ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾ ಪಂದ್ಯದಲ್ಲಿ ಭಾರತ

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಇಪೊ, ಮಲೇಷ್ಯಾ: ಉತ್ತಮ ಅವಕಾಶಗಳನ್ನು ಕೈಚೆಲ್ಲಿದ ಭಾರತ ತಂಡ ಸುಲ್ತಾನ್‌ ಅಜ್ಲಾನ್‌ ಶಾ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 1–1ರಿಂದ ಡ್ರಾ ಮಾಡಿಕೊಂಡಿತು.

ಒಲಿಂಪಿಕ್‌ ಚಾಂಪಿಯನ್‌ ಅರ್ಜೆಂಟೀನಾ ಎದುರು ಶನಿವಾರ 2–3ರಿಂದ ಸೋತ ಭಾರತ ತಂಡದವರು ಭಾನುವಾರ ಚೇತರಿಸಿಕೊಂಡು ಅಂಗಣಕ್ಕೆ ಇಳಿದಿದ್ದರು. ಮೊದಲ ಕ್ವಾರ್ಟರ್‌ನಲ್ಲೇ ಗೋಲು ಗಳಿಸಿ ಮೇಲುಗೈ ಸಾಧಿಸುವುದಕ್ಕೂ ತಂಡಕ್ಕೆ ಸಾಧ್ಯವಾಯಿತು. ಈ ಮುನ್ನಡೆಯನ್ನು ಅಂತಿಮ ಕ್ವಾರ್ಟರ್‌ ವರೆಗೆ ಕಾಯ್ದುಕೊಳ್ಳುವಲ್ಲೂ ಯಶಸ್ವಿಯಾಯಿತು. ಆದರೆ ಕೊನೆಯಲ್ಲಿ ಆಘಾತ ಅನುಭವಿಸಿತು.

14ನೇ ನಿಮಿಷದಲ್ಲಿ ತಮ್ಮ ಚೊಚ್ಚಲ ಗೋಲು ಗಳಿಸಿದ ಶಿಲಾನಂದ ಲಾಕ್ರಾ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು. ಆದರೆ 53ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅನ್ನು ಗೋಲಾಗಿ ಪರಿವರ್ತಿಸಿದ ಮಾರ್ಕ್‌ ಗ್ಲೆಗರ್ನ್‌ ಅವರು ಇಂಗ್ಲೆಂಡ್‌ನ ಸಮಬಲಕ್ಕೆ ಕಾರಣರಾದರು.

ಯುವ ಆಟಗಾರರಿಗೆ ಅವಕಾಶ
ಸರ್ದಾರ್‌ ಸಿಂಗ್ ನೇತೃತ್ವದ ತಂಡ ಯುವ ಆಟಗಾರರನ್ನು ಭಾನುವಾರ ಕಣಕ್ಕೆ ಇಳಿಸಿತ್ತು. ಆದರೆ ಒಂಬತ್ತು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿ ನಿರಾಸೆಗೆ ಒಳಗಾಯಿತು. ಪಂದ್ಯದ ಆರಂಭದಲ್ಲಿ ಇಂಗ್ಲೆಂಡ್‌ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ನಿರಂತರ ಆಕ್ರಮಣ ನಡೆಸಿತು. ಆದರೆ ಕೆಲವೇ ನಿಮಿಷಗಳಲ್ಲಿ ಲಯ ಕಂಡುಕೊಂಡ ಭಾರತ ಎದುರಾಳಿಗಳಲ್ಲಿ ಆತಂಕ ಮೂಡಿಸಿದರು. 14ನೇ ನಿಮಿಷದಲ್ಲಿ ತಲ್ವಿಂದರ್ ಸಿಂಗ್‌ ನಡೆಸಿದ ಗೋಲು ಗಳಿಸುವ ಪ್ರಯತ್ನವನ್ನು ಇಂಗ್ಲೆಂಡ್ ಗೋಲ್‌ ಕೀಪರ್‌ ಹ್ಯಾರಿ ಗಿಬ್ಸನ್‌ ವಿಫಲಗೊಳಿಸಿದರು.

ಆದರೆ ವಾಪಸ್ ಬಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಶಿಲಾನಂದ ಮಿಂಚಿನ ವೇಗದಲ್ಲಿ ಗೋಲು ಗಳಿಸಿದರು. ದ್ವಿತೀಯಾರ್ಧ ಪೂರ್ತಿ ಭಾರತ ಪಾರುಪತ್ಯ ಸ್ಥಾಪಿಸಿತು. ಹೀಗಾಗಿ ತಂಡಕ್ಕೆ ಎಂಟು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಆದರೆ ಡ್ರ್ಯಾಗ್‌ ಫ್ಲಿಕ್ ಪರಿಣಿತರಾದ ವರುಣ್‌ ಕುಮಾರ್ ಮತ್ತು ಅಮಿತ್ ರೋಹಿದಾಸ್‌ ಅವರಿಗೆ ಗುರಿ ಮುಟ್ಟಲು ಆಗಲಿಲ್ಲ. ಗಿಬ್ಸನ್‌ ಬದಲಿಗೆ ಎದುರಾಳಿಗಳ ಗೋಲು ಪೆಟ್ಟಿಗೆ ಕಾಯುತ್ತಿದ್ದ ಜಾರ್ಜ್ ಪಿನ್ನರ್‌ ಎಲ್ಲ ಶ್ರಮಗಳನ್ನೂ ವಿಫಲಗೊಳಿಸಿ ಇಂಗ್ಲೆಂಡ್ ತಂಡದ ರಕ್ಷಕನ ಪಾತ್ರ ವಹಿಸಿದರು.

ಈ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್‌ಗೂ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಆದರೆ ಗೋಲು ಗಳಿಸಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. 48ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಲು ಭಾರತಕ್ಕೆ ಅತ್ಯುತ್ತಮ ಅವಕಾಶ ಲಭಿಸಿತ್ತು. ಆದರೆ ಪೆನಾಲ್ಟಿ ಕಾರ್ನರ್‌ನಲ್ಲಿ ಯಶಸ್ಸು ಕಾಣಲು ಮತ್ತೊಮ್ಮೆ ವಿಫಲವಾಯಿತು. ಪಂದ್ಯ ಮುಕ್ತಾಯಕ್ಕೆ ಏಳು ನಿಮಿಷಗಳು ಬಾಕಿ ಇದ್ದಾಗ ಗೋಲ್‌ ಕೀಪರ್ ಕೃಷ್ಣ ಬಿ.ಪಾಠಕ್ ಅವರನ್ನು ವಂಚಿಸಿ ಇಂಗ್ಲೆಂಡ್‌ ತಿರುಗೇಟು ನೀಡಿತು.

ಈ ಡ್ರಾ ಮೂಲಕ ಪಾಯಿಂಟ್‌ ಭಾರತದ ಮುಂದಿನ ಹಾದಿ ಕಠಿಣವಾಗಿದೆ. ಆರು ತಂಡಗಳು ಪಾಲ್ಗೊಳ್ಳುತ್ತಿರುವ ಟೂರ್ನಿಯಲ್ಲಿ ಸೋಮವಾರ ವಿಶ್ರಾಂತಿ ದಿನ. ವಿಶ್ವದ ಅಗ್ರ ಕ್ರಮಾಂಕದ ತಂಡವಾದ ಆಸ್ಟ್ರೇಲಿಯಾವನ್ನು ಭಾರತ ಮಂಗಳವಾರ ಎದುರಿಸಲಿದೆ. ಬುಧವಾರ ಮಲೇಷ್ಯಾ ಮತ್ತು ಶುಕ್ರವಾರ ಐರ್ಲೆಂಡ್‌ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT