ಮಂಗಳವಾರ, ಸೆಪ್ಟೆಂಬರ್ 28, 2021
23 °C
ರಹಸ್ಯ ಕಾರ್ಯಾಚರಣೆ ನಡೆಸಿದ್ದ ಸುದ್ದಿ ವಾಹಿನಿ

ಮುಖ್ಯಮಂತ್ರಿ ಟೀಕಿಸಿದ್ದಕ್ಕೆ ಹೆಡ್‌ ಕಾನ್‌ಸ್ಟೆಬಲ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸರ್ಕಾರ ಉರುಳುತ್ತದೆ’ ಎಂದು ಹೇಳಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದ್ದರು ಎನ್ನಲಾದ ಹೆಡ್‌ ಕಾನ್‌ಸ್ಟೆಬಲ್ ನಾಗರಾಜ್ ಎಂಬುವರನ್ನು ಅಮಾನತು ಮಾಡಲಾಗಿದೆ.

‘ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 1ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಅವರನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆಗಿದ್ದೇನು: ‘ನಾಗರಾಜ್‌ ಅವರನ್ನು ಜೆ.ಪಿ.ನಗರದಲ್ಲಿರುವ ಮುಖ್ಯಮಂತ್ರಿಯವರು ಮನೆಯ ಎದುರು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಹಸ್ಯ ಕಾರ್ಯಾಚರಣೆ ನಡೆಸಿದ್ದ ಸುದ್ದಿವಾಹಿನಿಯೊಂದರ ಪ್ರತಿನಿಧಿ, ಅವರನ್ನು ಮಾತನಾಡಿಸಿ ಮುಖ್ಯಮಂತ್ರಿಯವರ ಬಗ್ಗೆ ಅಭಿಪ್ರಾಯ ಕೇಳಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಇವರ ದೌರ್ಜನ್ಯ ಬಹಳ ದಿನ ನಡೆಯೊಲ್ಲ. ಹಳ್ಳಕ್ಕೆ ಬೀಳಲೇ ಬೇಕು. ಅಧಿಕಾರ ಹೋಗಲಿ, ಇವ್ರ ದರ್ಪ – ದೌಲತ್ತು ಗೊತ್ತಾಗುತ್ತದೆ’ ಎಂದು ನಾಗರಾಜ್ ತಮ್ಮ ಅಭಿಪ್ರಾಯ ತಿಳಿಸಿದ್ದರು. ಆ ಹೇಳಿಕೆಯು ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರಿಯ ಅಧಿಕಾರಿಗಳು, ನಾಗರಾಜ್ ಅವರನ್ನು ಅಮಾನತು ಮಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಅಮಾನತು ಮಾಡದಂತೆ ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದ ನಾಗರಾಜ್, ‘ಯಾರೋ ಸಾರ್ವಜನಿಕರು ಇರಬಹುದು ಎಂದುಕೊಂಡು ಅವರ ಜೊತೆ ಮಾತನಾಡಿದೆ. ಆದರೆ, ಅವರು ವಾಹಿನಿಯವರು ಎಂಬುದು ಗೊತ್ತಿರಲಿಲ್ಲ’ ಎಂದು ಹೇಳಿಕೆ ನೀಡಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು