ಮಂಗಳವಾರ, ಸೆಪ್ಟೆಂಬರ್ 22, 2020
20 °C

ಬೇಹುಗಾರಿಕೆ ಆರೋಪ:  ಪೊಲೀಸರಿಗೆ ಹೈಕೋರ್ಟ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: "ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಬೇಹುಗಾರಿಕೆ ವಿಭಾಗದ ಪೊಲೀಸರು ಅರ್ಜಿದಾರರನ್ನು ವಿಚಾರಿಸಿದ್ದಾರೆ" ಎಂಬ ಆರೋಪಕ್ಕೆ ಹೈಕೋರ್ಟ್ ಪೊಲೀಸರ ಕಾರ್ಯ ವೈಖರಿಗೆ ಕಿಡಿ ಕಾರಿದೆ.

‘ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆ ಮತ್ತು ಮೇವು ವ್ಯವಸ್ಥೆ ಮಾಡುವಂತೆ ನಿರ್ದೇಶಿಸಬೇಕು’ ಎಂದು ಕೋರಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದ ಎ.ಮಲ್ಲಿಕಾರ್ಜುನ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. 

ವಿಚಾರಣೆ ವೇಳೆ ಅರ್ಜಿದಾರ ಮಲ್ಲಿಕಾರ್ಜುನ ಖುದ್ದು ವಾದ ಮಂಡಿಸಿ, "ಬೇಹುಗಾರಿಕೆ ವಿಭಾಗದ ಪೊಲೀಸರು ನನಗೆ ದೂರವಾಣಿ ಕರೆ ಮಾಡಿ ಪಿಐಎಲ್ ಬಗ್ಗೆ ಮಾಹಿತಿ ಮತ್ತು ದಾಖಲೆಗಳನ್ನು ಕೊಡುವಂತೆ ಕೇಳಿದರು. ಇದಕ್ಕೆ ನಾನು ಈ ದಾಖಲೆ ಸಂಬಂಧಿಸಿದ ಇಲಾಖೆಯಲ್ಲೇ ಸಿಗುತ್ತದೆ. ನೀವು ನನ್ನನ್ನು ಏಕೆ ಕೇಳುತ್ತಿದ್ದೀರಿ ಎಂದು ಮರು ಪ್ರಶ್ನಿಸಿದೆ. ಪೊಲೀಸರ ಈ ನಡೆ ಅನಗತ್ಯ ಮತ್ತು ನನ್ನ ಮೇಲೆ ಬೇಹುಗಾರಿಕೆ ನಡೆಸುತ್ತಿರುವುದಕ್ಕೆ ನಿದರ್ಶನ" ಎಂದು ಆರೋಪಿಸಿದರು.

ಈ ಆರೋಪವನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್.ನಟರಾಜ್ ಬಲವಾಗಿ ಅಲ್ಲಗಳೆದರು. 

ಇದಕ್ಕೆ ಗರಂ ಆದ ಅಭಯ್ ಎಸ್.ಓಕಾ ಅವರು, "ಪೊಲೀಸರ ಆಕ್ಷೇಪಾರ್ಹ ನಡವಳಿಕೆಯನ್ನು ನೀವು ಈ ರೀತಿ ಸಮರ್ಥಿಸಿಕೊಳ್ಳುವುದು ತರವಲ್ಲ. ಒಂದು ವೇಳೆ ಅರ್ಜಿದಾರರ ಆರೋಪ ನಿಜವಾಗಿದ್ದಲ್ಲಿ ಅದು ಗಂಭೀರವಾದ ವಿಷಯ. ಅಕಸ್ಮಾತ್ ಆರೋಪ ಸುಳ್ಳು ಎಂದಾದರೆ ಅದು ಇನ್ನಷ್ಟು ಗಂಭೀರ. ಈ ಆರೋಪದ ಬಗ್ಗೆ ಪೊಲೀಸ್ ಅಧಿಕಾರಿಯಿಂದ ವಿಚಾರಣೆ ನಡೆಯಲಿ. ಇದರ  ಸತ್ಯಾಸತ್ಯತೆ ಏನೆಂಬುದು ಹೊರಗೆ ಬರಬೇಕು. ಕೋರ್ಟ್ ವಿಚಾರದಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡುವುದನ್ನು ಸಹಿಸುವುದಿಲ್ಲ. ಆರೋಪ ನಿಜ ಎಂದಾದರೆ ಪೊಲೀಸರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು.

ಇದೇ ವೇಳೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹೈಕೋರ್ಟ್ ಸಮಿತಿಯ ಕಾರ್ಯದರ್ಶಿ ಆನಂದ ಪಿ.ಹೊಗಾಡೆ ಅವರು, 20 ತಾಲ್ಲೂಕುಗಳಲ್ಲಿ ಗೋಶಾಲೆಗಳ ಬಗ್ಗೆ ನಡೆಸಿರುವ ಅಧ್ಯಯನದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು