ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಜಲಮೂಲ; ಟ್ಯಾಂಕರ್‌ ನೀರೇ ಗತಿ

ನೀರಿಗಾಗಿ ನಿದ್ದೆಗೆಡುತ್ತಿರುವ ಜನ; ಮೇವಿಗಾಗಿ ಊರೂರು ಸುತ್ತಾಟ; ಬರಿದಾದ ತುಂಗಭದ್ರೆ ಒಡಲು
ಅಕ್ಷರ ಗಾತ್ರ

ಹೊಸಪೇಟೆ: ಮುಂಗಾರು, ಹಿಂಗಾರಿನಲ್ಲಾದ ಅಸಮರ್ಪಕ ಮಳೆ, ಕೆಂಡದಂತಹ ಬಿಸಿಲಿನಿಂದ ಬಳ್ಳಾರಿ ಜಿಲ್ಲೆಯ ಬಹುತೇಕ ಜಲಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಕುಡಿಯುವ ನೀರಿಗಾಗಿ ಪರಿ ತಪಿಸುತ್ತಿದ್ದಾರೆ.

ಜನ–ಜಾನುವಾರುಗಳ ದಾಹ ನೀಗಿಸಲು ಜಿಲ್ಲಾ ಆಡಳಿತ ಹಲವು ಕಡೆಗಳಲ್ಲಿ ಕೊಳವೆಬಾವಿ ಕೊರೆಸಿದೆ. ಆದರೆ, ಹೆಚ್ಚಿನ ಕೊಳವೆಬಾವಿಗಳಲ್ಲಿ ನೀರು ದೊರೆತಿಲ್ಲ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಇತ್ತೀಚಿನವರೆಗೆ ನೀರು ಪೂರೈಸಲಾಗಿದೆ. ಈಗ ಅವುಗಳಲ್ಲಿ ಸಹ ನೀರು ಬತ್ತು ಹೋಗಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಬೆರಳೆಣಿಕೆಯಷ್ಟು ಕೊಳವೆಬಾವಿಗಳಲ್ಲಿ ನೀರಿದ್ದು, ಅವುಗಳಿಂದ ಟ್ಯಾಂಕರ್‌ ಮೂಲಕ ತೀವ್ರ ಸಮಸ್ಯೆ ಇರುವ ಭಾಗದ ಜನರಿಗೆ ಪೂರೈಸಲಾಗುತ್ತಿದೆ.

ಟ್ಯಾಂಕರ್‌ಗಳು ಗ್ರಾಮ ಪ್ರವೇಶಿಸುತ್ತಿದ್ದಂತೆ ಜನ ಅವುಗಳನ್ನು ಸುತ್ತುವರಿದು ಮುಗಿ ಬೀಳುತ್ತಿರುವುದು, ಪ್ಲಾಸ್ಟಿಕ್‌ ಕೊಡಗಳನ್ನು ಹಿಡಿದುಕೊಂಡು ಓಡಾಡುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ. ನೀರಿನ ಹಿಂದೆ ಮನೆ ಮಂದಿಯೆಲ್ಲ ಓಡಾಡುತ್ತಿರುವುದರಿಂದ ಜನರ ದೈನಂದಿನ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ನೀರಿಗಾಗಿ ಹೊಡೆದಾಟ–ಬಡಿದಾಟ ಕೂಡ ಆಗಿವೆ. ಸಮಸ್ಯೆಯ ಗಂಭೀರತೆಯನ್ನು ಅರಿತು ಪಂಚಾಯಿತಿ ಸಿಬ್ಬಂದಿಯ ಬಂದೋಬಸ್ತ್‌ನಲ್ಲಿ ನೀರು ಪೂರೈಸಲಾಗುತ್ತಿದೆ.

ತುಂಗಭದ್ರಾ ಜಲಾಶಯದಿಂದ ಸ್ವಲ್ಪವೇ ದೂರದಲ್ಲಿರುವ ಹೊಸಪೇಟೆ ನಗರದಲ್ಲಿ ಅನೇಕ ವರ್ಷಗಳ ನಂತರ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ.ಸಂಡೂರು ರಸ್ತೆ, ವಿವೇಕಾನಂದ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ. ಇನ್ನು ಬಳ್ಳಾರಿ ನಗರದ ಹಲವು ಬಡಾವಣೆಗಳಿಗೆ ಎರಡು ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ.

ಜಿಲ್ಲೆಯ ಹೂವಿನಹಡಗಲಿ, ಸಂಡೂರು, ಹೊಸಪೇಟೆ, ಹರಪನಹಳ್ಳಿಯಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಹುತೇಕ ಗ್ರಾಮಗಳ ಜನರಿಗೆ ಟ್ಯಾಂಕರ್‌ ನೀರೇ ಗತಿಯಾಗಿದೆ. ಜನ ತಡರಾತ್ರಿ ವರೆಗೆ ಟ್ಯಾಂಕರ್‌ಗಾಗಿ ಕಾದು ಕೂರುತ್ತಿದ್ದಾರೆ.

‘ಟ್ಯಾಂಕರ್‌ ನೀರು ಪಡೆಯಲು ತಡರಾತ್ರಿ ಮೂರು ಗಂಟೆಯ ವರೆಗೆ ಕಾದು ಕುಳಿತರೂ ನೀರು ಸಿಗಲಿಲ್ಲ. ಇದರಿಂದ ಬೇಸತ್ತು ಇತ್ತೀಚೆಗೆ ₹850 ಕೊಟ್ಟು ಒಂದು ಟ್ಯಾಂಕರ್‌ ನೀರು ತರಿಸಿಕೊಂಡಿದ್ದೇವೆ. ಹಣವಿದ್ದವರು ನೀರು ತರಿಸಿಕೊಳ್ಳಬಹುದು. ಇಲ್ಲದವರು ಏನು ಮಾಡಬೇಕು’ ಎಂದು ಪ್ರಶ್ನಿಸಿದರು ಕೂಡ್ಲಿಗಿ ತಾಲ್ಲೂಕಿನ ಹುಡೇಂ ಗ್ರಾಮದ ಕವಿತಾ.

ಇದೇ ವೇಳೆ ಮೇವಿನ ಸಮಸ್ಯೆಯೂ ತೀವ್ರವಾಗಿದೆ. ಇದರಿಂದ ಜನರು ದನ, ಕರು, ಕುರಿಗಳನ್ನು ಊರೂರು ಮೇಯಿಸುತ್ತ ಹೋಗುತ್ತಿದ್ದಾರೆ. ಆದರೆ, ಹೋದಲೆಲ್ಲ ಅವರಿಗೆ ನಿರಾಸೆಯಾಗುತ್ತಿದೆ. ಬಿಸಿಲ ಹೊಡೆತಕ್ಕೆ ಬೆಟ್ಟ ಗುಡ್ಡಗಳು ಹಸಿರು ಕಳೆದುಕೊಂಡು ಕೆಂಪಾಗಿವೆ. ಹೊಸಪೇಟೆ ಸಮೀಪದ ಜೋಳದರಾಶಿ ಗುಡ್ಡ, ಕಾಕುಬಾಳು ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ಕರಕಲಾಗಿವೆ. ನೀರು ಹುಡುಕಿಕೊಂಡು ಚಿರತೆ, ಕರಡಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ.

ತುಂಗಭದ್ರಾ ಜಲಾಶಯದ ಒಡಲು ಬರಿದಾಗಿದೆ. ಸದ್ಯ ಮೂರು ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿದೆ. ಇದೇ ರೀತಿ ತಾಪಮಾನವಿದ್ದರೆ ಆವಿಯಿಂದ ಈಗಿರುವಷ್ಟು ನೀರು ಖಾಲಿಯಾಗಬಹುದು ಎನ್ನುತ್ತಾರೆ ಅಧಿಕಾರಿಗಳು. ನೀರು ಖಾಲಿಯಾಗಿ, ಹಿನ್ನೀರು ಪ್ರದೇಶದಲ್ಲಿ ಹುಲ್ಲು ಬೆಳೆದಿದ್ದು, ಜನ ಜಾನುವಾರುಗಳನ್ನು ತಂದು ಮೇಯಿಸುತ್ತಿದ್ದಾರೆ.

ಸತತ ನಾಲ್ಕು ವರ್ಷಗಳಿಂದ ಜಿಲ್ಲೆಯನ್ನು ಬರ ಬೆಂಬಿಡದೆ ಕಾಡುತ್ತಿದೆ. ಹೋದ ವರ್ಷ ಬೇಸಿಗೆಯಲ್ಲಿ ಜಿಲ್ಲೆಯ ಕೆಲವು ಜಲಮೂಲಗಳಲ್ಲಿ ನೀರಿತ್ತು. ಈ ವರ್ಷ ಅದು ಕೂಡ ಇಲ್ಲ. ಅಸಮರ್ಪಕ ಮಳೆಯಿಂದ ಮಳೆಗಾಲದಲ್ಲೇ ಅನೇಕ ಕೆರೆ, ಕಟ್ಟೆಗಳು ನೀರಿಲ್ಲದೆ ಬಿಕೋ ಎನ್ನುತ್ತಿದ್ದವು. ಈಗ ಅವು ಮರುಭೂಮಿಯಂತೆ ಭಾಸವಾಗುತ್ತಿವೆ.

‘ಇಚ್ಛಾಶಕ್ತಿಯ ಕೊರತೆ’

‘ತುಂಗಭದ್ರಾ ಅಣೆಕಟ್ಟೆಯ ನೀರು ಬಳಸಿಕೊಳ್ಳುವುದರಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಜಿಂದಾಲ್‌ ಕಂಪನಿಯು ತೋರಣಗಲ್‌ ಬಳಿ ಕೆರೆ
ಯೊಂದನ್ನು ಅಭಿವೃದ್ಧಿಪಡಿಸಿ, 2.5 ಟಿ.ಎಂ.ಸಿ. ಅಡಿ ನೀರು ಸಂಗ್ರಹಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಆಲಮಟ್ಟಿಯಿಂದ ಪೈಪ್‌ಲೈನ್‌ ಮೂಲಕ ಕಾರ್ಖಾನೆಯ ವಿವಿಧ ಘಟಕಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಂಡಿದೆ. ಖಾಸಗಿ ಕಂಪನಿಗೆ ಇಷ್ಟೆಲ್ಲ ಸಾಧ್ಯವಾಗುವುದಾದರೆ ಸರ್ಕಾರಕ್ಕೆ ಏಕೆ ಆಗುವುದಿಲ್ಲ’ ಎಂದು ಪ್ರಶ್ನಿಸುತ್ತಾರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌.

**

ಸತತ ಬರಗಾಲದಿಂದ ಅಂತರ್ಜಲ ಕುಸಿತಗೊಂಡಿದೆ. ಎಲ್ಲಿ ನೀರಿದೆಯೋ ಅಂತಹ ಕಡೆಗಳಿಂದ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿದೆ.
–ಕೆ. ನಿತೀಶ್‌, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT