ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಕನ್ನಡಿಗರಿಗೆ 'ಪೊಗೊ' ಆತಂಕ, ಮುಖ್ಯಮಂತ್ರಿ ಹೇಳಿಕೆಗೆ ಪಟ್ಟು, ಧರಣಿ

Last Updated 20 ಮಾರ್ಚ್ 2020, 10:03 IST
ಅಕ್ಷರ ಗಾತ್ರ

ಬೆಂಗಳೂರು: 'ಪೊಗೊ' ಅಭಿಯಾನದ ಹೆಸರಿನಲ್ಲಿ ಗೋವಾದಲ್ಲಿರುವ 4 ಲಕ್ಷ ಕನ್ನಡಿಗರನ್ನು ಓಡಿಸುವ ಸಂಚು ನಡೆಯುತ್ತಿದ್ದು, ಮುಖ್ಯಮಂತ್ರಿ ಅವರೇ ಸದನಕ್ಕೆ ಬಂದು ಉತ್ತರ ನೀಡಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದರು.

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಈ ವಿಷಯ ಸಂಬಂಧಿಸಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಉತ್ತರ ನೀಡಿದರು.

'ಗೋವಾದಲ್ಲಿ ಸಹ ಬಿಜೆಪಿ ಸರ್ಕಾರ ಇದೆ, ಕನ್ನಡಿಗರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಅವರೇ ತಿಳಿಸಿದ್ದಾರೆ, ಒಂದು ರಾಜಕೀಯ ಪಕ್ಷ ತನ್ನ ಉದ್ದೇಶ ಈಡೇರಿಸಿಕೊಳ್ಳಲು ಮಾಡಿರುವ ತಂತ್ರ ಇದು, ಇಟಲಿ, ಇಂಗ್ಲೆಂಡ್‌ಗಳಂತಹ ದೇಶಗಳಿಂದಲೇ ತನ್ನ ಪ್ರಜೆಗಳನ್ನು ಭಾರತ ಸರ್ಕಾರ ರಕ್ಷಿಸಿದೆ' ಎಂದರು.

ಈ ಉತ್ತರದಿಂದ ಕೆರಳಿದ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ ಅವರು ಇತರ ಸದಸ್ಯರನ್ನು ಕರೆದು ಸಭಾಪತಿ ಅವರ ಪೀಠದ ಮುಂಭಾಗಕ್ಕೆ ಬಂದರು. ಘೋಷಣೆ ಕೂಗಿದರು. ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಕಲಾಪವನ್ನು 15 ನಿಮಿಷ ಮುಂದೂಡಿದರು.

ಮತ್ತೆ ಕಲಾಪ ಆರಂಭವಾದಾಗಲೂ ಧರಣಿ ಮುಂದುವರಿಯಿತು. ಸಚಿವ ಸಿ.ಟಿ.ರವಿ ಅವರ ಹೇಳಿಕೆಗೆ ತೃಪ್ತರಾಗದ ಎಸ್ ಆರ್ ಪಾಟೀಲ, ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ ಅವರು ಮುಖ್ಯಮಂತ್ರಿ ಅವರೇ ಸೋಮವಾರ ಬೆಳಿಗ್ಗೆ ಸದನಕ್ಕೆ ಬಂದು ಉತ್ತರ ನೀಡಬೇಕು, ಗೋವಾಕ್ಕೆ ನಿಯೋಗ ಕಳುಹಿಸಬೇಕು ಎಂದರು. ಮುಖ್ಯಮಂತ್ರಿ ಬಳಿ ಈ ವಿಚಾರ ಚರ್ಚಿಸಿ, ಸದನಕ್ಕೆ ಬರಲು ತಿಳಿಸುವುದಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ ಬಳಿಕ ಧರಣಿ ಹಿಂದೆಗೆದುಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT