7

28 ಪ್ರಕರಣಗಳಲ್ಲಿ ಬೇಕಾಗಿದ್ದ ಚಾಲಾಕಿ ಕಳ್ಳನ ಬಂಧನ

Published:
Updated:
ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿರುವ ಅಂತರರಾಜ್ಯ ಕಳ್ಳ ವೆಂಕಟೇಶ ರೆಡ್ಡಿ (ಬಲಭಾಗದಲ್ಲಿ ಮಂಡಿಯೂರಿ ಕುಳಿತವನು) ಹಾಗೂ ಶಬ್ಬೀರ್ ಶೇಖ್ ಎಂಬಾತನನ್ನು ಬಂಧಿಸಿದ ಪೊಲೀಸರ ತಂಡದೊಂದಿಗೆ ಇನ್‌ಸ್ಪೆಕ್ಟರ್ ಮಹಾಂತೇಶ ಹೊಸಪೇಟ, ಎಸಿಪಿ ಎಂ.ಎನ್.ರುದ್ರಪ್ಪ, ಡಿಸಿಪಿಗಳಾದ ರೇಣುಕಾ ಸುಕುಮಾರ್, ಬಿ.ಎಸ್.ನೇಮಗೌಡ ಇತರರು ಇದ್ದಾರೆ

ಧಾರವಾಡ: ಈತ ಒಬ್ಬ ಚಾಲಾಕಿ ಕಳ್ಳ. ತಮಿಳುನಾಡು ಮೂಲದವನಾದ ಈತ ತನ್ನ ಕಳ್ಳತನಕ್ಕೆ ಆಯ್ದುಕೊಂಡ ಊರು ಧಾರವಾಡ.

ಕಳ್ಳತನಕ್ಕೆ ಬೇಕಾದ ಸಲಕರಣೆಯನ್ನು ಈತನೇ ಸಿದ್ಧಪಡಿಸಿಕೊಂಡಿದ್ದ. ಕದ್ದ ವಸ್ತುಗಳನ್ನು ವಿಲೇವಾರಿ ಮಾಡಲೂ ಈತ ಸ್ಥಳೀಯ ವ್ಯಕ್ತಿಯ ಸ್ನೇಹ ಮಾಡಿಕೊಂಡಿದ್ದ. 28 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತನ ಕೈಚಳಕದಿಂದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡವರಲ್ಲಿ ಕಾರ್ಪೊರೇಟರ್ ಕೂಡಾ ಇದ್ದಾರೆ ಎಂದರೆ ಅಚ್ಚರಿ ಅಲ್ಲದೆ ಮತ್ತೇನು.

ತಮಿಳುನಾಡು ಮೂಲದ ವೆಂಕಟೇಶ ಅಲಿಯಾಸ್‌ ವೆಂಕಟೇಶರಡ್ಡಿ ಅಲಿಯಾಸ್ ಇಮ್ತಿಯಾಜ್ ವನ್ನಾರ ಎಂಬಾತ ಮುಸ್ಲಿಂ ಯುವತಿಯನ್ನು ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಈತ ಮಾತ್ರವಲ್ಲ ಈತನ ತಂದೆ ನಾಗರಾಜನ್ ವನ್ನಾರ ಎಂಬಾತನೂ ತನ್ನ ಹೆಸರನ್ನು ಅಜಮೀರ್ ಶೇಖ್ ಎಂದು ಬದಲಿಸಿಕೊಂಡಿದ್ದ.

ಯುವತಿಯ ನಂಟು ಧಾರವಾಡವಾದ್ದರಿಂದ ಸುಲಭವಾಗಿ ಧಾರವಾಡದ ಎಲ್ಲಾ ಬೀದಿ, ಶ್ರೀಮಂತರ ಮನೆ, ವೃದ್ಧರು ಇರುವ ಮನೆಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದ. 

ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿ ಮೇ ತಿಂಗಳಿನಲ್ಲಿ ಸತತವಾಗಿ ಐದಾರು ಮನೆಗಳ ಕಳ್ಳತನಗಳು ನಡೆದಾಗ, ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಅವರು ಎಎಸ್‌ಐ ಹಾಗೂ ಕಾನ್‌ಸ್ಟೆಬಲ್ ಒಬ್ಬರನ್ನು ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಇದಕ್ಕಾಗಿ 2 ವಿಶೇಷ ತಂಡಗಳನ್ನು ರಚಿಸಿದ್ದರು. 

ಪಾಲಿಕೆಯ ಕಾಂಗ್ರೆಸ್ ಸದಸ್ಯ ಸುಭಾಸ ಶಿಂಧೆ ಅವರ ಮನೆಗೆ ಮೇ 25ರಂದು ಕನ್ನ ಹಾಕಿದ್ದ ಈತ, ಮನೆ ಕೀಲಿ ಮುರಿದು ಅಲ್ಮೆರಾದಲ್ಲಿದ್ದ 142 ಗ್ರಾಂ ಚಿನ್ನದ ಆಭರಣ ದೋಚಿದ್ದ. ಈ ಪ್ರಕರಣವೂ ವಿದ್ಯಾಗಿರಿಯಲ್ಲಿ ದಾಖಲಾಗಿತ್ತು. ಇದು ನಿಜಕ್ಕೂ ಪೊಲೀಸರ ನಿದ್ದೆಗೆಡಿಸಿತ್ತು.

ಕದ್ದ ಆಭರಣಗಳನ್ನು ಮಾರಾಟ ಮಾಡಲು ಸ್ಥಳೀಯ ಶಬ್ಬೀರ್ ಶೇಖ್‌ ಎಂಬಾತನ ನೆರವು ಪಡೆದಿದ್ದ. ಇದರ ಆಧಾರದ ಮೇಲೆ ಆಭರಣ ವ್ಯಾಪಾರಿ ಸುಭಾಸ ಶೇಟ್ ಎಂಬುವನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಶೇಟ್ ಬಂಧನ ವಿರೋಧಿಸಿ ಆಭರಣ ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.

ಅಂತಿಮವಾಗಿ ವೆಂಕಟೇಶ ರೆಡ್ಡಿ ಹಾಗೂ ಶಬ್ಬೀರ ಶೇಖ್‌ನನ್ನು ಬಂಧಿಸುವಲ್ಲಿ ಇನ್‌ಸ್ಪೆಕ್ಟರ್ ಮಹಾಂತೇಶ ಹೊಸಪೇಟ ಯಶಸ್ವಿಯಾಗಿದ್ದಾರೆ. ಧಾರವಾಡದ ರೈಲ್ವೇ ನಿಲ್ದಾಣದ ಬಳಿ ಪರ ಊರಿಗೆ ಹೊರಡಲು ಸಿದ್ಧನಾಗಿದ್ದ ಈತನನ್ನು ವಿಚಾರಿಸಿದ ಪೊಲೀಸರ ಅನುಮಾನ ಸರಿಯಾಗಿತ್ತು. ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಈತ ತನ್ನ ಕೃತ್ಯಗಳನ್ನು ಬಿಚ್ಚಿಟ್ಟ. ಇದರಿಂದಾಗಿ ಬಂಧಿತನಿಂದ ₹ 8.16ಲಕ್ಷ ಮೌಲ್ಯದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಧಾರವಾಡದಲ್ಲಿ ಮಾತ್ರವಲ್ಲ, ವೆಂಕಟೇಶನ ಕೈಚಳಕ ತುಮಕೂರು, ಬೆಂಗಳೂರು, ಮಂಡ್ಯ ಹಾಗೂ ಮಹಾರಾಷ್ಟ್ರ, ಗೋವಾ ಮತ್ತು ತಮಿಳುನಾಡಿನ ಹಲವು ಊರುಗಳಲ್ಲೂ ಈತ ತನ್ನ ‘ಕೈಚಳಕ’ ತೋರಿಸಿದ್ದಾನೆ. ಅಲ್ಲಿಯೂ ಪ್ರಕರಣಗಳು ದಾಖಲಾಗಿವೆ.

ತನಿಖಾ ತಂಡದಲ್ಲಿ ಎಎಸ್‌ಐ ಎ.ಬಿ.ನರೇಂದ್ರ, ಎಂ.ಎಫ್.ನದಾಫ್, ಐ.ಸಿ.ಬುರ್ಜಿ, ಆರ್.ಕೆ.ಅತ್ತಾರ, ಪಿ.ಎ.ಮಾನೆ, ಎಂ.ಸಿ.ಮಂಕಣಿ, ಎಂ.ಜಿ.ಪಾಟೀಲ, ಎ.ಎಂ. ಹುಯಿಲಗೋಳ, ಡಿ.ಎಸ್.ಸಾಂಗ್ಲೀಕರ ಮತ್ತು ಕೆ.ಎಸ್.ಕಮ್ಮಾರ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !