ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ ಬಂಧನ

ಸೋಮವಾರ, ಮಾರ್ಚ್ 25, 2019
33 °C
ಕಬ್ಬಿಣದ ಅದಿರು ಅಕ್ರಮ ಸಾಗಣೆಗೆ ನೆರವು

ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ ಬಂಧನ

Published:
Updated:
Prajavani

ಚಿತ್ರದುರ್ಗ: ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡುವ ಜಾಲಕ್ಕೆ ನೆರವು ನೀಡುತ್ತಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ನಗರ ಪೊಲೀಸ್‌ ಠಾಣೆಯ ಇಮಾಮ್‌ ಹುಸೇನ್‌ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಯ ಶಿವಲಿಂಗ ಬಂಧಿತರು. ಅದಿರು ಅಕ್ರಮ ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಸಂಖ್ಯೆ 11ಕ್ಕೆ ಏರಿದೆ. ಸಂಘಟಿತ ಅಪರಾಧದ ಜಾಲಕ್ಕೆ ಸಹಕಾರ ನೀಡುತ್ತಿದ್ದ ಆರೋಪಕ್ಕೆ ಪೊಲೀಸರೇ ಗುರಿಯಾಗಿರುವುದು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಭೀಮಸಮುದ್ರದಿಂದ ಬಳ್ಳಾರಿಗೆ ಅಕ್ರಮವಾಗಿ ಅದಿರು ಸಾಗಣೆ ಮಾಡುತ್ತಿದ್ದ ಐದು ಲಾರಿಗಳು ಫೆ.28ರಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದವು. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎರಡು ಹಾಗೂ ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಠಾಣಾ ವ್ಯಾ‍ಪ್ತಿಯಲ್ಲಿ ಮೂರು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಗಣಿಗಾರಿಕೆ ಹಾಗೂ ಸಾಗಣೆಗೆ ಅಧಿಕೃತ ಪರವಾನಗಿ ಹೊಂದಿಲ್ಲದೇ ಇರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು.

ಐದು ಲಾರಿ ಚಾಲಕರು, ಮೂವರು ಲಾರಿ ಮಾಲೀಕರು ಹಾಗೂ ಜಾಲದ ರೂವಾರಿಯೊಬ್ಬನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ತನಿಖೆಯ ವೇಳೆ ಕಾನ್‌ಸ್ಟೆಬಲ್‌ಗಳು ನೆರವು ನೀಡುತ್ತಿರುವುದು ಬೆಳಕಿಗೆ ಬಂದಿತ್ತು. ಜಾಲದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳು, ಅದಿರು ತುಂಬಿದ ಲಾರಿಗಳು ಜಿಲ್ಲೆಯ ಗಡಿ ದಾಟಿಸಲು ಸಹಕಾರ ನೀಡುತ್ತಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !