ಡಿವೈಎಫ್ಐ ಮುಖಂಡನ ಮೇಲೆ ಪೊಲೀಸರ ದೌರ್ಜನ್ಯ: ಆರೋಪ

ಮಂಗಳೂರು: ಬೇಕರಿ ಬಾಗಿಲು ಮುಚ್ಚಿ ತನ್ನ ಸಹೋದರನೊಂದಿಗೆ ಬೈಕ್ ನಲ್ಲಿ ಪತ್ನಿಯ ಮನೆಗೆ ತೆರಳುತ್ತಿದ್ದ ಡಿವೈಎಫ್ ಐ ಮುಖಂಡ ರಿಯಾಜ್ ಅವರ ಮೇಲೆ ಪೊಲೀಸರು ಮಂಗಳವಾರ ತಡರಾತ್ರಿ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ವಾರದ ಹಿಂದೆಯಷ್ಟೆ ಮದುವೆಯಾಗಿರುವ ರಿಯಾಜ್, ಅಂಗಡಿ ಮುಚ್ಚಿ ತನ್ನ ತಮ್ಮನೊಂದಿಗೆ ಬೈಕ್ ನಲ್ಲಿ ಮೂಡುಬಿದಿರೆಯಿಂದ ಹೊರಟಿದ್ದರು. ವೇಣೂರು ಬಳಿ ಗಸ್ತಿನಲ್ಲಿದ್ದ ಏಳೆಂಟು ಪೊಲೀಸರು ಇವರನ್ನು ತಡೆದಿದ್ದು ದಾಖಲೆ ಕೇಳಿದ್ದಾರೆ. ರಿಯಾಜ್ ಡ್ರೈವಿಂಗ್ ಲೈಸನ್ಸ್ ನೀಡಿದ್ದಾರೆ. ವಾಹನದ ದಾಖಲೆ ಮನೆಯಲ್ಲಿದ್ದು, ಬೆಳಿಗ್ಗೆ ತರುವುದಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ರಿಯಾಜ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ರಿಯಾಜ್ ಎಂಬ ಹೆಸರು ನೋಡಿ 'ಬ್ಯಾರಿ ನೀನು ಕಳ್ಳತನಕ್ಕೇ ಹೋಗುತ್ತಿದ್ದೀಯಾ, ಉಗ್ರಗಾಮಿ ತರ ಕಾಣುತ್ತೀರಾ' ಎಂದು ನಿಂದಿಸಿರುವುದಾಗಿ ಆರೋಪಿಸಲಾಗಿದೆ.
ಇದಕ್ಕೆ ರಿಯಾಜ್ ಆಕ್ಷೇಪ ಎತ್ತಿದ್ದು, ಕುಪಿತಗೊಂಡ ಪೊಲೀಸರು, 'ಮುಸ್ಲಿಮನಿಗೆ ಇಷ್ಟು ಅಹಂಕಾರವಾ' ಎಂದು ಹಲ್ಲೆ ನಡೆಸಿದ್ದಾರೆ. ಅದೇ ಸಂದರ್ಭ ಅದೇ ದಾರಿಯಲ್ಲಿ ಖಾಸಗಿ ವಾಹನದಲ್ಲಿ ತೆರಳುತ್ತಿದ್ದ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ, 'ವಿಷಯ ಏನು ?' ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಪೊಲೀಸ್ ಸಿಬ್ಬಂದಿ, 'ಪೊಲೀಸರಿಗೆ ಎದುರು ಮಾತಾಡುತ್ತಾರೆ' ಎಂದು ಆಪಾದಿಸಿದ್ದಾರೆ. ಇದಕ್ಕೆ ನಾಗೇಶ್ ಕದ್ರಿ, 'ಒದ್ದು ಒಳಗೆ ಹಾಕಿ' ಎಂದು ಆದೇಶಿಸಿದ್ದಾರೆ.
ನಂತರ ರಿಯಾಜ್ ಹಾಗೂ ಅವರ ಸಹೋದರನನ್ನು ವಾಹನದಲ್ಲೇ ಹಲ್ಲೆ ಮಾಡುತ್ತ ಠಾಣೆಗೆ ಎಳೆದೊಯ್ದಿದ್ದಾರೆ. ಅಲ್ಲಿ ಹದಿನೈದಕ್ಕೂ ಹೆಚ್ವು ಪೊಲೀಸರು ಲಾಕಪ್ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದು, ಬ್ಯಾರಿಗಳಿಗೆ ಅವಾಚ್ಯವಾಗಿ ಬಯ್ದಿದ್ದಾರೆ. ಕೊನೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಹೊರಿಸಿ ಎಫ್ ಐಆರ್ ದಾಖಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಮೊನ್ನೆ ಅಶ್ರಫ್ ಸಾಲೆತ್ತೂರು, ಇಂದು ರಿಯಾಜ್ ಮಾಂತೂರು... ಮುಸ್ಲಿಮರಾದರೆ ಹೀಗೆ ವರ್ತಿಸುವುದೇ? ಎಂದು ಪ್ರಶ್ನಿಸಲಾಗುತ್ತಿದೆ.
ಮೊನ್ನೆ ತಾನೆ ಅಶ್ರಫ್ ಪ್ರಕರಣದಲ್ಲಿ ಅಷ್ಟೆಲ್ಲ ಆಗಿದೆ. ಅಷ್ಟರಲ್ಲೇ ಮತ್ತೊಮ್ಮೆ ಪೊಲೀಸರ ದೌರ್ಜನ್ಯ ನಡೆದಿದೆ. ಇದನ್ನು ನೇರವಾಗಿ ಗೃಹಮಂತ್ರಿ, ಮುಖ್ಯಮಂತ್ರಿ ಗಮನಕ್ಕೆ ತರಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.
ಕರಾವಳಿ ಕೇಸರೀಮಯವಾಗಿದೆ. ಪೊಲೀಸರೂ ಹಿಂದೂ ಮತಾಂಧತೆಯನ್ನು ಉಸಿರಾಡುತ್ತಿದ್ದಾರೆ. ಜಾತ್ಯತೀತ ರಾಜಕಾರಣಿಗಳೆಂದು ಜಾಹೀರಾತು ಹಾಕಿಕೊಂಡವರು ಮುಗುಮ್ಮಾಗಿದ್ದಾರೆ. ಇಲ್ಲಿ ಈಗ ಕೇಸರಿಗಳ ಅಘೋಷಿತ ಆಡಳಿತವಿದೆ. ಜಾತ್ಯತೀತರಿಗೆ ಇದನ್ನು ವಿರೋಧಿಸಿದರೆ ಮತ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.