ಸೋಮವಾರ, ಸೆಪ್ಟೆಂಬರ್ 23, 2019
22 °C
ಬಿಜೆಪಿ ಹೈಕಮಾಂಡ್‌ ಮಧ್ಯಪ್ರವೇಶ

ಫೋನ್‌ ಕದ್ದಾಲಿಕೆ: ತನಿಖೆ ಸಿಬಿಐ ಹೆಗಲಿಗೆ, ರಾಜಕೀಯ ನಾಯಕರು, ಅಧಿಕಾರಿಗಳಿಗೆ ನಡುಕ

Published:
Updated:

ಬೆಂಗಳೂರು: ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಭಾನುವಾರ ಸಿಬಿಐ ತನಿಖೆಗೆ ವಹಿಸಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಉಂಟಾಗಿದೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣದ ಸಮಗ್ರ ತನಿಖೆ ನಡೆದರೆ ಹಲವಾರು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದು ರಾಜಕೀಯ ವಲಯದಲ್ಲಿ ಆತಂಕದ ಅಲೆಯನ್ನೇ ಎಬ್ಬಿಸಿದೆ.

ಇದು ಪ್ರಮುಖವಾಗಿ ಕುಮಾರಸ್ವಾಮಿ ಕೊರಳಿಗೆ ಉರುಳಾಗಿ ಸುತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್, ಬಿಜೆಪಿಯ ಕೆಲವು ಪ್ರಮುಖ ನಾಯಕರಲ್ಲೂ ಆತಂಕ ಮೂಡಿಸಿದೆ. ಕೇವಲ ಕದ್ದಾಲಿಕೆ ನಡೆದಿದೆಯೇ ಇಲ್ಲವೇ ಎಂಬಷ್ಟಕ್ಕೆ ತನಿಖೆ ಸೀಮಿತವಾದರೆ ಕುಮಾರಸ್ವಾಮಿ ಅವರೊಬ್ಬರೇ ಹೊಣೆಗಾರರಾಗಬೇಕಾಗುತ್ತದೆ. ‘ಆಪರೇಷನ್ ಕಮಲ’ ಸೇರಿದಂತೆ ಮೈತ್ರಿ ಸರ್ಕಾರದ 14 ತಿಂಗಳ ಅವಧಿಯ ಎಲ್ಲ ಕದ್ದಾಲಿಕೆಯ ವಿವರಗಳೂ ಹೊರ ಬಂದರೆ
ರಾಜಕೀಯ ಪಕ್ಷಗಳ ನಾಯಕರ ನಡುವಣ ‘ಸಂಬಂಧ’ ರಟ್ಟಾಗಲಿದ್ದು, ಆಗ ಎಲ್ಲರೂ ಬಯಲಿಗೆ ಬಂದು ನಿಂತುಕೊಳ್ಳುತ್ತಾರೆ. ತನಿಖೆಯ ಸ್ವರೂಪದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಫೋನ್ ಕದ್ದಾಲಿಕೆ ಪ್ರಕರಣ ಹೊರಬರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ತನಿಖೆಗೆ ಒತ್ತಡ ಹೆಚ್ಚಾಗಿತ್ತು. ಸ್ವಪಕ್ಷೀಯರ ಜತೆಗೆ ಕಾಂಗ್ರೆಸ್ ಮುಖಂಡರೂ ತನಿಖೆಗೆ ಆಗ್ರಹಿಸಿದ್ದರು. ಆದರೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ದೆಹಲಿಯಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಈ ವಿಚಾರ ಕುರಿತು ಚರ್ಚಿಸಿದ್ದರು. ತಮ್ಮ ರಾಜಕೀಯ ವಿರೋಧಿ ಕುಮಾರಸ್ವಾಮಿ ಅವರನ್ನು ಮಣಿಸಲು ಇದಕ್ಕಿಂತ ಉತ್ತಮ ಅವಕಾಶ ಸಿಗುವುದಿಲ್ಲ ಎನ್ನುವ ಕಾರಣದಿಂದಲೇ  ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ ಎನ್ನಲಾಗಿದೆ.

ರಾಜಕೀಯವಾಗಿ ದ್ವೇಷ ಸಾಧಿಸುವುದಿಲ್ಲ ಎಂದು ಸದನದಲ್ಲಿ ಹೇಳಿದ್ದ ಯಡಿಯೂರಪ್ಪ ಈಗ ವರಸೆ ಬದಲಿಸಿ ಕುಮಾರಸ್ವಾಮಿ ಅವರನ್ನು ಹಣಿಯಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ತನಿಖೆಯನ್ನು ಸಿಬಿಐಗೆ ವಹಿಸುವ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಕೆಪಿಸಿಸಿಯು ಸರ್ಕಾರದ ನಿಲುವನ್ನು ಟೀಕಿಸಿತ್ತು. ಆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಿದ್ದಂತೆಯೇ ಕೆಪಿಸಿಸಿ ತನ್ನ ಟ್ವೀಟ್‌ ಅಳಿಸಿ ಹಾಕಿತು. ‘ಆಪರೇಷನ್ ಕಮಲ' ಸಮಯದಲ್ಲೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ‌ ಇದೆ. ಅದರ ಬಗ್ಗೆಯೂ ಸಿಬಿಐನಿಂದ ತನಿಖೆ ನಡೆಸಬೇಕು’ ಎಂದು ಎಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.

ಶಾಸಕ ಎಚ್.ಕೆ.ಪಾಟೀಲ್, ಸಿಬಿಐ ಬದಲು ಸ್ಥಳೀಯ ತನಿಖಾ ಸಂಸ್ಥೆಗಳಿಗೆ ವಹಿಸುವಂತೆ ಆಗ್ರಹಿಸಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸಿಬಿಐ ತನಿಖೆಗೆ ಆದೇಶಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ’ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಅನರ್ಹ ಶಾಸಕ ಎಚ್.ವಿಶ್ವನಾಥ್ ಕುಟುಕಿದ್ದಾರೆ. ‘ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಟೆಲಿಫೋನ್‌ ಕದ್ದಾಲಿಕೆ ನಡೆದಿತ್ತು ಎಂದು ನಾನು ಹೇಳಿದ್ದು ನಿಜವಾಗಿದೆ. ಈ ಬಗ್ಗೆ ಆಗಲೇ ದೂರು ನೀಡಿದ್ದೆ’ ಎಂದು ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ.

'10 ಜನ್ಮವೆತ್ತಿದರೂ ಕಡಿವಾಣ ಸಾಧ್ಯವಿಲ್ಲ’

‘ಸಿಬಿಐ ಅಲ್ಲ, ಅದಕ್ಕಿಂತ ದೊಡ್ಡ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿದರೂ ನಾನು ತಪ್ಪು ಮಾಡಿದ್ದೇನೆಂದು ಕಂಡುಹಿಡಿಯಲು ಸಾಧ್ಯವಿಲ್ಲ. ದೇವೇಗೌಡರ ಕುಟುಂಬಕ್ಕೆ ತನಿಖೆ ಮೂಲಕ ಕಡಿವಾಣ ಹಾಕಬಹುದೆಂದು ಯಡಿಯೂರಪ್ಪ ಬಯಸಿದ್ದರೆ ಅದು ಸಾಧ್ಯವಿಲ್ಲ. ಅವರು ಹತ್ತು ಜನ್ಮವೆತ್ತಿ ಬಂದರೂ ಕೈಗೂಡದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

‘ದೇವೇಗೌಡರ ಕುಟುಂಬದವರನ್ನು ಜೈಲಿಗೆ ಅಟ್ಟುವುದಾಗಿ ಹೇಳಿದ್ದ ಯಡಿಯೂರಪ್ಪ ಅವರಿಗೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಯಾವುದೇ ತಪ್ಪು ಮಾಡಿಲ್ಲದ ನನಗೆ ತನಿಖೆಯ ಭಯವಿಲ್ಲ. ಸಿಬಿಐ ತನಿಖೆ ಮಾಡಿದರೂ ಅಷ್ಟೇ, ಅಮೆರಿಕ ಅಧ್ಯಕ್ಷ ‌ಡೊನಾಲ್ಡ್ ಟ್ರಂಪ್ ಸಹಕಾರ ಪಡೆದು ತನಿಖೆ ಮಾಡಿದರೂ ಅಷ್ಟೇ. ಯಾವುದೇ ಭಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

‘ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಏನೇನು ನಡೆದಿದೆ ಎಂಬುದನ್ನೂ ತನಿಖೆ‌ ನಡೆಸಲಿ. ಯಾರು ಯಾರ ಜತೆ‌ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು‌ ಬಹಿರಂಗವಾಗಲಿ‌’ ಎಂದು ಆಗ್ರಹಿಸಿದ್ದಾರೆ.

ವ್ಯಂಗ್ಯ: ಸಿದ್ದರಾಮಯ್ಯ ಮಾತಿಗೆ ಗೌರವ ನೀಡಿ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದಾಗಿ ಯಡಿಯೂರಪ್ಪ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ತನಿಖೆ ಹೇಗೆ?

‘ದಿಲ್ಲಿ ಸ್ಪೆಷಲ್‌ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಆ್ಯಕ್ಟ್‌’ ಪ್ರಕಾರ ರಾಜ್ಯ ಸರ್ಕಾರ ಯಾವುದೇ ಪ್ರಕರಣವನ್ನು ಸಿಬಿಐಗೆ ವಹಿಸಬಹುದು. ಅದರಂತೆ ಫೋನ್‌ ಕದ್ದಾಲಿಕೆ ಪ್ರಕರಣವನ್ನೂ ತನಿಖೆಗೆ ಒಪ್ಪಿಸಬಹುದು’ ಎಂದು ಹೈಕೋರ್ಟ್‌ನಲ್ಲಿ ಸಿಬಿಐ ಪರ ವಕೀಲ ಪಿ. ಪ್ರಸನ್ನಕುಮಾರ್‌ ತಿಳಿಸಿದರು.

‘ಈ ಬಗ್ಗೆ ಮೊದಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಈ ಅಧಿಸೂಚನೆಯ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೂರಿನ ರೂಪದಲ್ಲಿ ಸಿಬಿಐಗೆ ಸರ್ಕಾರ ನೀಡುತ್ತದೆ. ಅದರ ಆಧಾರದಲ್ಲಿ ಸಾಮಾನ್ಯ ಪ್ರಕರಣ (ರೆಗ್ಯುಲರ್‌ ಕೇಸ್‌) ಎಂದು ಎಫ್‌ಐಆರ್‌ ದಾಖಲಿಸಿಕೊಂಡು ಸಿಬಿಐ ತನಿಖೆ ಆರಂಭಿಸಲಿದೆ. ನಂತರ ತನಿಖೆ ಆರಂಭವಾಗಲಿದ್ದು, ಅಗತ್ಯ ಬಿದ್ದರೆ ಬಂಧನ ಪ್ರಕ್ರಿಯೆಯೂ ನಡೆಯಲಿದೆ’ ಎಂದೂ ಅವರು ವಿವರಿಸಿದರು.

* ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸ್ವಯಂಪ್ರೇರಿತವಾಗಿ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಸಿಬಿಐ ಮೇಲೆ ನಂಬಿಕೆ ಹುಟ್ಟಿದೆ

-ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ

* ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಫೋನ್ ಕದ್ದಾಲಿಕೆ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯ ಮಾಡಿದ್ದರು. ಅದರಂತೆ ಸಿಬಿಐಗೆ ವಹಿಸಲಾಗಿದೆ

-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Post Comments (+)