ಮಲ್ಪೆ ದೋಣಿ ನಾಪತ್ತೆ ಪ್ರಕರಣ:ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್‌ ಬಾಕ್ಸ್‌ಗಳು ಪತ್ತೆ

7
ಮಲ್ಪೆಯಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ದುರಂತಕ್ಕೀಡಾಗಿರುವ ಶಂಕೆ

ಮಲ್ಪೆ ದೋಣಿ ನಾಪತ್ತೆ ಪ್ರಕರಣ:ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್‌ ಬಾಕ್ಸ್‌ಗಳು ಪತ್ತೆ

Published:
Updated:

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ದುರಂತಕ್ಕೀಡಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಪುಷ್ಠಿ ನೀಡುವಂತೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲಾ ವ್ಯಾಪ್ತಿಯ ಸಮುದ್ರದಲ್ಲಿ ಸ್ಥಳೀಯ ಮೀನುಗಾರರಿಗೆ ಮೀನು ಶೇಖರಿಸಿಡುವ ಕೆಲವು ಪ್ಲಾಸ್ಟಿಕ್‌ ಬಾಕ್ಸ್‌ಗಳು ಸಿಕ್ಕಿವೆ.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ, ‘ಬೋಟ್ ದುರಂತಕ್ಕೀಡಾಗಿದೆ ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಮಹಾರಾಷ್ಟ್ರ ಮೀನುಗಾರರಿಗೆ ಪ್ಲಾಸ್ಟಿಕ್‌ ಕಂಟೇನರ್‌ಗಳು ಯಾವ ಭಾಗದಲ್ಲಿ ಸಿಕ್ಕಿವೆ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದರು.

ಪ್ಲಾಸ್ಟಿಕ್‌ ಬಾಕ್ಸ್‌ಗಳ ಮೇಲೆ ಎಸ್‌.ಟಿ ಎಂದು ಬರೆಯಲಾಗಿದೆ. ಎಸ್‌.ಟಿ ಎಂದರೆ ನಾಪತ್ತೆಯಾಗಿರುವ ‘ಸುವರ್ಣ ತ್ರಿಭುಜ’ ಬೋಟ್‌ನ ಹೆಸರು ಇರಬಹುದು ಎಂಬ ಶಂಕೆ ಇದೆ. ಸಿಂಧುದುರ್ಗದ ಎಸ್‌ಪಿ ತನಿಖೆಯ ನೇತೃತ್ವ ವಹಿಸಿದ್ದಾರೆ. ಜತೆಗೆ ರಾಜ್ಯದ ಅಧಿಕಾರಿಗಳ ತಂಡ ಮಹಾರಾಷ್ಟ್ರಕ್ಕೆ ತೆರಳಿದೆ. ಮೀನುಗಾರರು ಆತಂಕಪಡುವ ಅಗತ್ಯವಿಲ್ಲ. ಶೀಘ್ರ ಬೋಟ್‌ ಪತ್ತೆಯಾಗಲಿದೆ ಎಂದು ತಿಳಿಸಿದರು.

ಮೀನುಗಾರರ ಪತ್ತೆ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿಲ್ಲ. ನಾಪತ್ತೆಯಾದ ದಿನದಿಂದಲೂ ಶಕ್ತಿಮೀರಿ ಶ್ರಮಿಸಿದೆ. ಕೇಂದ್ರ ಸರ್ಕಾರದ ನೆರವು ಪಡೆದು ಹೆಲಿಕಾಪ್ಟರ್‌ಗಳ ಮೂಲಕ, ಹಡಗುಗಳ ಮೂಲಕ ಶೋಧ ನಡೆಸಲಾಗಿದೆ. ಕೋಸ್ಟಲ್‌ ಗಾರ್ಡ್‌ ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !