ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ರಕ್ಷಣೆಯನ್ನು ನಿರ್ಲಕ್ಷಿಸಿದ ಮೋದಿ ಕ್ಷಮೆ ಕೇಳಲಿ: ಉಗ್ರಪ್ಪ

Last Updated 18 ನವೆಂಬರ್ 2019, 6:21 IST
ಅಕ್ಷರ ಗಾತ್ರ

ಬಳ್ಳಾರಿ: '126 ಫೈಟರ್‌ ಜೆಟ್ಸ್ ಖರೀದಿಗೆ 2001 ರಲ್ಲಿ ಕೈಗೊಂಡ ನಿರ್ಧಾರವನ್ನು ಬದಲಿಸಿ 36 ಜೆಟ್ಸ್ ಖರೀದಿಗೆ ನಿರ್ಧಾರ ಮಾಡಿ ದೇಶದ ರಕ್ಷಣೆ ವಿಷಯದಲ್ಲಿ‌ ನಿರ್ಲಕ್ಷ್ಯ ತೋರಿದ ಪ್ರಧಾನಿ ‌ನರೇಂದ್ರ ಮೋದಿ ದೇಶದ ಜನರ ಕ್ಷಮೆ‌ಯಾಚಿಸಬೇಕೇ ಹೊರತು ರಾಹುಲ್ ಗಾಂಧಿಯವರಲ್ಲ' ಎಂದು ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ ಪ್ರತಿಪಾದಿಸಿದರು.

'ರಫೆಲ್‌ ಯುದ್ಧ ವಿಮಾನ ‌ಖರೀದಿ ಪ್ರಕರಣದ ಕುರಿತು ಜಂಟಿ‌ ಸದನ‌ ಸಮಿತಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ರಾಹುಲ್ ಗಾಂಧಿ‌ ಕ್ಷಮೆ ಕೇಳುವ ಅಗತ್ಯವಿಲ್ಲ' ಎಂದು ನಗರದಲ್ಲಿ‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ರಾಜ್ಯದಲ್ಲಿ ಬರಗಾಲ ‌ಮತ್ತು ಪ್ರವಾಹದ ಹಾವಳಿ ಹೆಚ್ಚಿ ಅಪಾರ ನಷ್ಟವಾಗಿರುವುದರಿಂದ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು, ಪರಿಹಾರ ನೀಡಬೇಕು ಎಂದು ಬಿಜೆಪಿಯವರು ಕೇಂದ್ರ ಸರ್ಕಾರವನ್ನು ಆಗ್ರಹಿಸಲೇ ಇಲ್ಲ. ಈಗ ರಾಹುಲ್ ಗಾಂಧಿಯವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ' ಎಂದರು.

'ಕೇಂದ್ರ ಸರ್ಕಾರದ ನಿರ್ಧಾರಗಳಿಂದ ದೇಶದಲ್ಲಿ ಏರ್ಪಟ್ಟಿರುವ ಜ್ವಲಂತ ಸಮಸ್ಯೆಗಳ ‌ಕುರಿತ ಚರ್ಚೆಯ ‌ದಿಕ್ಕು ತಪ್ಪಿಸಲೆಂದೇ ಬಿಜೆಪಿ‌ ನಾಯಕರು ದೇಶದಾದ್ಯಂತ ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.

'ಸಿದ್ದರಾಮಯ್ಯನವರದ್ದು ಪಕ್ಷ ಒಡೆಯುವ ಪ್ರವೃತ್ತಿಯಲ್ಲ. ‌ಬದಲಿಗೆ ಯಡಿಯೂರಪ್ಪನವರೇ ಪಕ್ಷ ಒಡೆಯುವ ಪ್ರವೃತ್ತಿಯವರು.‌ ಬಿಜೆಪಿಯನ್ನು ಮುಗಿಸುವುದೇ ತಮ್ಮ‌ಗುರಿ ಎಂದು ಹೇಳಿದ್ದವರು ಅವರು' ಎಂದು‌ ದೂರಿದರು.

'ಬಿಜೆಪಿಯಲ್ಲಿಯೇ ಗುಂಪುಗಾರಿಕೆ ಹೆಚ್ಚು. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಆದ್ಯತೆ ಇದೆ' ಎಂದು ಪ್ರತಿಪಾದಿಸಿದರು.

'ಯಾವ ಪಕ್ಷದ ಸರ್ಕಾರ ಅಧಿಕಾರದಲ್ಲಿರುತ್ತದೋ ಆ ಪಕ್ಷಕ್ಕೇ ಸೇರುವ‌‌ ಅಭ್ಯಾಸವುಳ್ಳ ಆನಂದ್ ಸಿಂಗ್, ಒಂದು ವೇಳೆ ಬಿಜೆಪಿ ಸರ್ಕಾರ ಬಿದ್ದರೆ ಅಲ್ಲಿಂದಲೂ ಮತ್ತೆ ಹೊರಬರುತ್ತಾರೆ' ಎಂದು ಭವಿಷ್ಯ ನುಡಿದರು.

ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದಾಗ ಪ್ರತ್ಯೇಕ ವಿಜಯನಗರ ಜಿಲ್ಲೆಯ ಬಗ್ಗೆ ದನಿ‌ ಎತ್ತದ ಆನಂದ್ ಸಿಂಗ್ ಈಗ ಏಕೆ ಆ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ' ಎಂದು ಪ್ರಶ್ನಿಸಿದರು.

'ಶ್ರೀರಾಮುಲು‌ ಒಮ್ಮೆ ಆನಂದ್ ಸಿಂಗ್ ಕುರಿತು ರೈತ‌ ವಿರೋಧಿ ಎಂದು ಆರೋಪಿಸಿದ್ದರು. ಈಗ ಆ ರೈತ ವಿರೋಧಿ ಪರವಾಗಿಯೇ ಹೇಗೆ ಮತ ‌ಕೇಳುತ್ತಾರೆ.‌ ಬಿಜೆಪಿಗೆ ಬಂದ ಕೂಡಲೇ ಆನಂದ್ ಸಿಂಗ್ ಅವರಲ್ಲಿ ರೈತ ವಿರೋಧಿ ಧೋರಣೆ ಹೋಗುವುದಿಲ್ಲ. ಮುಂದೊಂದು ದಿನ ಶ್ರೀರಾಮುಲು ಅವರೇ ಆನಂದ್ ಸಿಂಗ್ ವಿರುದ್ಧ ಹೇಳಿಕೆ ನೀಡುವುದು ಖಚಿತ ' ಎಂದು ಪ್ರತಿಪಾದಿಸಿದರು.

'ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆಯವರು‌ ಸಜ್ಜನ, ಸುಸಂಸ್ಕೃತ ಹಾಗೂ ಪಕ್ಷ‌ನಿಷ್ಠ ರಾಜಕಾರಣಿ. ಈ ಅಂಶವೇ ಅವರ ಗೆಲುವಿಗೆ ಸಹಕಾರಿಯಾಗಲಿದೆ. ಉಪಚುನಾವಣೆಯು ಪಕ್ಷ ನಿಷ್ಠರು ಮತ್ತು ಪಕ್ಷ ದ್ರೋಹಿಗಳ ನಡುವಿನ ಹೋರಾಟ. ಪ್ರಚಾರದಲ್ಲಿ ಪಕ್ಷದ‌ ಎಲ್ಲ ಪ್ರಮುಖರೂ ಪಾಲ್ಗೊಳ್ಳಲಿದ್ದಾರೆ' ಎಂದರು.

ಮುಖಂಡರಾದ ಹನುಮ ‌ಕಿಶೋರ್, ಅಸುಂಡಿ ನಾಗರಾಜ ಗೌಡ, ರಘುರಾಂ ಕೃಷ್ಣ, ದಶರಥ ರೆಡ್ಡಿ, ಲೋಕೇಶ್ ಬಿ.ಎಂ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT