ಲೂಟೊ, ಬಾಟೊ ಸರ್ಕಾರ: ಮೋದಿ ವಾಗ್ದಾಳಿ

ಮಂಗಳವಾರ, ಮಾರ್ಚ್ 26, 2019
33 °C
ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಲೂಟೊ, ಬಾಟೊ ಸರ್ಕಾರ: ಮೋದಿ ವಾಗ್ದಾಳಿ

Published:
Updated:

ಕಲಬುರ್ಗಿ: ‘ರಾಜ್ಯದಲ್ಲಿ ಇರುವುದು ಲೂಟೊ (ಲೂಟಿ ಮಾಡಿ), ಬಾಟೊ (ಹಂಚಿ) ಸರ್ಕಾರ. ಅಧಿಕಾರದಾಹಿ ಕಾಂಗ್ರೆಸ್‌ನ ರಿಮೋಟ್‌ ಕಂಟ್ರೋಲ್‌ ಮುಖ್ಯಮಂತ್ರಿ’ ಎಂದು ಜರಿದ ಪ್ರಧಾನಿ ನರೇಂದ್ರ ಮೋದಿ, ‘ಭ್ರಷ್ಟ ಹಾಗೂ ಕುಟುಂಬ ರಾಜಕೀಯ ಪೋಷಕರೆಲ್ಲ ಸೇರಿ ಕರ್ನಾಟಕದಲ್ಲಿರುವಂತಹ ‘ಸುಭದ್ರ’ ಸರ್ಕಾರವನ್ನೇ ಕೇಂದ್ರದಲ್ಲಿಯೂ ರಚಿಸಲು ಹೊರಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ರಾಜ್ಯ ಸರ್ಕಾರದ ದೊಡ್ಡ ಕೆಲಸವಾಗಿದೆ. ಬೆಳಿಗ್ಗೆ ಒಬ್ಬ ಬಂದು 2 ಕೊಡಿ ಎನ್ನುತ್ತಾನೆ. ಮಧ್ಯಾಹ್ನ ಬಂದವ ನಾಲ್ಕು, ಸಂಜೆ ಬಂದವ 8 ಕೇಳುತ್ತಾನೆ. ರಾಜ್ಯವನ್ನು ಲೂಟಿ ಮಾಡಿ ಅವರಿಗೆ ಹಂಚುತ್ತಿದ್ದಾರೆ’ ಎಂದು ಆರೋಪಿಸಿದರು.

‘ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಸಾಲಮನ್ನಾ ಮಾಡಿಲ್ಲ. ಬದಲಿಗೆ ಅವರ ಮೇಲೆ ಮೊಕದ್ದಮೆ ದಾಖಲಿಸಿದೆ. ಜನರನ್ನು ಮೂರ್ಖರನ್ನಾಗಿ ಮಾಡಿದ ಇವರು ನಾವು ಕೊಡುವ ಹಣವನ್ನೂ ರೈತರಿಗೆ ಕೊಡುತ್ತಿಲ್ಲ. ಇವರನ್ನು ಕ್ಷಮಿಸಬೇಡಿ’ ಎಂದು ಕರೆ ನೀಡಿದರು.

‘ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ₹2 ಸಾವಿರ ನೆರವು ನೀಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ರಾಜ್ಯದ 51 ಲಕ್ಷ ರೈತರಿಗೆ ಪ್ರಯೋಜನ ದೊರೆಯಲಿದೆ. ಈ ರೈತರಿಗೆ ತಲಾ ₹2 ಸಾವಿರ ಸಿಕ್ಕರೆ ಅವರೆಲ್ಲ ಮೋದಿ...ಮೋದಿ ಅನ್ನುತ್ತಾರೆ ಎಂಬ ಭಯದಿಂದ ರಾಜ್ಯ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನೇ ನೀಡಿಲ್ಲ. ಹಣ ಹೊಡೆಯಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಕೇಂದ್ರದ ಯೋಜನೆಗಳಿಗೆ ಹೀಗೆ ತಡೆಗೋಡೆಯಂತಾದರೆ ಅದನ್ನು ಜನರೇ ಧ್ವಂಸಗೊಳಿಸುತ್ತಾರೆ’ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕಲಬುರ್ಗಿಯಲ್ಲಿ ಮೋದಿ: ‘ರಾಜ್ಯದಲ್ಲಿದೆ ಜನವಿರೋಧಿ ಸರ್ಕಾರ’

ಈ ಸಂದರ್ಭದಲ್ಲಿ ಚಿಂಚೋಳಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ.ಉಮೇಶ ಜಾಧವ ಬಿಜೆಪಿಗೆ ಸೇರ್ಪಡೆಯಾದರು.

‘ನಿಮ್ಮ ಭರವಸೆ ಮೇಲೆ ಪಕ್ಷ ಸೇರ್ಪಡೆ’

‘ನಾನು ಚಿಕ್ಕ ಶಾಸಕ. ದೊಡ್ಡ ನಾಯಕನನ್ನು ಎದುರು ಹಾಕಿಕೊಳ್ಳುತ್ತಿದ್ದೇನೆ. ನಿಮ್ಮ ಭರವಸೆ ಮೇಲೆ ಪಕ್ಷ ಸೇರ್ಪಡೆ ಆಗಿದ್ದೇನೆ. ಆದ್ದರಿಂದ, ನೀವೆಲ್ಲ ಆಶೀರ್ವಾದ ಮಾಡಬೇಕು’ ಎಂದು ಡಾ.ಉಮೇಶ ಜಾಧವ ಮನವಿ ಮಾಡಿದರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ‘ಮುಂದೆ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಒಳ್ಳೆಯ ಕೆಲಸಗಳನ್ನು ಮಾಡಲು ಒಂದು ಬಾರಿ ಅವಕಾಶ ಮಾಡಿಕೊಡಿ’ ಎಂದು ಕೇಳಿಕೊಂಡರು.

* ನಮ್ಮ ಶಕ್ತಿ ಕಂಡು ಜಗತ್ತೇ ಬೆರಗಾಗಿದೆ. ನೀವೆಲ್ಲ ನನ್ನೊಂದಿಗೆ ಇರುವಾಗ ಪಾಕಿಸ್ಥಾನ ಅಷ್ಟೇ ಅಲ್ಲ, ನಮ್ಮ ವಿರೋಧಿಗಳಿಗೂ ನಾನೇಕೆ ಹೆದರಲಿ?

–ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 3

  Sad
 • 0

  Frustrated
 • 3

  Angry

Comments:

0 comments

Write the first review for this !