ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಕಾಯಿ ಕಟ್ಟಿಲ್ಲ, ಜೋಳದ ತೆನೆ ಮೂಡಿಲ್ಲ; ಬರ ಅಧ್ಯಯನ ತಂಡಕ್ಕೆ ರೈತರ ಅಳಲು

Last Updated 18 ನವೆಂಬರ್ 2018, 5:42 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಗೆ ಇಂದು(ಭಾನುವಾರ) ಬೆಳಿಗ್ಗೆ ಆಗಮಿಸಿದ ಕೇಂದ್ರ ನೀತಿ ಆಯೋಗದ ಜಂಟಿ ಸಲಹೆಗಾರ ಮಾನಸ್ ಚೌಧರಿ ನೇತೃತ್ವದ ತಂಡ ಕೊರಟಗೆರೆ ತಾಲ್ಲೂಕು ರಾಯವಾರ ಗ್ರಾಮದ ಹತ್ತಿರ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೆ.ಸಿ. ರಾಮಚಂದ್ರ ಹಾಗೂ ಮಂಜುನಾಥ ಅವರ ಜಮೀನಿನಲ್ಲಿ ಬೆಳೆದ ರಾಗಿ, ಮೆಕ್ಕೆ ಜೋಳ, ಶೇಂಗಾ ಬೆಳೆ ಪರಿಶೀಲನೆ ನಡೆಸಿದರು.
ಲಕ್ಷಾಂತರ ಖರ್ಚು ಮಾಡಿ ಬೆಳೆ ಬೆಳೆದರೂ ಕೈಗೆ ಬಂದಿಲ್ಲ. ಮಳೆ ಇಲ್ಲ. ಆರು ಎಕರೆ ಜಮೀನು ಇಟ್ಟುಕೊಂಡು ಬೆಳೆ ಬೆಳೆದರೂ ಕೂಲಿ ಮಾಡಲು ಹೋಗುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ರೈತ ಮಂಜಣ್ಣ ಸಮಸ್ಯೆ ಹೇಳಿಕೊಂಡರು.

ಆರು ಎಕರೆಗೂ ಬೆಳೆ ವಿಮೆ ಮಾಡಿಸಿದ್ದೇನೆ. ಸರ್ಕಾರವೇ ನಮ್ಮ ಕೈ ಹಿಡಿಯಬೇಕು ಎಂದು ಕೋರಿದರು.

ರೈತ ರಾಮಚಂದ್ರ ಮಾತನಾಡಿ, ಮೊದಲು ಮಳೆ ಚೆನ್ನಾಗಿ ಬಂತು. ಮೆಕ್ಕೆ ಜೋಳ, ಶೇಂಗಾ, ರಾಗಿ ಬಿತ್ತನೆ ಮಾಡಿದೇವು. ಆದರೆ, ಬೆಳೆಗೆ ಸಕಾಲದಲ್ಲಿ ಮಳೆ ಬರಲಿಲ್ಲ. ಶೇಂಗಾ ಕಾಯಿ ಕಟ್ಟಿಲ್ಲ. ಮೆಕ್ಕೆ ಜೋಳ ತೆನೆ ಕಟ್ಟಲಿಲ್ಲ. ಆರು ಅಡಿ ಬೆಳೆಯಬೇಕಾಗಿದ್ದ ಮೆಕ್ಕೆ ಜೋಳ ಮೊಳಕಾಲಿನವರೆಗೂ ಬೆಳೆದಿಲ್ಲ. ಮೊಳ ಉದ್ದ ಇರಬೇಕಾಗಿದ್ದ ಮೆಕ್ಕೆ ಜೋಳದ ತೆನೆ ಚೋಟುದ್ದ ಇವೆ. ಕಾಳುಗಳೇ ಇಲ್ಲ ಎಂದು ಸಮಸ್ಯೆ ಬಿಚ್ಚಿಟ್ಟರು.

ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಸಿಇಒ ಅನೀಸ್ ಕಣ್ಮಣಿ ಜಾಯ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ಚಾಮಿ ಅವರು ರೈತರ ಸಮಸ್ಯೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರ ಅಧ್ಯಯನ ತಂಡಕ್ಕೆ ವಿವರಿಸಿದರು.

ರಾಯವಾರ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಬರ ಪರಿಹಾರ ಕಾಮಗಾರಿಯಡಿ ಕುಡಿಯುವ ನೀರು ಮತ್ತುನೈರ್ಮಲ್ಯ ಇಲಾಖೆಯಿಂದ ಒಂದುವರೆ ಲಕ್ಷ ಮೊತ್ತದಲ್ಲಿ ಕೊರೆಸಿದ ಕೊಳವೆ ಬಾವಿಯನ್ನು ಬರ ಅಧ್ಯಯನ ತಂಡ ವೀಕ್ಷಿಸಿತು.

ದನಕರುಗಳಿಗೆ ಕುಡಿಯುವ ನೀರಿಗೆ ಕಟ್ಟಿಸಿದ ಗೋಕಟ್ಟೆಗಳನ್ನು ಪರಿಶೀಲಿಸಿತು.

ಬರ ಅಧ್ಯಯನ ತಂಡದಲ್ಲಿ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೆಂಗಳೂರು ಡಿಜಿಎಂ ಸತ್ಯಕುಮಾರ್, ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಯ ಜಂಟಿ ನಿರ್ದೇಶಕರಾದ ಸುಭಾಶ್ ಚಂದ್ರ ಮೀನಾ, ಕೇಂದ್ರ ಸರ್ಕಾರದ ಎನ್‌ಎಂಎಫ್‌ಸಿಯ ಸಹಾಯಕ ನಿರ್ದೇಶಕಿ ಡಾ.ಶಾಲಿನಿ ಸಕ್ಸೇನಾ ಅವರುಬರ ಅಧ್ಯಯನ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT