯಾಮಾರಿದರೂ ದೊಡ್ಡ ಹೊಡೆತ ಬೀಳುತ್ತದೆ.

*ಅಂದರೆ ಪುನೀತ್‌ ಅವರ ಈಗಿನ ಇಮೇಜ್‌ಗೆ ಈ ಸಿನಿಮಾ ಹೊಸ ಆಯಾಮವನ್ನು ಸೇರ್ಪಡೆ ಮಾಡುತ್ತದೆ ಅಂತೀರಾ?
ಖಂಡಿತ.
ತುಂಬ ಬೇರೆ ಥರದ ಪ್ರಯತ್ನ ಮಾಡಿದ್ದೇನೆ. ಅವರ ಪಾತ್ರವನ್ನೂ ಬೇರೆಯೇ ಥರ ಟ್ರೀಟ್‌ ಮಾಡಿದ್ದೇನೆ. ಅವರ ಆಂಗಿಕ ಭಾಷೆ, ಮ್ಯಾನರಿಸಂ, ಸ್ಟೈಲ್‌ ಎಲ್ಲವೂ ಫ್ರೆಶ್‌ ಆಗಿರಬೇಕು ಎಂದು ಯೋಚಿಸಿಯೇ ಮಾಡಿದ್ದೇನೆ. ಅವರ ಜತೆ ಕೆಲಸ ಮಾಡುವುದು ಎಂದರೆ ಪ್ರತಿದಿನದ ಹಬ್ಬ.

*ಫಸ್ಟ್‌ಲುಕ್‌ನಲ್ಲಿ ಪುನೀತ್ ಕೈಯಲ್ಲಿ ಕ್ಯಾಮೆರಾ ಇತ್ತು; ಟೀಸರ್‌ನಲ್ಲಿ ದೆವ್ವದ ಛಾಯೆ ಇದೆ. ಏನಿದು?
ಇದು ಆತ್ಮದ ಕಥೆಯೇ. ಆದರೆ ಇಲ್ಲಿ ಒಂದು ದೊಡ್ಡ ಘಟನೆ ಇರುತ್ತದೆ. ಆ ಘಟನೆಯ ಸುತ್ತವೇ ಕಥೆ ನಡೆಯುತ್ತದೆ. ಒಂದು ಪ್ರಯಾಣವೂ ಇದೆ. ಚಿತ್ರಕಥೆ ತುಂಬ ವಿಭಿನ್ನವಾಗಿದೆ. ಪುನೀತ್‌ ಮೈಮೇಲೂ ಆತ್ಮ ಬರುತ್ತದೆ.

*ಪುನೀತ್ ಅವರಂಥ ಸ್ಟಾರ್‌ ನಟರ ಸಿನಿಮಾ ಮಾಡುವಾಗ ಸಾಕಷ್ಟು ಒತ್ತಡ ಇರುತ್ತದೆ. ಅದನ್ನು ಹೇಗೆ ನಿಭಾಯಿಸಿದಿರಿ?
ಒತ್ತಡ ಇರುವುದು ನಿಜ. ಇದು ನನ್ನ ಸ್ಟ್ರೆಂಥೋ ವೀಕ್‌ನೆಸ್ಸೋ ಗೊತ್ತಿಲ್ಲ; ಯಾವುದನ್ನೂ ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಈಗ ನೀವು ಹೇಳಿದ ಮೇಲೆ ನಾನು ಫ್ಲಾಶ್‌ಬ್ಯಾಕ್‌ ಹೋಗಿ ಬಂದೆ. ಇಷ್ಟೆಲ್ಲ ಹೇಗೆ ನಿಭಾಯಿಸಿದೆ ಎಂದು ನನಗೆ ಅಚ್ಚರಿಯಾಗುತ್ತಿದೆ. ನಾವು ಏನು ಮಾಡಲಿಕ್ಕೆ ಹೊರಟಿದ್ದೇವೆ ಎಂಬುದು ಸ್ಪಷ್ಟವಾಗಿ ಗೊತ್ತಿದ್ದರೆ ಹೆಚ್ಚಿನ ಒತ್ತಡ ಇರುವುದಿಲ್ಲ.

*ನಟಸಾರ್ವಭೌಮ ಚಿತ್ರಕ್ಕೆ ಪ್ರೇಕ್ಷಕರನ್ನು ಹೇಗೆ ಆಹ್ವಾನಿಸುತ್ತೀರಿ?‌
ಟೀಸರ್‌, ಟ್ರೇಲರ್, ಹಾಡುಗಳು ಎಲ್ಲವನ್ನೂ ಜನರು ಎಂಜಾಯ್ ಮಾಡುತ್ತಿದ್ದಾರೆ. ನಾನು ಆಹ್ವಾನ ಕೊಡುವುದೇ ಬೇಕಿಲ್ಲ; ಅವರಿಗೇ ಕುತೂಹಲ ಇದೆ. ಇನ್ವಿಟೇಷನ್‌ ಕೊಡೋಣ ಅಂತ ಯಾರಿಗಾದರೂ ಕಾಲ್ ಮಾಡಿದ್ರೆ ನಾನು ಕೇಳುವ ಮೊದಲೇ ಮೂವತ್ತು ಟಿಕೆಟ್ ಬೇಕು ಅಂತಾರೆ. ಇನ್ವಿಟೇಷನ್‌ ಎನ್ನುವುದು ಆರ್ಡರ್ ಆಗಿ ಪರಿವರ್ತಿತವಾಗಿದೆ. ಇಷ್ಟು ಕ್ರೇಜ್‌ ಇರುವುದಕ್ಕೆ ಸಾಕಷ್ಟು ಖುಷಿ ಇದೆ. ಅಷ್ಟೇ ಭಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT