‘ಪಿಎಸ್ಐ ಪ್ರಶ್ನೆಪತ್ರಿಕೆ ಸೋರಿಕೆ: ಹತ್ತಕ್ಕೂ ಹೆಚ್ಚು ಮಂದಿ ವಶಕ್ಕೆ’

7

‘ಪಿಎಸ್ಐ ಪ್ರಶ್ನೆಪತ್ರಿಕೆ ಸೋರಿಕೆ: ಹತ್ತಕ್ಕೂ ಹೆಚ್ಚು ಮಂದಿ ವಶಕ್ಕೆ’

Published:
Updated:

ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ಗುರೂಜಿ ನೀಡಿದ ಸುಳಿವು ಆಧರಿಸಿ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಪಿಎಸ್‌ಐ ಹುದ್ದೆಯ ಪ್ರಶ್ನೆಪತ್ರಿಕೆಯನ್ನೂ ಸೋರಿಕೆ ಮಾಡಲು ಯತ್ನಿಸಿದ್ದ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು, ಬೆಳಗಾವಿ, ವಿಜಯಪುರ, ತುಮಕೂರು, ಗದಗದಲ್ಲಿ ಶನಿವಾರ ಹಾಗೂ ಭಾನುವಾರ ಕಾರ್ಯಾಚರಣೆ ನಡೆದಿದ್ದು, ಪೊಲೀಸರು 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ನೇಮಕಾತಿ ವಿಭಾಗದ ಎಡಿಜಿಪಿ ರಾಘವೇಂದ್ರ ಔರಾದಕರ್, ‘ಪಿಎಸ್‌ಐ ಹುದ್ದೆಗೆ ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಭಾನುವಾರ ಸುಸೂತ್ರವಾಗಿ ಪರೀಕ್ಷೆ ನಡೆದಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ. ಅಭ್ಯರ್ಥಿಗಳು ಆತಂಕಪಡುವ ಅಗತ್ಯವಿಲ್ಲ’ ಎಂದರು.

ಬಸವರಾಜು ಗ್ಯಾಂಗ್: ಕಾನ್‌ಸ್ಟೆಬಲ್‌ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಡಿ 2018ರ ಡಿಸೆಂಬರ್‌ನಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದ ಶಿವಕುಮಾರಯ್ಯ, ಬಿಎಂಟಿಸಿ ಕಂಡಕ್ಟರ್ ಹುದ್ದೆಯ ಪ್ರಶ್ನೆಪತ್ರಿಕೆಗಳನ್ನೂ ಲೀಕ್ ಮಾಡಿದ್ದಾಗಿ ಹೇಳಿಕೆ ಕೊಟ್ಟಿದ್ದ. ಅಲ್ಲದೆ, ‘ತುಮಕೂರಿನ ಬಸವರಾಜು ಹಾಗೂ ಆತನ ಗ್ಯಾಂಗ್ ಪಿಎಸ್‌ಐ ಪರೀಕ್ಷೆಯಲ್ಲೂ ಅಕ್ರಮ ಎಸಗಲು ಸಂಚು ರೂಪಿಸಿದೆ’ ಎಂದೂ ಬಾಯ್ಬಿಟ್ಟಿದ್ದ.

ಈ ಸಂಬಂಧ ಸಿಸಿಬಿ ಪೊಲೀಸರು ಬಸವರಾಜು, ಏಜೆಂಟ್‌ಗಳಾದ ಹೊಳಿಯಪ್ಪ, ಎಸ್‌.ಕೆ.ಪೂಜಾರಿ, ರಾಥೋಡ್, ದಿಲೀಪ್, ಹರ್ಷ, ಸಂತೋಷ್ ಹಾಗೂ ನಾಗರಾಜ್ ಎಂಬುವರ ವಿರುದ್ಧ ಸೈಬರ್ ಕ್ರೈ ಠಾಣೆಯಲ್ಲಿ ಶನಿವಾರ ದೂರು ಕೊಟ್ಟಿದ್ದರು. ಬಳಿಕ ಎಂಟು ತಂಡಗಳನ್ನು ರಚಿಸಿಕೊಂಡು, ವಿವಿಧೆಡೆ ಕಾರ್ಯಾಚರಣೆಗೆ ಇಳಿದಿದ್ದರು.

‘ಪಿಎಸ್‌ಐ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ನೂರಾರು ಅಭ್ಯರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಆರೋಪಿಗಳು, ‘ಪ್ರಶ್ನೆಪತ್ರಿಕೆ ನಮ್ಮ ಬಳಿ ಇದೆ. ₹ 8 ಲಕ್ಷ ಕೊಟ್ಟರೆ, ಪರೀಕ್ಷೆಯ ಹಿಂದಿನ ದಿನ ಅದನ್ನು ನಿಮಗೆ ಕೊಡುತ್ತೇವೆ’ ಎಂದು ನಂಬಿಸಿ ಹಣ ಸಂಗ್ರಹಿಸಿದ್ದರು. ಈ ಸಂಬಂಧ ಅಭ್ಯರ್ಥಿಗಳ ಹೇಳಿಕೆಗಳನ್ನು ಪಡೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬೆಳ್ಳಾವಿಯಲ್ಲಿ ಸೆರೆ: ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಬಸವರಾಜುಗೆ ಸೇರಿದ ತೋಟದ ಮನೆ ಇದೆ. ಪ್ರಶ್ನೆಪತ್ರಿಕೆ ಪಡೆಯಲು ಶನಿವಾರ ಹಣದೊಂದಿಗೆ ಅಲ್ಲಿಗೆ ಬಂದಿದ್ದ ಕೆಲ ಅಭ್ಯರ್ಥಿಗಳನ್ನು ಮೊದಲು ಹಿಡಿದ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ, ಅವರು ನೀಡಿದ ಮಾಹಿತಿ ಆಧರಿಸಿ ಏಜೆಂಟ್ ನಾಗರಾಜ್‌ನನ್ನು ಪತ್ತೆ ಮಾಡಿತು ಎಂದು ತಿಳಿದುಬಂದಿದೆ.

ಕಳವು ಆರೋಪದಡಿ ಪ್ರಕರಣ

‘ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂಬುದಂತೂ ಸ್ಪಷ್ಟ. ಆದರೂ, ಕಳವು (379), ವಂಚನೆ (420), ನಕಲಿ ದಾಖಲೆಗಳ ಸೃಷ್ಟಿ (468, 471), ಅಪರಾಧ ಸಂಚು (ಐಪಿಸಿ 120ಬಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಎಲ್ಲರ ವಿಚಾರಣೆ ಪೂರ್ಣಗೊಂಡ ಬಳಿಕ ಅಗತ್ಯಬಿದ್ದರೆ ಕಲಂಗಳನ್ನು ಬದಲಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಡಲಗಿ, ಗೋಕಾಕದಲ್ಲೂ ಸೆರೆ

ಬೆಳಗಾವಿ: ಜಿಲ್ಲೆಯ ಮೂಡಲಗಿ ಹಾಗೂ ಗೋಕಾಕ ತಾಲ್ಲೂಕಿನ‌ಲ್ಲೂ ಸಿಸಿಬಿ ಪೊಲೀಸರು ಭಾನುವಾರ 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶನಿವಾರ ಮಧ್ಯಾಹ್ನವೇ ಇಲ್ಲಿಗೆ ಬಂದಿದ್ದ ಸಿಸಿಬಿ ತಂಡ, ಅನುಮಾನದ ಮೇಲೆ ಹಲವು ಯುವಕರನ್ನು ವಿಚಾರಣೆಗೆ ಒಳಪಡಿಸಿತ್ತು. ಕೊನೆಗೆ ಕುಲಗೋಡ ಠಾಣೆ ವ್ಯಾಪ್ತಿಯ ಕಳ್ಳಿಗುದ್ದಿ ಗ್ರಾಮದ ಅರುಣ್ ಮಾರುಡ್ಡಿ ಸೇರಿದಂತೆ ಆರು ಮಂದಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !