ದಲೈಲಾಮ ಹತ್ಯೆಗೆ ರಾಮನಗರದಲ್ಲಿ ಬಂಧಿತನಾದ ಉಗ್ರನಿಂದ ಸಂಚು?

7
ಉಗ್ರ ಮುನೀರ್‌ನಿಂದಲೇ ಹತ್ಯೆ ಹೊಂಚು: ಆರೋಪ

ದಲೈಲಾಮ ಹತ್ಯೆಗೆ ರಾಮನಗರದಲ್ಲಿ ಬಂಧಿತನಾದ ಉಗ್ರನಿಂದ ಸಂಚು?

Published:
Updated:

ಬೆಂಗಳೂರು/ ರಾಮನಗರ: ರಾಮನಗರದಲ್ಲಿ ಬಂಧಿತನಾಗಿದ್ದ ಜಮಾತ್‌ಉಲ್ ಮುಜಾಹಿದ್ದೀನ್‌ ಬಾಂಗ್ಲಾದೇಶ್ ಸಂಘಟನೆ ಮುಖ್ಯಸ್ಥ ಮೊಹಮ್ಮದ್‌ ಜಹಿದುಲ್ ಇಸ್ಲಾಂ ಕೌಸರ್‌ ಅಲಿಯಾಸ್ ಮುನೀರ್‌, ಟಿಬೆಟಿಯನ್‌ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ಸಂಗತಿ ಜನರನ್ನು ಬೆಚ್ಚಿ ಬೀಳಿಸಿದೆ.

ಇದೇ ವರ್ಷ ಜನವರಿ 19ರಂದು ಬಿಹಾರದ ಬೋಧಗಯಾದಲ್ಲಿ ಬಾಂಬ್‌ ಸ್ಫೋಟ ನಡೆದಿತ್ತು. ಅಲ್ಲಿ ದಲೈಲಾಮ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಮ್ಯಾನ್ಮಾರ್‌ ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿರುವ ರೋಹಿಂಗ್ಯಾ ಮುಸ್ಲಿಮರಿಗೆ ಬೆಂಬಲ ಸೂಚಿಸಲು ಮತ್ತು ಭಾರತ ಸರ್ಕಾರದ ವಿರುದ್ಧ ಹೋರಾಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೆಪ್ಟೆಂಬರ್‌ 27ರಂದು ಪಟ್ನಾದ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.

ಬೋಧಗಯಾದ ಕಾಲಚಕ್ರ ಮೈದಾನದಲ್ಲಿ ಅಡುಗೆ ಮಾಡುತ್ತಿದ್ದ ಸ್ಥಳದಲ್ಲಿ ಬಾಂಬ್‌ ಅಡಗಿಸಿಡಲಾಗಿತ್ತು. ಟಿಬೆಟಿಯನ್‌ ಧರ್ಮಗುರು ಹಾಗೂ ಬಿಹಾರದ ರಾಜ್ಯಪಾಲರ ಭೇಟಿ ಸಮಯದಲ್ಲಿ ಬಾಂಬ್‌ಗಳನ್ನು ಸ್ಫೋಟಿಸಿ, ಅನುಯಾಯಿಗಳಲ್ಲಿ ಆತಂಕ ಸೃಷ್ಟಿಸಬೇಕೆಂಬ ಉದ್ದೇಶವನ್ನು ಆರೋಪಿಗಳು ಹೊಂದಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಆ ಸಂಚಿನಲ್ಲಿ ಉಗ್ರರು ಯಶಸ್ವಿಯಾಗದ ಕಾರಣ ಬೆಂಗಳೂರಿನತ್ತ ಮುಖ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಜಹಿದುಲ್‌ ಇಸ್ಲಾಂ ಕೌಸರ್‌ ಸೇರಿ ಏಳು ಉಗ್ರರನ್ನು ಬಂಧಿಸಲಾಗಿದೆ. ಕೌಸರ್‌ ಹಾಗೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಅದಿಲ್‌ ಶೇಖ್‌ ಅಲಿಯಾಸ್‌ ಅಸಾದುಲ್ಲಾ ಅವರನ್ನು ಆಗಸ್ಟ್‌ 6 ಮತ್ತು 7ರಂದು ಬಂಧಿಸಲಾಗಿದ್ದು, ಅಸ್ಸಾಮಿನ ಆರೀಫ್‌ ಹುಸೇನ್‌ ಅಲಿಯಾಸ್‌ ಅನಾಸ್‌ ತಲೆಮರೆಸಿಕೊಂಡಿದ್ದಾನೆ.

ಕೌಸರ್‌ ಇಸ್ಲಾಂ ಉಳಿದ ಆರೋಪಿಗಳ ಜೊತೆಗೂಡಿ ಮೂರು ಸುಧಾರಿತ ಬಾಂಬ್‌ಗಳು ಹಾಗೂ ಎರಡು ಕೈಬಾಂಬ್‌ ಸಿದ್ಧಪಡಿ
ಸಿದ್ದ. ಅವುಗಳನ್ನು ಅದಿಲ್‌ ಶೇಖ್‌, ದಿಲಾವರ್‌ ಹುಸೇನ್‌ ಹಾಗೂ ಆರೀಫ್ ಹುಸೇನ್‌ ಬೋಧಗಯಾದ ಮೈದಾನದಲ್ಲಿ ಅಡಗಿಸಿಟ್ಟಿದ್ದರು 
ಎಂದು ಎನ್‌ಐಎ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ.

ರಾಜ್ಯದಲ್ಲೂ ಸಂಚು?:  ರಾಮನಗರಕ್ಕೆ ದಲೈಲಾಮ ಭೇಟಿಗೆ ವಾರದ ಮೊದಲು ಮುನೀರ್‌ ಬಂಧಿತನಾಗಿರುವುದು ಅವರ ಹತ್ಯೆಗೆ ಉಗ್ರರು ಹೊಂಚು ಹಾಕುತ್ತಿದ್ದರೆ ಎಂಬ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡುತ್ತದೆ. ಆಗಸ್ಟ್‌ 13ರಂದು ಧರ್ಮಗುರು, ರಾಮನಗರ ತಾಲ್ಲೂಕಿನ ಹೆಜ್ಜಾಲದ ದಲೈಲಾಮ ಉನ್ನತ ಶಿಕ್ಷಣ ಸಂಸ್ಥೆಯ ವಸತಿ ನಿಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂದು ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಬೆಂಗಳೂರು ವಿ.ವಿ. ಕುಲಪತಿ ಕೆ.ಆರ್‌. ವೇಣುಗೋಪಾಲ್‌, ಮೈಸೂರು ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಭಾಗವಹಿಸಿದ್ದರು.

ಹೆಜ್ಜಾಲದಲ್ಲಿರುವ ಈ ಉನ್ನತ ಶಿಕ್ಷಣ ಸಂಸ್ಥೆಯು ಟಿಬೆಟಿಯನ್‌ ಸಂಪ್ರದಾಯದಂತೆ ಆ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಇಲ್ಲಿ ಬೌದ್ಧ ಧರ್ಮದ ಪ್ರಾಚ್ಯವಸ್ತು ಸಂಗ್ರಹಾಲಯ ಸ್ಥಾಪಿಸುವ ಪ್ರಯತ್ನವೂ ನಡೆದಿದೆ.

ಬಂಧನ: ಆಗಸ್ಟ್‌ 6ರಂದು ನಸುಕಿನಲ್ಲಿ ರಾಮನಗರದ ಟ್ರೂಪ್‌ಲೈನ್‌ ಪ್ರದೇಶದಲ್ಲಿನ ಮನೆಯೊಂದರಿಂದ ಶಂಕಿತ ಉಗ್ರ ಮುನೀರ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅಲ್ಲದೆ ಜಿಲೆಟಿನ್‌ ಪುಡಿ ಹಾಗೂ ಕೆಲವು ದಾಖಲೆ
ಗಳನ್ನು ವಶಪಡಿಸಿಕೊಂಡಿದ್ದರು. ಮುನೀರ್‌ ಸಂಬಂಧಿಗಳು ಒಟ್ಟು ಮೂರು ಕುಟುಂಬಗಳಾಗಿ ರಾಮನಗರದಲ್ಲಿ 
ನೆಲೆಸಿದ್ದು, ಆರೋಪಿಯ ಬಂಧನವಾಗುತ್ತಲೇ ಅಲ್ಲಿಂದ ಪರಾರಿಯಾಗಿದ್ದರು.

*****

ದಲೈಲಾಮಾ ಹತ್ಯೆಗೆ ಉಗ್ರರು ರಾಜ್ಯದಲ್ಲಿ ಸಂಚು ರೂಪಿಸಿದ್ದರು ಎಂಬ ಸಂಗತಿ ನಿರಾಧಾರ. ಅಂತಹ ಯಾವುದೇ ಯೋಜನೆ ರಾಜ್ಯದಲ್ಲಿ ರೂಪುಗೊಂಡ ಮಾಹಿತಿ ಇಲ್ಲ.

– ಜಿ. ಪರಮೇಶ್ವರ, ಗೃಹ ಸಚಿವ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !