ಮಂಗಳವಾರ, ನವೆಂಬರ್ 19, 2019
26 °C

ಅದಾನಿ ಪತ್ನಿಗೆ ಶಿರಬಾಗಿ ನಮಸ್ಕರಿಸಿದ್ದರೇ ಪ್ರಧಾನಿ ಮೋದಿ, ವಾಸ್ತವವೇನು?

Published:
Updated:

ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಅವರ ಪತ್ನಿ ಪ್ರೀತಿ ಅದಾನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶಿರಬಾಗಿ ನಮಸ್ಕರಿಸಿದ್ದಾರೆ ಎಂದು ಉಲ್ಲೇಖಿಸಿದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿದೆ. ವಿಜಯ್ ಆರೊರಾ ಎಂಬುವವರು ಈಚೆಗೆ ಮಾಡಿರುವ ಫೇಸ್‌ಬುಕ್ ಪೋಸ್ಟ್ 870ಕ್ಕೂ ಹೆಚ್ಚು ಶೇರ್ ಆಗಿದೆ.

ಅನೇಕ ಜನ ಟ್ವಿಟರ್‌ನಲ್ಲಿಯೂ ಈ ಫೋಟೊವನ್ನು ಶೇರ್ ಮಾಡಿಕೊಂಡಿದ್ದು, ಮೋದಿ ಉದ್ಯಮಿಗಳಿಗೆ ಮಾರಾಟವಾಗಿದ್ದಾರೆ ಎಂಬರ್ಥದ ಪೋಸ್ಟ್‌ಗಳನ್ನೂ ಹಾಕಿದ್ದಾರೆ.

ಇದೇ ರೀತಿ ಪ್ರತಿಪಾದಿಸಿ 2014ರಿಂದಲೂ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ, ಅದು ಪ್ರಧಾನಿ ಮೋದಿಯವರು ಅದಾನಿ ಪತ್ನಿಗೆ ನಮಸ್ಕರಿಸಿದ್ದ ಫೋಟೊವಲ್ಲ. ಬದಲಿಗೆ 2014ರಲ್ಲಿ ಫುಡ್‌ ಪಾರ್ಕ್‌ ಉದ್ಘಾಟನೆಗೆ ತುಮಕೂರಿಗೆ ಬಂದಿದ್ದ ಸಂದರ್ಭದಲ್ಲಿ ತುಮಕೂರಿನ ಅಂದಿನ ಮೇಯರ್‌ ಗೀತಾ ರುದ್ರೇಶ್‌ಗೆ ನಮಸ್ಕರಿಸಿದ್ದು ಎಂಬುದನ್ನು ಆಲ್ಟ್‌ ನ್ಯೂಸ್ ಬಯಲಿಗೆಳೆದಿದೆ. 2014ರ ಸೆಪ್ಟೆಂಬರ್‌ನಲ್ಲಿ ರೆಡಿಟ್ ಮಾಡಿರುವ ಪೋಸ್ಟ್‌ನಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ.

ಮೋದಿ ಅವರು ಮೇಯರ್‌ ಗೀತಾ ರುದ್ರೇಶ್‌ಗೆ ನಮಸ್ಕರಿಸಿದ್ದಕ್ಕೆ ಸಂಬಂಧಿಸಿ ದಿನಪತ್ರಿಕೆಯೊಂದರಲ್ಲಿ 2014ರ ಸೆಪ್ಟೆಂಬರ್‌ 25ರಂದು ಪ್ರಕಟವಾದ ಚಿತ್ರವನ್ನೂ ವರದಿ ಉಲ್ಲೇಖಿಸಿದೆ.

ಪ್ರತಿಕ್ರಿಯಿಸಿ (+)