ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಡುಕರಿಗೆ ಮಹಿಳೆಯರು ಏಟು ಕೊಡುವ ಕಾನೂನು ತನ್ನಿ’

ಕವಿ ಡಾ. ಸಿದ್ಧಲಿಂಗಯ್ಯ ಅಭಿಮತ * ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನ
Last Updated 16 ನವೆಂಬರ್ 2019, 5:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಡಿದು ಓಡಾಡುವ ಪುರುಷರಿಗೆ ಎಲ್ಲ ಮಹಿಳೆಯರೂ ಏಟು ಕೊಡುವ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನೂ ಮಾಡಿಕೊಂಡಿದ್ದೆ. ಆದರೆ, ಕಾನೂನು ಮಾಡುವವರೇ ತಪ್ಪಿತಸ್ಥರಾಗಿದ್ದಾರೆ’ ಎಂದು ಕವಿ ಡಾ.ಸಿದ್ಧಲಿಂಗಯ್ಯ ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಲೀಲಾ ಸಂಪಿಗೆ ಅವರಿಗೆ ‘ಇಂದಿರಾರತ್ನ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿ ₹ 5 ಸಾವಿರ ನಗದು ಬಹುಮಾನ ಹೊಂದಿದೆ.

‘ಮಣಿಪುರದ ಇಂಫಾಲ್‌ಗೆ ಹೋದಾಗ ಅಲ್ಲಿ ಕುಡುಕರಿಗೆ ಸಾರ್ವಜನಿಕವಾಗಿ ಎಲ್ಲ ಮಹಿಳೆಯರು ಏಟು ನೀಡುವುದನ್ನು ನೋಡಿ, ಆ ಬಗ್ಗೆ ತಿಳಿದುಕೊಂಡೆ. ಅಲ್ಲಿನ ಮಹಿಳೆಯರಿಗೆ ಸರ್ಕಾರ ಆ ಅಧಿಕಾರ ನೀಡಿದೆ. ಹೀಗಾಗಿ ಮದ್ಯವ್ಯಸನಿಗಳ ಸಂಖ್ಯೆ ಕಡಿಮೆಯಾಗಿದ್ದು, ಜನರಿಗೆ ಭಯ ಬಂದಿದೆ. ಇದು ಉತ್ತಮ ಕ್ರಮ ಎಂದು ಭಾವಿಸಿ, ನಮ್ಮ ಸರ್ಕಾರಕ್ಕೆ ಅದೇ ರೀತಿ ಕಾನೂನು ಮಾಡುವಂತೆ ಮನವಿ ಮಾಡಿಕೊಂಡೆ. ಆದರೆ, ಸರ್ಕಾರ ಆಸಕ್ತಿ ತೋರಿಸಲಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುವಂತಾಗವೇಕು. ಸರ್ಕಾರದ ವತಿಯಿಂದ ನೀಡಲಾಗುವ ನಿವೇಶನ, ಭೂಮಿಯನ್ನು ಮಹಿಳೆಯರ ಹೆಸರಿಗೆ ನೋಂದಾಯಿಸುವ ವ್ಯವಸ್ಥೆಯನ್ನು ತರಬೇಕು. ಆಗ ಪುರುಷರು ತಲೆ ತಗ್ಗಿಸಿ ನಡೆಯುತ್ತಾರೆ’ ಎಂದರು.

ಮೌಂಟ್‌ ಕಾರ್ಮೆಲ್ ಕಾಲೇಜಿನ ಪ್ರಾಧ್ಯಾಪಕಿ ಚಮನ್ ಫರ್ಜಾನ, ‘ಲೀಲಾ ಸಂಪಿಗೆ ಅಪರೂಪದ ಮಹಿಳಾ ಸಾಧಕಿ. ಲೈಂಗಿಕ ವೃತ್ತಿನಿರತರ ಮಕ್ಕಳು ದಾರುಣ ಬದುಕು ಸಾಗಿಸುತ್ತಿರುವುದನ್ನು ಗುರುತಿಸಿ, ಅವರಿಗೆ ಪುನರ್ವಸತಿ ಕಲ್ಪಿಸಲು ಶ್ರಮಿಸಿದರು. ಎಚ್‌ಐವಿ ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರದ ಜತೆಗೆ ಕೈ ಜೋಡಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT