ಸಿದ್ಧಗಂಗಾ ಶ್ರೀಗಳಿಗೆ ಪ್ರಧಾನಿ ಮೋದಿಯಿಂದ ಅಗೌರವ: ಜಿ.ಪರಮೇಶ್ವರ ಆರೋಪ

7
ಅಂತಿಮ ದರ್ಶನಕ್ಕೆ ಬಾರದಿರುವುದಕ್ಕೆ ಅಸಮಾಧಾನ

ಸಿದ್ಧಗಂಗಾ ಶ್ರೀಗಳಿಗೆ ಪ್ರಧಾನಿ ಮೋದಿಯಿಂದ ಅಗೌರವ: ಜಿ.ಪರಮೇಶ್ವರ ಆರೋಪ

Published:
Updated:

ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಿತ್ತು. ಇಡೀ ದೇಶವೇ ಶ್ರೀಗಳನ್ನು ಕಾಣಲು ಆಗಮಿಸಿದ್ದರೂ ಪ್ರಧಾನಿ ಮಾತ್ರ ಬಾರದೇ ಇದ್ದದ್ದು ಸರಿಯಲ್ಲ. ಅವರು ಪ್ರಧಾನಿಯಂಥ ಹುದ್ದೆಯಲ್ಲಿದ್ದರೂ ಆಗಮಿಸದೇ ಇರುವುದು ಶ್ರೀಗಳಿಗೆ, ಸಮಾಜಕ್ಕೆ ಅಗೌರವ ತೋರಿಸಿದಂತೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ನೇತಾಜಿ ಸುಭಾಷ್ ಚಂದ್ರಬೋಸ್‌ 122ನೇ ಜನ್ಮದಿನಾಚರಣೆ ಪ್ರಯುಕ್ತ ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಅವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಪರಮೇಶ್ವರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನಕ್ಕೆ ಮೋದಿ ಬರಲಿಲ್ಲ ಯಾಕೆ? ​

‘ಈ ದೇಶದ ಹೋರಾಟಕ್ಕೆ ಗಾಂಧಿ ಅವರು ಅಹಿಂಸಾ ಮಾರ್ಗ ಅನುಸರಿಸಿದರೆ, ನೇತಾಜಿ ಅವರು ತಮ್ಮದೇ ಹಾದಿಯಲ್ಲಿ ಹೋರಾಡಿದರು. ಬ್ರಿಟಿಷರ ಸಂಕೋಲೆಯಿಂದ ಬಿಡಿಸಿ ಸ್ವಾತಂತ್ರ್ಯ ತಂದು ಕೊಡುವಲ್ಲಿ ಇವರ ಹೋರಾಟ ದೊಡ್ಡದು. ಅಂದಿನ ಕಾಂಗ್ರೆಸ್‌‌ ಪಕ್ಷದ ಅಧ್ಯಕ್ಷರಾಗಿದ್ದರು. ಸ್ವಾಮಿ ವಿವೇಕಾನಂದ ಆಶಯಂತೆ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದರು’ ಎಂದು ಪರಮೇಶ್ವರ ಹೇಳಿದರು.

ಬೋಸ್ ಅವರು ಇನ್ನೂ ಹೆಚ್ಚು ಕಾಲ ಬದುಕಿದ್ದರೆ ಭಾರತ ಬೇರೊಂದು ಇತಿಹಾಸ ನಿರ್ಮಿಸುತ್ತಿತ್ತು. ಅವರ ಸಾವಿನ‌ ಬಗ್ಗೆ ಅನೇಕ ಗೊಂದಲಗಳಿದ್ದು, ಯಾವುದಕ್ಕೂ ಸ್ಪಷ್ಟತೆ ಸಿಕ್ಕಿಲ್ಲ.‌ ಆದರೆ ಅವರ ಹೋರಾಟಕ್ಕೆ ನಾವೆಲ್ಲರು ಗೌರವ ಸಮರ್ಪಿಸಬೇಕು ಎಂದು ಪರಮೇಶ್ವರ ಹೇಳಿದರು.

ಸಿದ್ದಗಂಗಾ ಶ್ರೀಗಳ ಲಿಂಗೈಕ್ಯದ ಹಿನ್ನೆಲೆಯಲ್ಲಿ‌ ಸರಕಾರ ರಜೆ ಘೋಷಿಸಿದ್ದರೂ ಕೆಲ‌ವು ಶಾಲಾ ಕಾಲೇಜುಗಳು ತೆರೆದಿದ್ದು ಗಮನಕ್ಕೆ ಬಂದಿದೆ. ಶ್ರೀಗಳು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವಗಳನ್ನು ಅನುಸರಿಸಿದವರು. ಹೀಗಾಗಿ ಕೆಲಸ ಮಾಡುವ‌ ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ‌ ಸಲ್ಲಿಸಿದ್ದೇವೆ ಎಂದು ಕೆಲವರು ಹೇಳಿದ್ದಾರೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ರೆಸಾರ್ಟ್‌ನಲ್ಲಿ ಶಾಸಕರ ಹೊಡೆದಾಟಕ್ಕೆ ಬೇಸರ: ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರು ಹೊಡೆದಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಘಟನೆಗೆ ಸಂಬಂಧಿಸಿ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ಕಾನೂನಾತ್ಮಕ ಕ್ರಮಕ್ಕೆ ಕೆಪಿಸಿಸಿ‌ ಕೂಡ ಒತ್ತಾಯ ಮಾಡಿದೆ. ಜೊತೆಗೆ, ನನ್ನ ನೇತೃತ್ವದಲ್ಲಿ ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ನಾವೂ ಕೂಡ ಸತ್ಯಾಸತ್ಯತೆ ಪರಿಶೀಲಿಸಲಿದ್ದೇವೆ. ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ಒದಗಿಸಿ ಕೊಡಲಾಗುವುದು ಎಂದರು.

ನಾನು ಕಳೆದ 30 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಇಂತಹ ಕೀಳು‌ಮಟ್ಟದ ರಾಜಕಾರಣ ಎಂದೂ ನೋಡಿರಲಿಲ್ಲ. ಇತ್ತೀಚಿನ ಈ ನಡವಳಿಕೆಗಳು ರಾಜಕೀಯ ಮೌಲ್ಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂಬ ಆತಂಕ ಮೂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದೇ ನಡವಳಿಕೆ ಇದ್ದರೆ ಮುಂದಿನ ಪೀಳಿಗೆ ರಾಜಕಾರಣಕ್ಕೆ ಬರಲು ಹಿಂಜರಿಯಬಹುದು. ಇದು ಒಳ್ಳೆಯ ಸಂದೇಶವಲ್ಲ ಎಂದೂ ಹೇಳಿದರು.

ಬರಹ ಇಷ್ಟವಾಯಿತೆ?

 • 24

  Happy
 • 3

  Amused
 • 0

  Sad
 • 0

  Frustrated
 • 22

  Angry

Comments:

0 comments

Write the first review for this !