ಮಾರಮ್ಮ ದೇವಾಲಯದಲ್ಲಿ ಘಟನೆ: ವಿಷವಾದ ಪ್ರಸಾದ– 11 ಬಲಿ

7
ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಕುತ್ ಮಾರಮ್ಮ ದೇವಾಲಯದಲ್ಲಿ ಘಟನೆ

ಮಾರಮ್ಮ ದೇವಾಲಯದಲ್ಲಿ ಘಟನೆ: ವಿಷವಾದ ಪ್ರಸಾದ– 11 ಬಲಿ

Published:
Updated:
Deccan Herald

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಕುತ್ ಮಾರಮ್ಮ ದೇವಾಲಯದ ಗೋಪುರ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶುಕ್ರವಾರ ನೀಡಲಾದ ಪ್ರಸಾದ (ತರಕಾರಿ ಬಾತ್‌) ಸೇವಿಸಿ 11 ಮಂದಿ ಮೃತಪಟ್ಟಿದ್ದಾರೆ. 75 ಮಂದಿ ಅಸ್ವಸ್ಥರಾಗಿದ್ದು ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಪ್ರಸಾದದಲ್ಲಿ ವಿಷ ಬೆರೆಸಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಪ್ರಸಾದ ಸೇವಿಸಿದ 20ಕ್ಕೂ ಹೆಚ್ಚು ಕಾಗೆಗಳು ಹಾಗೂ 2 ನಾಯಿಗಳೂ ಮೃತಪಟ್ಟಿವೆ.

‘ಊಟದಲ್ಲಿ ವಿಷ ಬೆರೆಸಿರುವ ಅನುಮಾನಗಳಿವೆ. ತನಿಖಾ ತಂಡ ರಚಿಸಲಾಗುವುದು. ಪ್ರಸಾದವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತನಿಖೆಯ ನಂತರವೇ ಸತ್ಯಾಂಶ ತಿಳಿಯಲಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

‘ಆಹಾರದಲ್ಲಿ ವಿಷದ ಅಂಶ ಇಲ್ಲದಿದ್ದರೆ, ಜನರು ಇಷ್ಟು ತೀವ್ರವಾಗಿ ಅಸ್ವಸ್ಥರಾಗುತ್ತಿರಲಿಲ್ಲ. ವಿಷ ಬೆರೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಪರೀಕ್ಷೆಯಿಂದಲೇ ದೃಢಪಡಿಸಬೇಕಾಗಿದೆ’ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

‌ಸುಳ್ವಾಡಿ ಗ್ರಾಮಸ್ಥರಾದ ಗೋಪಿಯಮ್ಮ (35), ಶಾಂತರಾಜು (20), ಪಾಪಣ್ಣ (50), ಅನಿತಾ (12), ದೊಡ್ಡಣಿ ಗ್ರಾಮದ ಅಪ್ಪಣ್ಣಯ್ಯ (45), ಅನಿಲ್‌, ಕುಮಾರ್‌, ಶಿವು, ಕೃಷ್ಣನಾಯಕ, ತೋಮಿಯರ್‌ ಪಾಳ್ಯ ರಾಚಯ್ಯ, ಡೊಡ್ಡಮಾದಯ್ಯ ಮೃತಪಟ್ಟವರು. 30 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಕೆ.ಆರ್‌.ಆಸ್ಪತ್ರೆ, ಜೆಎಸ್ಎಸ್‌ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ದೇವಸ್ಥಾನ ಗೋಪುರ ನಿರ್ಮಿಸುವ ಸಲುವಾಗಿ ಶುಕ್ರವಾರ ಬೆಳಿಗ್ಗೆ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 100 ಜನರು ಸೇರಿದ್ದರು. ಈ ಪೈಕಿ 25ರಿಂದ 30 ಮಂದಿ ಅಯ್ಯಪ್ಪ ವ್ರತಧಾರಿಗಳೂ ಇದ್ದರು. ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಪೂಜಾ ಕೈಂಕರ್ಯ ನಡೆದಿತ್ತು. ಮಧ್ಯಾಹ್ನದ ವೇಳೆಗೆ ಪ್ರಸಾದ ವಿತರಿಸಲಾಗಿತ್ತು.

ಪ್ರಸಾದ ಸೇವಿಸಿದವರು ಕೆಲ ಕ್ಷಣಗಳಲ್ಲೇ ವಾಂತಿ ಮಾಡಲು ಆರಂಭಿಸಿದರು. ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಕಾಮಗೆರೆಯ ಹೋಲಿ ಕ್ರಾಸ್‌ ಆಸ್ಪತ್ರೆ, ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. 

ಕಾಮಗೆರೆ ಆಸ್ಪತ್ರೆಯಲ್ಲಿ ಮೂವರು, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು, ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಇಬ್ಬರು, ಜೆಎಸ್‌ಎಸ್‌ ಆಸ್ಪತ್ರೆ, ‌ಸುಳ್ವಾಡಿ ಮತ್ತು ತಳಸೀಕೆರೆ ಗ್ರಾಮಗಳಲ್ಲಿ ತಲಾ ಒಬ್ಬರು ಮೃತಪಟ್ಟರು.

ಸಂಬಂಧಿಕರ ಆಕ್ರಂದನ: ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಷವಲ್ಲದೆ ಬೇರೇನೂ ಅಲ್ಲ(ಮೈಸೂರು ವರದಿ): ಹಲ್ಲಿ ಬಿದ್ದ ಆಹಾರ ಹಾಗೂ ಕಿಲುಬು ಹಿಡಿದ ಪಾತ್ರೆಯಲ್ಲಿ ಅಡುಗೆ ಮಾಡಿರುವುದು ಸೇರಿದಂತೆ ಎಂತಹುದೇ ಕಲುಷಿತ ಆಹಾರವಾದರೂ ಇಷ್ಟೊಂದು ಜನರು ಗಂಭೀರ ಸ್ಥಿತಿಗೆ ತಲುಪುತ್ತಿರಲಿಲ್ಲ. ಇದಕ್ಕೆ ವಿಷ ಬೆರೆಸಿದ್ದೆ ಕಾರಣ ಎಂದು ವೈದ್ಯಾಧಿಕಾರಿ ಒಬ್ಬರು ತಿಳಿಸಿದರು.

ಎಲ್ಲ ರೋಗಿಗಳಿಗೂ ಉಸಿರಾಟದ ಸಮಸ್ಯೆ ಕಾಡುತ್ತಿದೆ. ಕಣ್ಣು ಬಿಡುವುದು ಕಷ್ಟವಾಗುತ್ತಿದೆ. ಇದು ಕ್ರಿಮಿನಾಶಕ ಕುಡಿದ ರೋಗಿಗಳಲ್ಲಿ ಕಾಣುವ ಲಕ್ಷಣವಾಗಿದೆ ಎಂದು ಅವರು ಹೇಳಿದರು.

₹5 ಲಕ್ಷ ಪರಿಹಾರ: ವಿಷಾಹಾರ ಸೇವಿಸಿ ಮೃತಪಟ್ಟವರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಕಾಡಿಗೆ ತೆರಳಿದವರ ಹುಡುಕಾಟ: ಈ ಮಧ್ಯೆ, ಮಧ್ಯಾಹ್ನ ದೇವಸ್ಥಾನಕ್ಕೆ ಕುರಿಗಾಹಿಗಳು ಮತ್ತು ದನಗಾಹಿಗಳು ಭೇಟಿ ನೀಡಿದ್ದರು. ಅವರು ಪ್ರಸಾದವನ್ನು ತೆಗೆದುಕೊಂಡು ಕಾಡಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕಾಡಿದ ಆಂಬುಲೆನ್ಸ್‌ ಕೊರತೆ

ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್‌ಗಳ ಕೊರತೆ ಉಂಟಾಯಿತು. ಲಭ್ಯವಿದ್ದ ಆಂಬುಲೆನ್ಸ್‌ಗಳಲ್ಲಿ ವೆಂಟಿಲೇಟರ್‌ ಸೌಲಭ್ಯ ಇರಲಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯೂ ಕಾಡಿತು. ಕೊಳ್ಳೇಗಾಲ ತಾಲ್ಲೂಕು 
ಆಸ್ಪತ್ರೆಯಲ್ಲಿ ಐವರು ವೈದ್ಯರು ಮಾತ್ರ ಇದ್ದರು.

ಪ್ರಕರಣ ತೀವ್ರತೆ ಪಡೆಯುತ್ತಿದ್ದಂತೆ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ 26 ವೆಂಟಿಲೇಟರ್‌ಗಳನ್ನು ಮೀಸಲಿಡಲಾಯಿತು.

ಒತ್ತುವರಿ ಜಾಗದಲ್ಲಿ ದೇವಾಲಯ

ಅರಣ್ಯ ಇಲಾಖೆಗೆ ಸೇರಿದ ಒತ್ತುವರಿ ಮಾಡಿಕೊಂಡು ದೇವಾಲಯ ನಿರ್ಮಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ದಶಕದ ಹಿಂದೆಯೇ ಸ್ಥಳದಲ್ಲಿ ಇದ್ದ ದೇವಾಲಯವನ್ನು ಕೆಡವಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೇ ದೇವಾಲಯದ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಟ್ರಸ್ಟ್‌ ಕೂಡ ಅನಧಿಕೃತವಾದುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಇಬ್ಬರ ಬಂಧನ

ಪ್ರಕರಣ ಸಂಬಂಧ, ಚೆನ್ನಪ್ಪಿ ಮತ್ತು ಮಾದೇಶ ಎಂಬ ಇಬ್ಬರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಚೆನ್ನಪ್ಪಿ ದೇವಾಲಯ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯ ಹಾಗೂ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ.

ಬಣಗಳ ನಡುವೆ ಸಂಘರ್ಷ

ಉದ್ದೇಶಪೂರ್ವಕವಾಗಿ ಯಾರೋ ಪ್ರಸಾದದಲ್ಲಿ ವಿಷ ಬೆರೆಸಿರಬಹುದು ಎಂದು ಸ್ಥಳೀಯರು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ.

ದೇವಾಲಯದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ತಮಿಳುನಾಡಿನ ಬರಗೂರು ಮತ್ತು ಸುಳ್ವಾಡಿ ಗ್ರಾಮದವರ ನಡುವೆ ಘರ್ಷಣೆ ನಡೆಯುತ್ತಿತ್ತು. ಎರಡು ಬಣಗಳಾಗಿ ಪೂಜೆ ಸಲ್ಲಿಸುತ್ತಿದ್ದರು. 13 ವರ್ಷಗಳ ಹಿಂದೆ ಇದೇ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಜಗಳವಾಗಿತ್ತು. ಅಂದಿನಿಂದಲೂ ಎರಡೂ ಬಣಗಳ ನಡುವೆ ಶೀತಲ ಸಮರ ಮುಂದುವರಿದಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 8

  Sad
 • 1

  Frustrated
 • 5

  Angry

Comments:

0 comments

Write the first review for this !