ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಸಗಟು ತರಕಾರಿ ಮಾರಾಟಕ್ಕೆ ಸ್ಥಳ ನಿಗದಿ

ಎಪಿಎಂಸಿ ವರ್ತಕರ ಸಭೆ; ನಿಯಮ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ
Last Updated 3 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸುವ ದೃಷ್ಟಿಯಿಂದ ನಗರದ ಹೊರವಲಯದ 4 ದಿಕ್ಕುಗಳಲ್ಲಿ ಪ್ರತ್ಯೇಕ ಸಗಟು ತರಕಾರಿ ಮಾರಾಟಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಸೋಮವಾರದಿಂದ ಆ ಸ್ಥಳಗಳಲ್ಲಷ್ಟೆ ಅವಕಾಶ ಕಲ್ಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಇಲ್ಲಿನ ಎಪಿಎಂಸಿಯಲ್ಲಿ ಶುಕ್ರವಾರ ನಡೆದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.

‘ಹೊರವಲಯದ ಹಿಂಡಾಲ್ಕೊ ಮೈದಾನ, ಆರ್‌ಟಿಒ ಮೈದಾನ, ಪೋದ್ದಾರ್‌ ಶಾಲಾ ಮೈದಾನ ಹಾಗೂ ಬಿ.ಎಸ್. ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಜಾಗದಲ್ಲಿ ಮಾತ್ರವೆ ತರಕಾರಿ ಮಾರಾಟಕ್ಕೆ ಅವಕಾಶವಿದೆ. ಅಲ್ಲಿ ವ್ಯಾಪಾರಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಎಪಿಎಂಸಿ ಅಧಿಕಾರಿಗಳು ಕ್ರಮ ವಹಿಸಬೇಕು. ಭಾನುವಾರದವರೆಗೆ ಈಗಿರುವ ವ್ಯವಸ್ಥೆಯಲ್ಲೇ ವಹಿವಾಟು ನಡೆಸಬೇಕು. ಉಳ್ಳಾಗಡ್ಡಿ, ಆಲೂಗಡ್ಡೆ ಮತ್ತು ಗೆಣಸಿನ ವಹಿವಾಟನ್ನು ಮಾತ್ರ ಮುಖ್ಯ ಪ್ರಾಂಗಣದಲ್ಲಿ ನಡೆಸಬೇಕು’ ಎಂದು ಸೂಚಿಸಿದರು.

ಕ್ರಮದ ಎಚ್ಚರಿಕೆ:‘ತರಕಾರಿ ಸೇರಿಂದತೆ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ವಿನಾಕಾರಣ ವ್ಯತ್ಯಯ ಉಂಟು ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಇಡೀ ದೇಶವೇ ಸಂದಿಗ್ಧ ಸ್ಥಿತಿಯಲ್ಲಿ ಇರುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ವ್ಯಾಪಾರಿಗಳು ಮತ್ತು ರೈತರು ಸೇರಿದಂತೆ ಎಲ್ಲರೂ ಕೈಜೋಡಿಸಬೇಕು. ಎಲ್ಲರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ ಆಗಿದೆ. ಆದ್ದರಿಂದ ಸ್ವಲ್ಪ ಅನಾನುಕೂಲ ಆದರೂ ಸರಿಯೇ, ಎಲ್ಲರೂ ಸಹಕರಿಸಬೇಕು. ರೈತರು ಮತ್ತು ವ್ಯಾಪಾರಿಗಳಿಗೆ ಅನುಕೂಲ ಆಗುವಂತೆ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ’ ಎಂದರು.

‘ವ್ಯಾಪಾರಿಗಳು, ಹಮಾಲರು ಸೇರಿದಂತೆ ಎಲ್ಲರಿಗೂ ಅಗತ್ಯವಿರುವಷ್ಟು ಪಾಸ್‌ಗಳನ್ನು ಒದಗಿಸಲಾಗುವುದು. ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕಿರುವುದರಿಂದ ಯಾರೂ ವ್ಯಾಪಾರ-ವಹಿವಾಟು ಬಂದ್ ಮಾಡಬಾರದು. ಸಾರ್ವಜನಿಕರ ದೃಷ್ಟಿಯಿಂದ ಸಹಕರಿಸಬೇಕು’ ಎಂದು ತಿಳಿಸಿದರು.

‘ನಿತ್ಯ ಸಾವಿರಾರು ಕ್ವಿಂಟಲ್ ಮೆಣಸಿನಕಾಯಿ ಬರುತ್ತದೆ. ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಖಾನಾಪುರ ಮತ್ತಿತರ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ವರ್ತಕರು ಕೋರಿದರು.

ವ್ಯಾಪಾರಕ್ಕೆ ಅವಕಾಶ:‘ಕಿತ್ತೂರು, ಖಾನಾಪುರ, ಹಿರೇಬಾಗೇವಾಡಿ ಮತ್ತಿತರ ಕಡೆಗಳಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಎಪಿಎಂಸಿ ಪ್ರಾಂಗಣದಲ್ಲಿ ಸಗಟು ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು. ಸಾರ್ವಜನಿಕರು ಕೂಡ ತರಕಾರಿ ಖರೀದಿಸಲು ಇಲ್ಲಿಗೆ ಬರುತ್ತಿರುವುದರಿಂದ ಜನಸಂದಣಿ ಹೆಚ್ಚಾಗುತ್ತದೆ. ಆದ್ದರಿಂದ ಸಗಟು ವ್ಯಾಪಾರಿಗಳನ್ನು ಹೊರತುಪಡಿಸಿ ಉಳಿದವರನ್ನು ನಿರ್ಬಂಧಿಸಬೇಕು. ನಿತ್ಯವೂ ಎಲ್ಲ ಬಗೆಯ ಪದಾರ್ಥಗಳ ವಹಿವಾಟು ಬದಲಿಗೆ ಒಂದು ದಿನ ತರಕಾರಿ, ಇನ್ನೊಂದು ದಿನ ಕಾಳುಗಳ ವಹಿವಾಟು ನಿಗದಿಪಡಿಸಿದರೆ ಜನಸಂದಣಿ ನಿಯಂತ್ರಣ ಸಾಧ್ಯ’ ಎಂದು ವರ್ತಕರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಯಶೋಧಾ ವಂಟಗೋಡಿ, ಎಸಿಪಿ ನಾರಾಯಣ ಭರಮನಿ, ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳು, ವರ್ತಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT