ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಆವಾಸ್‌: ವಾರದಲ್ಲಿ ಅನುದಾನ ಬಿಡುಗಡೆ– ಸೋಮಣ್ಣ

1.02 ಲಕ್ಷ ಫಲಾನುಭವಿಗಳಿಗೆ ₹400 ಕೋಟಿ ಹಂಚಿಕೆ
Last Updated 22 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕಿನ ಭೀತಿಯಿಂದ ಬಡವರ ಮನೆ ನಿರ್ಮಾಣ ಕಾರ್ಯಗಳಿಗೆ ಅಡ್ಡಿ ಉಂಟಾಗಬಾರದು ಎಂಬ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯ 1.02 ಲಕ್ಷ ಫಲಾನುಭವಿಗಳ ಖಾತೆಗಳಿಗೆ ತಕ್ಷಣವೇ ಹಣ ಜಮೆ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಒಂದು ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಅನುದಾನ ಹಂಚಿಕೆ ಮಾಡಲು ₹ 400 ಕೋಟಿ ಬೇಕಾಗಲಿದೆ. ಹಣಕಾಸು ಇಲಾಖೆಗೆ ಈ ಸಂಬಂಧ ಪತ್ರ ಬರೆಯಲಾಗುತ್ತಿದ್ದು, ವಾರದೊಳಗೆ ಎಲ್ಲ ಪ್ರಕ್ರಿಯೆ ಕೊನೆಗೊಂಡು ಆರ್‌ಟಿಜಿಎಸ್‌ ಮೂಲಕ ಫಲಾನುಭವಿಗಳ ಖಾತೆಗಳಿಗೆ ದುಡ್ಡು ಹಾಕಲಾಗುವುದು. ಇದೇ ಯೋಜನೆಯಡಿಯಲ್ಲಿ ಈಗಾಗಲೇ 1.22 ಲಕ್ಷ ಫಲಾನುಭವಿಗಳಿಗೆ ಒಟ್ಟಾರೆ ₹ 528 ಕೋಟಿ ಮಂಜೂರು ಮಾಡಲಾಗಿದೆ’ ಎಂದು ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 1 ಲಕ್ಷ ಬಹುಮಹಡಿ ಕಟ್ಟಡಗಳ ಮೂಲಕ ಮನೆ ಇಲ್ಲದವರಿಗೆ ಮನೆ ನೀಡುವ ಯೋಜನೆ ಘೋಷಿಸಲಾಗಿತ್ತು. ಆದರೆ ಒಂದಿಷ್ಟು ಕೆಲಸವೂ ಆಗಿರಲಿಲ್ಲ. ಇದೀಗ 46,499 ಮನೆಗಳ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿದ್ದು, 43 ಸಾವಿರ ಮನೆಗಳ ನಿರ್ಮಾಣ ಆರಂಭವಾಗಿದೆ. ಇನ್ನೊಂದು ವರ್ಷದಲ್ಲಿ ಮನೆಗಳ ಹಸ್ತಾಂತರ ಮಾಡಲಾಗುವುದು’ ಎಂದರು.

ಪ್ರಧಾನಮಂತ್ರಿ ಟೌನ್‌ಶಿಪ್‌: ‘ವಸತಿ ರಹಿತರಿಂಧ ಆನ್‌‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದಾಗ 43 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಹೀಗಾಗಿ ಜಿಗಣಿ ಹೋಬಳಿಯ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಸಮೀಪ 1,938 ಎಕರೆ ಪ್ರದೇಶದಲ್ಲಿ 30 ಸಾವಿರ ನಿವೇಶನಗಳನ್ನು ಪ್ರಧಾನಮಂತ್ರಿ ಟೌನ್‌ಶಿಪ್‌ ಹೆಸರಲ್ಲಿ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ 564 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಂದೂವರೆ ವರ್ಷದಲ್ಲಿಎರಡು ಹಂತಗಳಲ್ಲಿ ನಿವೇಶನಗಳು ಸಿದ್ಧವಾಗಲಿವೆ’ ಎಂದು ಸಚಿವರು ತಿಳಿಸಿದರು.‌

ಹರಪನಹಳ್ಳಿ, ಸೂರ್ಯನಗರ, ರಾಜಾಪುರ, ಉಡುಪಿಯ ಕೊರಂಗವಾಡಿ, ಬೆಂಗಳೂರು ದಕ್ಷಿಣದ ಬನ್ನೇನಹಳ್ಳಿ, ನೆಲಮಂಗಲದ ಮಾದನಾಯ್ಕನಹಳ್ಳಿಗಳಲ್ಲಿ 400 ಎಕರೆ ಪ್ರದೇಶದಲ್ಲಿ 6 ಸಾವಿರ ನಿವೇಶನಗಳನ್ನು ನಿರ್ಮಿಸುತ್ತಿದ್ದು, ಬಹುತೇಕ ಕೊನೆಯ ಹಂತಕ್ಕೆ ಬಂದಿವೆ. ಕನಕಪುರದ ರಾಯಸಂದ್ರ, ಚಿಕ್ಕಮಗಳೂರಿನ ಮೂಡಿಗೆರೆ, ಮೈಸೂರಿನ ಇಲವಾಲ, ಗದಗದ ಮುಂಡರಗಿ, ಕೊಪ್ಪಳಗಳಲ್ಲಿ 340 ಎಕರೆ ಪ್ರದೇಶದಲ್ಲಿ 5,100 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಸಾಕಷ್ಟು ಅರ್ಜಿಗಳು ಬಂದಿವೆ’ ಎಂದು ಸಚಿವರು ವಿವರಿಸಿದರು.

‘ರೈತರೊಂದಿಗೆ ಹಂಚಿಕೆ ಮಾಡುವ ಒಪ್ಪಂದದಂತೆ ಜಿಲ್ಲಾ ಮಟ್ಟದಲ್ಲಿ 50;50 ಅನುಪಾತದಲ್ಲಿ, ತಾಲ್ಲೂಕು ಮಟ್ಟದಲ್ಲಿ 40:60 ಅನುಪಾತದಲ್ಲಿ ನಿವೇಶನ ಹಂಚಿಕೊಂಡು 24 ಸಾವಿರ ನಿವೇಶನ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ’ ಎಂದರು.

‘ಕೊಳೆಗೇರಿ ಅಭಿವೃ‌ದ್ಧಿ ಮಂಡಳಿಯಿಂದ 83,119 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿ 3 ವರ್ಷವಾಗಿದ್ದರೂ ಯಾವುದೇ ಕೆಲಸ ಆಗಿರಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಕೆಲಸ ಚುರುಕುಗೊಂಡಿದೆ, ಮನೆಗಳ ನಿರ್ಮಾಣವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT