ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ದ್ವೇಷದಿಂದ ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ: ಸಿದ್ದರಾಮಯ್ಯ ಆರೋಪ

Last Updated 19 ಆಗಸ್ಟ್ 2019, 5:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಫೋನ್ ಕದ್ದಾಲಿಕೆ ಪ್ರಕರಣವನ್ನು ನನ್ನ ಸಲಹೆ ಮೇರೆಗೆ ಸಿಬಿಐಗೆ ನೀಡಲಾಗಿದೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೂರಕ್ಕೆ ನೂರರಷ್ಟು ಸುಳ್ಳು' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐನಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಅಮಿತ್ ಶಾ ನಿರ್ದೇಶನದ ಮೇರೆಗೆ ಬಿಎಸ್ ವೈ ರಾಜಕೀಯ ದ್ವೇಷ ಸಾಧಿಸುವುದಕ್ಕಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಅವರಿಗೆ ನನ್ನ ಸಲಹೆ ಏನೆಂದರೆ, ಆಪರೇಷನ್ ಕಮಲ ಪ್ರಕರಣವನ್ನು ಸಿಬಿಐಗೆ ನೀಡಲಿ. ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಶಾಸಕರ ಖರೀದಿಗೆ ಬಳಸಲಾಗಿದೆ ಎಂದು ಆರೋಪಿಸಿದರು.

ಸಿಬಿಐ ಎಂದರೆ ಬಿಜೆಪಿಗೆ ಈ ಮೊದಲು ವಾಕರಿಕೆ ಇತ್ತು. ಆದರೆ, ಈಗ ಸಿಬಿಐ ಬಗ್ಗೆ ವ್ಯಾಮೋಹ ಬಂದಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಭೀಕರ ಪ್ರವಾಹ ಸಂಭವಿಸಿ ₹1ಲಕ್ಷ ಕೋಟಿ ನಷ್ಟವಾಗಿದೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದು ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಮುಖ್ಯಮಂತ್ರಿ ಅವರು ಪ್ರಧಾನಿಯನ್ನು ಭೇಟಿ ಮಾಡಿದರೂ ಇದುವರೆಗೆ ಕೇಂದ್ರ ಸರ್ಕಾರ ನಯಾಪೈಸೆ ಪರಿಹಾರ ನೀಡಿಲ್ಲ. 2009ರಲ್ಲಿ ರಾಜ್ಯದಲ್ಲಿ ಇದೇ ರೀತಿ ಪ್ರವಾಹ ಸಂಭವಸಿದ್ದಾಗ ಅಂದಿನ ಪ್ರಧಾನಿ ಮನಮೋಹನ ಸಿಂಗ್ ತಕ್ಷಣ ₹1600 ಕೋಟಿ ಪರಿಹಾರ ಘೋಷಣೆ ಮಾಡಿದ್ದರು. ಕೇಂದ್ರ, ರಾಜ್ಯದಲ್ಲಿ ಅವರದೇ ಸರ್ಕಾರ ಇದೆ. ಹೀಗಿದ್ದರೂ ಪರಿಹಾರ ಕೊಡಲು ಇವರಿಗೇನು ಬಂದಿದೆ ರೋಗ ಎಂದು ಖಾರವಾಗಿ ಪ್ರಶ್ನಿಸಿದರು.

ಪ್ರವಾಹ ನಷ್ಟ ಎಷ್ಟು ಆಗಿದೆ ಎಂಬ ಪ್ರಸ್ತಾವನೆಯನ್ನೇ ರಾಜ್ಯ ಸರ್ಕಾರ ಇನ್ನೂ ತಯಾರಿಸಿಲ್ಲ ಎಂದು ಆರೋಪಿಸಿದರು.ಮೋದಿ ಕಂಡರೆ ಯಡಿಯೂರಪ್ಪ ಗಡಗಡ ಎನ್ನುತ್ತಾರೆ. ಯಾವ ಕಾರಣಕ್ಕಾಗಿ ಈ ರೀತಿ ಭಯ ಪಡುತ್ತಾರೋ ಗೊತ್ತಿಲ್ಲ. ಮೋದಿ ಜೊತೆ ಮಾತನಾಡಲು, ಪರಿಹಾರ ಕೇಳಲು ನಿಮಗೆ ಆಗದಿದ್ದರೆ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಿ. ನಾವು ಮಾತನಾಡುತ್ತೇವೆ ಎಂದು ಹೇಳಿದರು.

ಅಮಿತ್ ಶಾ ಮರ್ಜಿಯಲ್ಲಿ ಯಡಿಯೂರಪ್ಪ ಇದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಸಂವಿಧಾನದ ಬಗ್ಗೆ ಬಿಜೆಪಿ ಅವರಿಗೆ ಗೌರವ ಇಲ್ಲ ಎಂದು ಆರೋಪಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT