ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರೇ ತಾಳ್ಮೆ ವಹಿಸಿ– ಆನ್‌ಲೈನ್ ವ್ಯವಹಾರ ಮಾಡಿ: ಕೃಷಿ ಸಚಿವ ಬಿ.ಸಿ.ಪಾಟೀಲ

ಫೋನ್–ಇನ್ ಕಾರ್ಯಕ್ರಮ
Last Updated 29 ಏಪ್ರಿಲ್ 2020, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಅಟ್ಟಹಾಸದಿಂದ ರೈತ ಸಮುದಾಯಕ್ಕೆ ಭಾರಿ ತೊಂದರೆ ಆಗಿದೆ. ತಾಳ್ಮೆ ಕಳೆದುಕೊಳ್ಳಬೇಡಿ. ಆನ್‌ಲೈನ್‌ ವ್ಯಾಪಾರದ ಕಡೆಗೆ ಗಮನ ಹರಿಸಿ, ರೈತ ಸಂಪರ್ಕ ಕೇಂದ್ರಗಳಲ್ಲೇ ಬಿತ್ತನೆ ಬೀಜ ಖರೀದಿಸಿ...’ ಎಂಬಿತ್ಯಾದಿ ಸಲಹೆಗಳನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ರೈತರಿಗೆ ನೀಡಿದರು.

‘ಹತ್ತಿಗೆ ಬೆಲೆ ಇಲ್ಲ, ಈರುಳ್ಳಿ ಬೆಲೆ ಪಾತಾಳ ಸೇರಿದೆ, ರಸಗೊಬ್ಬರಕ್ಕೆ ಹೆಚ್ಚಿನ ದರ ಪಡೆಯಲಾಗುತ್ತಿದೆ, ಬೆಳೆವಿಮೆ ಪರಿಹಾರ ಬಂದಿಲ್ಲ...’ ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ‘ಪ್ರಜಾವಾಣಿ’ ಫೋನ್‌–ಇನ್ ಕಾರ್ಯಕ್ರಮದಲ್ಲಿ ರೈತರು ಕೇಳಿದದರು. ಸಚಿವರು ಸಮಾಧಾನದಿಂದ ಉತ್ತರಿಸಿ, ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ತಿಳಿಸುವ ಪ್ರಯತ್ನ ಮಾಡಿದರು.

*ಬೆಲೆ ತೀರಾ ಕಡಿಮೆಯಾಗಿರುವ ಕಾರಣ ಬೆಳೆದಿರುವ ಹತ್ತಿಯನ್ನು ಮಾರಾಟ ಮಾಡದೆ ಇಟ್ಟುಕೊಂಡಿದ್ದೇವೆ. ಏನಾದರೂ ದಾರಿ ತೋರಿಸಿ.
–ಕೃಷ್ಣಪ್ಪ, ಕುಂದಗೋಳ, ಸುಲೇಮಾನ್ ಕರಡಗಿ, ಅಫಜಲ್‌ಪುರ

ಸಚಿವ ಬಿ.ಸಿ. ಪಾಟೀಲ: ಲಾಕ್‌ಡೌನ್ ಇರುವ ಕಾರಣ ಸಮಸ್ಯೆ ಇದೆ.ಭಾರತೀಯ ಹತ್ತಿ ನಿಗಮದ (ಸಿಸಿಎ) ಮೂಲಕ ಹತ್ತಿ ಖರೀದಿ ಮಾಡಲಾಗುತ್ತಿದೆ.

*ರಾಗಿ ಬೆಳೆದಿದ್ದೇವೆ, ಮಾರಾಟ ಮಾಡಲು ಹೋದರೆ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ.
– ಶಿವ, ಬಳ್ಳಾರಿ

ಸಚಿವ: ಕ್ವಿಂಟಲ್ ರಾಗಿಗೆ ₹3,150 ದರ ನಿಗದಿ ಮಾಡಲಾಗಿದೆ. ಬೆಂಬಲ ಬೆಲೆಯಲ್ಲಿ ಪ್ರತಿ ರೈತರಿಂದ ತಲಾ 50 ಕ್ವಿಂಟಲ್ ಖರೀದಿ ಮಾಡಲಾಗುತ್ತಿದೆ.

* ಕಡ್ಲೆ ಬೆಳೆದು ಬೆಂಬಲ ಬೆಲೆಯಲ್ಲಿ ಸರ್ಕಾರಕ್ಕೆ ಮಾರಾಟ ಮಾಡಿದ್ದೇವೆ, ಹಣ ಬಂದಿಲ್ಲ.
–ಚಂದ್ರಣ್ಣ, ಚಿತ್ರದುರ್ಗ

ಸಚಿವ: ಹಣ ಬಿಡುಗಡೆ ಮಾಡಿದ್ದು, ಶೀಘ್ರವೇ ನಿಮಗೆ ತಲುಪಲಿದೆ.

* ಕೃಷಿ ಹೊಂಡದಿಂದ ರೈತರ ಜಮೀನಿಗೆ ಸಾಕಷ್ಟು ಅನುಕೂಲ ಇದೆ. ಅಂತಹ ಒಳ್ಳೆಯ ಕಾರ್ಯಕ್ರಮ ನಿಲ್ಲಿಸಬಾರದಿತ್ತು.
–ಚೇತನ್‌ಕುಮಾರ್‌, ಕಡೂರು

ಸಚಿವ: ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಹೊಂಡ ಯೋಜನೆ ಕೈಬಿಡಲಾಗಿದೆ. ಮತ್ತೆ ಕೈಗೆತ್ತಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡುತ್ತೇನೆ.

* ಈ ಹಿಂದೆ ನಿರ್ಮಾಣವಾಗಿರುವ ಕೃಷಿ ಹೊಂಡಕ್ಕೆ ಸಂಬಂಧಿಸಿದ ಹಣವನ್ನು ಬಿಡುಗಡೆ ಮಾಡಿಲ್ಲ.
-ಶಿವಪ್ಪ, ಬೆಳಗಾವಿ

ಸಚಿವ: ಕೃಷಿ ಹೊಂಡದ ಬಾಕಿ ಬಿಲ್ ಪಾವತಿಗೆ ₹40 ಕೋಟಿ ಬಿಡುಗಡೆ ಮಾಡಲಾಗಿದೆ.

*ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. 50 ಕೆ.ಜಿ ಚೀಲಕ್ಕೆ ಹೆಚ್ಚೆಂದರೆ ₹450 ಸಿಗುತ್ತಿದೆ, ಏನು ಮಾಡುವುದು?
–ಹನುಮಂತ ದೇಸಾಯಿ, ಬೆಳಗಾವಿ

ಸಚಿವ: ಲಾಕ್‌ಡೌನ್ ಇರುವ ಕಾರಣ ಸಮಸ್ಯೆ ಇದೆ. ಸ್ವಲ್ಪ ದಿನ ಸಹಿಸಿಕೊಳ್ಳಬೇಕು.

* ಕಿಸಾನ್ ಸಮ್ಮಾನ್ ಯೋಜನೆಯ ಹಣ ರೈತರಿಗೆ ಸಿಕ್ಕಿಲ್ಲ.
–ಶರತ್, ಮೈಸೂರು

ಸಚಿವ: ಕೇಂದ್ರದಿಂದ ₹606 ಕೋಟಿ ಬಿಡುಗಡೆಯಾಗಿದೆ, ಶೀಘ್ರವೇ ರಾಜ್ಯ ಸರ್ಕಾರದಿಂದಲೂ ಹಣ ಬಿಡುಗಡೆ ಮಾಡಲಾಗುತ್ತದೆ.

*10 ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೇನೆ. ಬೆಳೆ ಬೆಳೆಯಲು ಮತ್ತು ಒಣದ್ರಾಕ್ಷಿಗಾಗಿ ಪರಿವರ್ತಿಸಲು ₹15 ಲಕ್ಷ ಖರ್ಚಾಗಿದ್ದು, ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
–ಮಲ್ಲಿಶೆಟ್ಟಿ, ವಿಜಯಪುರ

ಸಚಿವ: ಲಾಕ್‌ಡೌನ್ ಇರುವ ಕಾರಣ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಹೆಚ್ಚು ಗಮನ ಹರಿಸಿ.

*ಹೊಗೆಸೊಪ್ಪು ಬೆಳೆಗೆ ಗೊಬ್ಬರವನ್ನು ತಂಬಾಕು ಮಂಡಳಿ ಇನ್ನೂ ವಿತರಣೆ ಮಾಡುತ್ತಿಲ್ಲ.
–ನಂಜುಂಡ, ಕೆ.ಆರ್.ನಗರ, ಮೈಸೂರು ಜಿಲ್ಲೆ

ಸಚಿವ: ಕೂಡಲೆ ವಿತರಿಸಲು ಸೂಚನೆ ನೀಡುತ್ತೇನೆ.

ನುಗ್ಗೆ ಗಿಡವೇ ಇಲ್ಲದಿದ್ದರೂ ಸಹಾಯಧನ!
ಚಿತ್ರದುರ್ಗ ಜಿಲ್ಲೆಯಲ್ಲಿ ನುಗ್ಗೆ ಗಿಡವೇ ಇಲ್ಲದೆ ಸರ್ಕಾರದ ಸಹಾಯಧನ ಪಡೆಯಲಾಗಿದೆ ಎಂಬ ದೂರಿನ ಸಂಬಂಧ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ನೀಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವ ಬಿ.ಸಿ. ಪಾಟೀಲ ಸೂಚನೆ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹಿರೆ ಹೊಮ್ಮಗನೂರಿನ ಪ್ರಕಾಶ್ ಎಂಬುವರು ಕರೆ ಮಾಡಿ, ‘ಹೊಲದಲ್ಲಿ ಒಂದೇ ಒಂದು ನುಗ್ಗೆ ಗಿಡ ಇಲ್ಲ. ಆದರೂ, ಧನ ಸಹಾಯ ಪಡೆಯಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ ಸತ್ಯಾಂಶ ಗೊತ್ತಾಗಲಿದೆ’ ಎಂದು ಹೇಳಿದರು. ‘ಚಿತ್ರದುರ್ಗದ ಕೃಷಿ ಜಂಟಿ ನಿರ್ದೇಶಕರ ಮೂಲಕ ತನಿಖೆ ನಡೆಸಿ ವರದಿ ತರಿಸಿ’ ಎಂದು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ತಿಳಿಸಿದರು.

ಉತ್ಪನ್ನ ಮಾರಾಟಕ್ಕೆ ವಾರ್ ರೂಂ ಸಂಪರ್ಕಿಸಿ
‘ಮಾರುಕಟ್ಟೆ ಇಲ್ಲ, ಕೊಳ್ಳುವವರಿಲ್ಲ ಎಂದು ಬೆಳೆ ನಾಶ, ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯಬೇಡಿ. ಮಾರಾಟ ಮಾಡಲು ಅವಕಾಶ ಇಲ್ಲವಾದರೆ ಕೃಷಿ ವಾರ್ ರೂಂ ಸಂಪರ್ಕಿಸಿ. ಸರ್ಕಾರ ನಿಮ್ಮ ನೆರವಿಗೆ ಬರಲಿದೆ’ ಎಂದು ಪಾಟೀಲ ಹೇಳಿದರು.

ಬೆಳೆದು ನಿಂತಿರುವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಸಿಗುತ್ತಿಲ್ಲ. ಬೇರೆ ಕಡೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂಬ ರೈತರ ಅಳಲಿಗೆ ಸ್ಪಂದಿಸಿದ ಅವರು, ಹೊರ ಜಿಲ್ಲೆ, ರಾಜ್ಯಗಳಿಗೆ ಸಾಗಣೆ ಮಾಡಲು ಅವಕಾಶ ಇದೆ. ನಿಮಗೆ ದರೆಯಾದರೆಜಿಲ್ಲಾಧಿಕಾರಿಗಳು, ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು ಇರುವುದೇ ನಿಮ್ಮ ಸಹಾಯಕ್ಕಾಗಿ. ಅವರನ್ನು ಸಂಪರ್ಕಿಸಿ. ನಿಮಗೆ ಸೂಕ್ತ ಸಲಹೆ, ಸೂಚನೆ, ನೆರವು ನೀಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT