ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಿತ ಜಮೀನು ಖರೀದಿಸಿದ ಪಿ.ಸಿ.ಮೋಹನ್‌: ವಿವರಣೆಗೆ ಎಸ್‌ಟಿಆರ್‌ಆರ್‌ ನೋಟಿಸ್

Last Updated 1 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಸಂಸದ ಪಿ.ಸಿ.ಮೋಹನ್ ದೇವನಹಳ್ಳಿಯಲ್ಲಿ ಬಹು ಕೋಟಿ ಬಂಡವಾಳ ಹೂಡಿ ವಸತಿ ಸಮುಚ್ಚಯ ನಿರ್ಮಿಸಲು ಖರೀದಿಸಿರುವ ಜಮೀನು ಮಠವೊಂದಕ್ಕೆ ಸೇರಿದ್ದು, 50 ವರ್ಷಗಳ ಹಿಂದೆ ಈ ಜಮೀನನ್ನು ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿಗೆ ಸಂಶಯಾಸ್ಪದ ರೀತಿಯಲ್ಲಿ ಮಾರಲಾಗಿದೆ.

ಈ ವಿಚಾರವಾಗಿ ಸೂಕ್ತ ವಿವರಣೆ ನೀಡಬೇಕು ಎಂದು ಸರ್ಕಾರದ ‘ಉಪನಗರಗಳ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ’ (ಎಸ್‌ಟಿಆರ್‌ಆರ್‌) ಸಂಸದಮೋಹನ್ ಅವರಿಗೆ ಸೂಚಿಸಿದೆ. ಈ ಪ್ರಾಧಿಕಾರ ಬೆಂಗಳೂರು ಹೊರವಲಯದ ಬೆಳವಣಿಗೆ ನಿಯಂತ್ರಿಸುವ ಕಾರ್ಯ ನಿರ್ವಹಿಸುತ್ತಿದೆ.

ಪಿ.ಸಿ.ಮೋಹನ್‌ ಅವರು ಪಿಸಿ ರಿಯಾಲಿಟಿ ಸಂಸ್ಥೆಯ ಸಹಭಾಗಿತ್ವದಲ್ಲಿ 42 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ
ಅಭಿವೃದ್ಧಿಪಡಿಸುತ್ತಿದ್ದಾರೆ. ‘ಈ ಬಗ್ಗೆ ವಿವರಣೆ ನೀಡದಿದ್ದರೆ ನಕ್ಷೆ ಮಂಜೂರಾತಿರದ್ದುಪಡಿಸಬೇಕಾಗುತ್ತದೆ’ ಎಂದೂ ಪ್ರಾಧಿಕಾರವು ಮೋಹನ್‌ ಅವರಿಗೆ ಎಚ್ಚರಿಕೆ ನೀಡಿದೆ.

ಜೋಡಿ ಲಕ್ಷ್ಮಿಪುರ ಗ್ರಾಮದ ಸರ್ವೆ ಸಂಖ್ಯೆ 52ರಲ್ಲಿರುವ 4.4 ಎಕರೆಯನ್ನು ಮೋಹನ್‌ 2013ರಲ್ಲಿ ಖರೀದಿಸಿದ್ದು, ಈ ಜಮೀನು ವಿವಾದದ ಕೇಂದ್ರ ಬಿಂದುವಾಗಿದೆ.

‘ಪ್ರಜಾವಾಣಿ’ಗೆ ಲಭಿಸಿರುವ ದಾಖಲೆಗಳ ಪ್ರಕಾರ, ಈ ಭೂಮಿಯು ಮೂಲತಃ ಶೃಂಗೇರಿ ಶಿವಗಂಗಾ ಮಠಕ್ಕೆ ಸೇರಿದೆ. 1959ರಲ್ಲಿ ಅಂದಿನ ಮೈಸೂರು ಸರ್ಕಾರ ಜೋಡಿ ಲಕ್ಷ್ಮಿಪುರ ಗ್ರಾಮದ ಸರ್ವೆ ಸಂಖ್ಯೆ 2–9, 11–39 ಮತ್ತು 56ರಲ್ಲಿ ಇದ್ದ 208.2 ಎಕರೆ ಭೂಮಿಯನ್ನು ಶಿವಗಂಗಾ ಮಠಕ್ಕೆ ನೀಡಿತ್ತು.

1965ರಲ್ಲಿ 208.2 ಎಕರೆ ಭೂಮಿಯನ್ನು ‘ಏರ್‌ಫೋರ್ಸ್‌ ಆಫಿಸರ್ಸ್‌ ಫಾರ್ಮಿಂಗ್‌/ ಹೌಸಿಂಗ್‌ ಕೋ ಆಪರೇಟಿವ್‌ ಸೊಸೈಟಿ’ಗೆ ಮಾರಲು ಮುಜಾರಾಯಿ ಇಲಾಖೆ ತೀರ್ಮಾನಿಸಿತು. 1968ರಲ್ಲಿ ಅಂದಿನ ಕಂದಾಯ ಕಾರ್ಯದರ್ಶಿಯವರು ಈ ‘ವ್ಯವಹಾರ’ವನ್ನು ತಿರ
ಸ್ಕರಿಸಿ, ಈ ಜಮೀನನ್ನು ಮಠ ಮಾರಾಟ ಮಾಡಬಹುದೇ ಹೊರತು ಸರ್ಕಾರವಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳದ ಮುಜರಾಯಿ ಇಲಾಖೆ, ಅದೇ ವರ್ಷ ಸೊಸೈಟಿಗೆ ಶುದ್ಧ ಕ್ರಯಪತ್ರ ಮಾಡಿಕೊಟ್ಟಿತು. ಏರ್‌ಫೋರ್ಸ್‌ ಆಫಿಸರ್ಸ್‌ ಫಾರ್ಮಿಂಗ್‌/ ಹೌಸಿಂಗ್‌ ಕೋ ಆಪರೇಟಿವ್‌ ಸೊಸೈಟಿ ಹೆಸರಿನ ಸೊಸೈಟಿಯೇ ಇಲಾಖೆಯ ದಾಖಲೆಗಳಲ್ಲಿ ಇಲ್ಲ ಎಂದು ಸಹಕಾರ ಇಲಾಖೆ ತಿಳಿಸಿದೆ.

ಈ ಕುರಿತು ಮೋಹನ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ನಾನು ರಮೇಶ್‌ ನಾರಾಯಣ ಎಂಬುವರಿಂದ ಸರ್ವೆ ಸಂಖ್ಯೆ 56ರ 4.4 ಎಕರೆ ಭೂಮಿಯನ್ನು ಪಡೆದಿದ್ದೇನೆ. ಮೂಲತಃ ಅವರು ಸರ್ವೆ ಸಂಖ್ಯೆ 58ಅನ್ನು ಹೊಂದಿದ್ದರು. ಸ್ವತ್ತಿನ ಸಮರ್ಪಕ ಬಳಕೆಯ ಉದ್ದೇಶದಿಂದ ಸೊಸೈಟಿ ಮತ್ತು ನಾರಾಯಣ ಅವರು ಒಪ್ಪಂದ ಮಾಡಿಕೊಂಡು ಸ್ವತ್ತನ್ನು ಪರಸ್ಪರ ಬದಲಿಸಿಕೊಳ್ಳಲಾಯಿತು’ ಎಂದು ಹೇಳಿದರು. ಆದರೆ, 2013ರಲ್ಲಿ ನಾರಾಯಣ ಮತ್ತು ಅವರ ಕುಟುಂಬದವರು ಮೋಹನ್‌ ಅವರಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ.

208.2 ಎಕರೆ ಜಮೀನಿನ ಒಡೆತನ ಮಠಕ್ಕೆ ಸೇರಿದ್ದು, ಅದನ್ನು ಮರಳಿ ವಶಕ್ಕೆ ನೀಡಬೇಕು ಎಂದು ಮಠವು 2015ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿತು. ಆದರೆ, 2017ರಲ್ಲಿ ಮಠದ ಚುಕ್ಕಾಣಿ ಹಿಡಿದ ಹೊಸ ಮುಖ್ಯಸ್ಥರು 1968ರ ಮಾರಾಟದ ಶುದ್ಧ ಕ್ರಯಪತ್ರವನ್ನು ಕಾಯಂಗೊಳಿಸಿದರು.

ಸೊಸೈಟಿಗೆ ಸೇರಿದ ಕ್ರಯಪತ್ರ ನೋಂದಣಿ ಮಾಡಬಾರದು ಎಂದು ನೋಂದಣಿ ಇಲಾಖೆಗೆ ಸಹಕಾರ ಇಲಾಖೆ 2017ರ ಆಗಸ್ಟ್‌ನಲ್ಲಿ ಮನವಿ ಮಾಡಿತ್ತು.ಸೊಸೈಟಿ ನೋಂದಣಿ ಮಾಡಿಕೊಂಡಿದೆಯೊ ಇಲ್ಲವೊ ಎಂಬ ಬಗ್ಗೆ ಮಾಹಿತಿಯೇ ಇಲ್ಲದಿರುವಾಗ ಕ್ರಯಪತ್ರ ನೋಂದಣಿ ಮಾಡಬಾರದು ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT