ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕದ ಮಧ್ಯೆ ಒಂದು ಮಧುರ ಕ್ಷಣ

chowkattu-rajaram
Last Updated 21 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ನೂರಾರು ಅಡಿ ಆಳ ಭೂಮಿಯಲ್ಲಿ ರಂದ್ರ ಕೊರೆದು ಗಂಗಾವತರಣ ಮಾಡುವ ‘ಬೋರ್‌ವೆಲ್‌’ ಕಂಪನಿಗಳು ನಗರದಲ್ಲಿ ಹೇರಳವಾಗಿವೆ. ಸ್ವಂತಕ್ಕೆ ಮನೆಕಟ್ಟುವವರು, ಸಣ್ಣ ಪುಟ್ಟ ವಸತಿ ಸಮುಚ್ಚಯಗಳು, ಮತ್ತಿತರರು ಪರಿಣಿತರನ್ನು ಕರೆಸಿ ತಮ್ಮ ನಿವೇಶನದಲ್ಲಿ ಜಲದ ಮೂಲವನ್ನು ಹುಡುಕಿಸಿ, ವಾಸ್ತು ಮೂಲೆ ಮುಂತಾದ ನಂಬಿಕೆಗಳಿಗೆ ತಾಳೆಹಚ್ಚಿ, ಕಟ್ಟಡದ ನಕ್ಷೆಗೂ ಸರಿ ಹೊಂದುವ ಜಾಗವನ್ನು ನಿರ್ಧರಿಸಿ ಬೋರ್ ವೆಲ್ ಕಂಪನಿಯೊಂದಕ್ಕೆ ಗುತ್ತಿಗೆ ನೀಡುವುದು ನಡೆಯುತ್ತಲೇ ಸಾಗಿದೆ.

ಒಂದು ಸಮೀಕ್ಷೆಯ ಪ್ರಕಾರ, ಕೆಲವು ದಶಕಗಳಲ್ಲಿ ಗಲ್ಫ್ ದೇಶಗಳ ಭೂಮಿಯಡಿಗಿನ ಪೆಟ್ರೋಲಿಯಮ್ ಸಂಗ್ರಹ ಖಾಲಿಯಾಗಬಹುದೆಂಬ ಎಚ್ಚರಿಕೆ ಗಂಟೆ ಬಾರಿಸಿದಂತೆಯೇ, ವೈಜ್ಞಾನಿಕ ಹಿಡಿತವಿಲ್ಲದೇ ಸಾಗಿರುವ ಈ ದಂಧೆಗಳಿಂದ ಬೆಂಗಳೂರಿನ ಬೋರ್‌ವೆಲ್ ಅಂತರ್ಜಲ ಸಂಗ್ರಹಗಳೂ ಎರಡು- ಮೂರು ದಶಕಗಳಲ್ಲಿ ಭಾಗಶಹ ಬತ್ತಿ ಹೋಗುವ ಅಪಾಯ ಬಂದೊದಗುವುದೂ ಅಪಾಯಕಾರಿ ಸಂಗತಿಯೇ! ಇರಲಿ, ದಿನದಿನವೂ ಹೆಚ್ಚುತ್ತಿರುವ ಬೆಂಗಳೂರಿನ ಜನರ ಬೇಡಿಕೆಗೆ ಈಗಂತೂ ಜಲಮಂಡಳಿಯ ಹೊರೆಯನ್ನು ಕಡಿಮೆಮಾಡಬಲ್ಲ ಹೊಸ ಬೋರ್‌ವೆಲ್‌ಗಳನ್ನು ತೆಗೆಯುವುದಂತೂ ಅನಿವಾರ್ಯವೇ ಆಗಿದೆ.

ಜೆ.ಪಿ. ನಗರದ ಬಳಿ ವಸತಿ ಸಮುಚ್ಚಯಯೊಂದರ ಕಟ್ಟಡದ ಕಾರ್ಯ ಪ್ರಾರಂಭವಾಗಿರುವ ಸಂದರ್ಭದಲ್ಲಿ ಒಂದು ಮಧ್ಯಾಹ್ನ ಕಂಡ ಊಟ ಮುಗಿಸಿ ಹರಟುತ್ತಾ ಕುಳಿತ ಬೋರ್‌ವೆಲ್‌ ಕಾರ್ಮಿಕರ ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿರುವವರು, ಅಲ್ಲೇ ಬಳಿಯ ಕೊತನೂರು ನಿವಾಸಿ ರಮೇಶ್ ತೇರದಾಳ್.

ವೃತ್ತಿಯಲ್ಲಿ ಚಿತ್ರಕಲಾಕಾರರಾಗಿ, ಸಾಕ್ಷ್ಯಚಿತ್ರ ನಿರ್ದೇಶಕರೂ ಆಗಿರುವ ಅವರು, ಛಾಯಾಗ್ರಹಣವನ್ನು ಹತ್ತಾರು ವರ್ಷಗಳಿಂದಲೂ ಹವ್ಯಾಸವಾಗಿ ತೊಡಗಿಸಿಕೊಂಡಿದ್ದು, ದೇಶ- ವಿದೇಶಗಳಲ್ಲೂ ಪ್ರವಾಸಿ, ಜನಜೀವನ, ಕ್ಯಾಂಡಿಡ್ ಇತ್ಯಾದಿ ವಿಭಾಗಗಳಲ್ಲಿ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಅವರು ಬಳಸಿರುವ ಕ್ಯಾಮೆರಾ, ಕೆನಾನ್ 750 ಡಿ, ಜೊತೆಗೆ 55 – 250 ಎಂ.ಎಂ. ಜೂಂ ಲೆನ್ಸ್. ಅವರ ಎಕ್ಸ್‌ಪೋಷರ್‌ ವಿವರ ಇಂತಿವೆ : 79 ಎಂ.ಎಂ. ಫೋಕಲ್ ಲೆನ್ತ್‌ನಲ್ಲಿ ಆಟೋಮ್ಯಾಟಿಕ್ ಮೋಡ್ ಅಳವಡಿಸಿ, ಅಪರ್ಚರ್ ಎಫ್. 5.6 ಶಟರ್ ವೇಗ 1/ 100 ಸೆಕೆಂಡ್, ಐ.ಎಸ್.ಒ. 3200, ನಲ್ಲಿ ಟ್ರೈಪಾಡ್ ಮತ್ತು ಫ್ಲಾಶ್ ಬಳಸದೇ ಇರುವುದು ಆಗಿವೆ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

* ಕೊಳವೆ ಬಾವಿ ತೆಗೆಯುವ ಸಾಮಗ್ರಿ- ಎಂಜಿನ್, ಇತ್ಯಾದಿ ಹೊತ್ತಿರುವ ದೊಡ್ಡ ಲಾರಿಯ ಹಿನ್ನೆಲೆಯು ಈ ಚಿತ್ರದ ಸಂದರ್ಭವನ್ನು ಔಚಿತ್ಯಪೂರ್ಣವಾಗಿ ತೋರಿಸುತ್ತಿದೆ. ಮುಖ್ಯ ವಸ್ತುಗಳಾದ ಕಾರ್ಮಿಕರು ವಿರಮಿಸುತ್ತಾ ಕುಳಿತಿರುವುದೂ, ಬಾವಿಗೆ ಇಳಿಸುವ ಕಬ್ಬಿಣದ ಕೊಳವೆಗಳ ಮೇಲೆಯೇ ಆಗಿದ್ದು, ಚಿತ್ರದ ಆಶಯಕ್ಕೆ ಪೂರಕವೇ ಆಗಿವೆ. ಕಾಲು- ಮೈ- ಕೈಗೆಲ್ಲಾ ಮೆತ್ತಿರುವ ಹಸಿ ಮಣ್ಣು – ಧೂಳು, ಆ ಮಂದಿಯ ಕಾಯಕಕ್ಕೆ ಕನ್ನಡಿಹಿಡಿದಿವೆ. ಊಟದ ಬಿಡುವು ಎಂದು ಅವರು ಕೈ- ಕಾಲು ಮುಖವನ್ನೆಲ್ಲಾ ಸ್ವಚ್ಚವಾಗಿ ತೊಳೆದುಕೊಳ್ಳದೇ ಇರುವುದು, ಅವರ ಜೀವನ ಕ್ರಮದ ಸಹಜತೆಯನ್ನು ಕಣ್ಣಿಗೆ ನಾಟಿಸುತ್ತದೆ.

ಕಾರ್ಪಣ್ಯದ ಮಧ್ಯೆಯೂ ಜೀವನ ಸಂತೋಷದ ಕ್ಷಣಗಳನ್ನು ಹಂಚಿಕೊಂಡು ಹಸನಾಗಿಸಬಲ್ಲ ಶಕ್ತಿ ಅವರೆಲ್ಲರ ಸಹಬಾಳ್ವೆಗಿದೆ ಎಂಬ ಆಶಯವನ್ನು ಚಿತ್ರ ಸೂಸುತ್ತದೆ. ಅಂತೆಯೇ, ಕ್ಯಾಮೆರಾಕ್ಕೆ ಪೋಸ್ ನೀಡದೇ ಅವರಿಗರಿವಿಲ್ಲದಂತೆ ಸೆರೆಹಿಡಿದ ಈ ಚಿತ್ರ, ಕ್ಯಾಂಡಿಡ್ ಛಾಯಾಗ್ರಹಣಕ್ಕೆ ಒಂದು ಉತ್ತಮ ಮಾದರಿ.

* ಮಧ್ಯಾಹ್ನದ ಸಮಯವಾದ್ದರಿಂದ ವರ್ಣಗಳು ಸ್ಫುಟವಾಗಿ ಮೂಡದೇ, ಚಿತ್ರ ಓವರ್ ಎಕ್ಸ್ ಪೋಸ್ ಆಗಿಬಿಟ್ಟಿದೆ. ಕಾರಣ, ಐ.ಎಸ್ ಒ. ತುಂಬಾ ಹೆಚ್ಚಾಯಿತು. ಅದನ್ನು 400 ಇಟ್ಟಿದ್ದರೆ ಸಾಕಿತ್ತು. ಮ್ಯಾನ್ಯುಯೆಲ್ ಮೋಡ್ ನಲ್ಲಿ ಅದು ಸುಲಭ ಸಾಧ್ಯ.

* ಕಲಾತ್ಮಕವಾಗಿ ಜಂಜಾಟದ ಮಧ್ಯೆಯೇ ಕಾರ್ಮಿಕರ ಜೀವನ ಸಂತೋಷವನ್ನೂ ಸೂಸುವ ಅಪೂರ್ವವಾದ ಕ್ಷಣವೊಂದನ್ನು ಕಣ್ಣಿಗೆ ನಾಟಿಸುವಲ್ಲಿ ಛಾಯಾಗ್ರಾಹಕರು ಸಫಲರಾಗಿದ್ದಾರೆ.

* ಚೌಕಟ್ಟಿನಲ್ಲಿ ತೋರ್ಪಡಿಸಿರುವ ವಸ್ತುಗಳ್ಯಾವುವೂ ಅನವಶ್ಯಕವೆಂದೆನಿಸದೇ ಚಿತ್ರಣದ ಒಟ್ಟಾರೆ ಆಶಯಕ್ಕೆ ಪೂರಕವಾಗಿರುವುದು, ಚಿತ್ರದ ಅಖಂಡತೆಗೆ ( ಇನ್ಫಿನಿಟಿ) ಸಹಕಾರಿಯಾಗಿದೆ.

* ಸಂಯೋಜನೆಯ ಬಗ್ಗೆ ಅವಲೋಕಿಸಿದಾಗ, ಬಲ ಮೂಲೆಯಿಂದ ಸಾಗುವ ಕೊಳವೆಗಳು ಚಿತ್ರದ ಮುಖ್ಯವಸ್ತುವಿನೆಡೆಗೆ (ಎಂಟ್ರಿ ಪಾಯಿಂಟ್- ಬಲ ಭಾಗದ ಕಾರ್ಮಿಕ) ಸಾಗುತ್ತಿರುವುದು ಸೆಳೆಯುವ ಎಳೆಗಳಾಗಿ (ಲೀಡಿಂಗ್ ಲೈನ್ಸ್ ತರಹ) ಕಾಣಿಸುತ್ತಿವೆ.

ನಂತರ ನೋಡುಗನ ದೃಷ್ಟಿಯು ಹಸನ್ಮುಖಿಗಳಾಗಿರುವ ಇತರ ಮೂವರ ಮುಖಗಳನ್ನೂ ಗಮನಿಸಿ, ಅಲ್ಲಿಂದ ಹಸಿರು ಅಂಗಿ ತೊಟ್ಟವನ ನಗು ಮುಖಕ್ಕೆ ನಾಟಿ ಮತ್ತೆ ಮೊದಲ ವ್ಯಕ್ತಿಯೆಡೆಗೇ ಹಾರುವುದು ಕಣ್ಣಿನ ಚಲನೆಯ (ಐ ಮೂವ್‌ಮೆಂಟ್‌ನ) ಔಚಿತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT