ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಶಕ್ಕೆ

7
ರಾಜ್ಯ ಸರ್ಕಾರದ ವಿರುದ್ಧ ಪೊಲೀಸರ ಪ್ರತಿಭಟನೆ?

ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಶಕ್ಕೆ

Published:
Updated:
Prajavani

ಬೆಂಗಳೂರು: 'ರಾಜ್ಯ ಸರ್ಕಾರದ ವಿರುದ್ಧ ಕೆಲವು ಪೊಲೀಸರು ಪ್ರತಿಭಟನೆ ನಡೆಸಲು ತಯಾರಿ ನಡೆಸುತ್ತಿದ್ದಾರೆ' ಎಂಬ ಸುದ್ದಿಗಳು ಹರದಾಡುತ್ತಿರುವ ಬೆನ್ನಲೇ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್‌ ಅವರನ್ನು ಸಿಸಿಬಿ ಪೊಲೀಸರು ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

ಯಲಹಂಕ ನಿವಾಸಿಯಾದ ಶಶಿಧರ್, ಫೇಸ್‌ಬುಕ್‌ನ ತಮ್ಮ ಖಾತೆಯಲ್ಲಿ ಎರಡ್ಮೂರು ದಿನಗಳಿಂದ ಕೆಲವು ಪೋಸ್ಟ್‌ಗಳನ್ನು ಪ್ರಕಟಿಸಿದ್ದರು. ಅವುಗಳನ್ನು ಆಧಾರವಾಗಿಟ್ಟುಕೊಂಡು ಯಲಹಂಕ ಠಾಣೆ ಪೊಲೀಸರು, ಶಶಿಧರ್ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಅದರ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಸಂಜೆ ಮನೆಗೆ ಬಂದಿದ್ದ ಸಿಸಿಬಿ ಪೊಲೀಸರು, ಶಶಿಧರ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ದೇಶದ್ರೋಹ (ಐಪಿಸಿ 124(ಎ ಅಪರಾಧಕ್ಕೆ ಕುಮ್ಮಕ್ಕು (ಐಪಿಸಿ 109), ಅಪರಾಧ ಸಂಚು (120ಬಿ) ಸೇರಿದಂತೆ ಹಲವು ಆರೋಪದಡಿ ಪ್ರಕರಣ ದಾಖಲಿಸಿರುವುದಾಗಿ ಗೊತ್ತಾಗಿದೆ’ ಎಂದು ಶಶಿಧರ್ ಅವರ ಪತ್ನಿ ಪೂರ್ಣಿಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನನ್ನು ಪೊಲೀಸರು ಬಂಧಿಸಲಿದ್ದಾರೆ. ಬುಧವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ’ ಎಂದು ಪತಿ ಮಾಹಿತಿ ನೀಡಿದ್ದಾರೆ. ಪೊಲೀಸರ ಸಲುವಾಗಿ ಹೋರಾಡುತ್ತಿರುವ ಪತಿ ಯಾವುದೇ ತಪ್ಪು ಮಾಡಿಲ್ಲ. ಅಷ್ಟಾದರೂ ಅವರ ವಿರುದ್ಧ ಸುಖಾಸುಮ್ಮನೇ ಮೇಲಿಂದ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ’ ಎಂದು ದೂರಿದರು.

ತೆರೆಮರೆಯಲ್ಲಿ ಪ್ರತಿಭಟನೆಗೆ ತಯಾರಿ: ವೇತನ ಪರಿಷ್ಕರಣೆ ಕುರಿತ ಎಡಿಜಿಪಿ ರಾಘವೇಂದ್ರ ಔರಾದಕರ್ ಅವರ ವರದಿ ಜಾರಿಗೊಳಿಸದಿದ್ದಕ್ಕೆ ಆಕ್ರೋಶಗೊಂಡಿರುವ ಕೆಲವು ಪೊಲೀಸರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಹೊರ ರಾಜ್ಯಗಳ ಪೊಲೀಸರಿಗಿಂತ ರಾಜ್ಯದ ಪೊಲೀಸರು ಕಡಿಮೆ ವೇತನ ಪಡೆಯುತ್ತಿದ್ದರಿಂದ, ವೇತನ ಪರಿಷ್ಕರಣೆ ಹಾಗೂ ಸೌಲಭ್ಯ ಹೆಚ್ಚಳ ಸಂಬಂಧ ವರದಿ ಸಿದ್ಧಪಡಿಸಲು 2016ರ ಜೂನ್‌ನಲ್ಲಿ ಔರಾದಕರ್ ಸಮಿತಿ ರಚಿಸಲಾಗಿತ್ತು. ಮೂರೇ ತಿಂಗಳಿನಲ್ಲಿ ಸಮಿತಿಯು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆ ವರದಿ ಜಾರಿಗೆ ಸರ್ಕಾರ ಇದುವರೆಗೂ ಕ್ರಮ ಕೈಗೊಂಡಿಲ್ಲ. 

ಪ್ರತಿಭಟನೆ ಸುಳಿವು ನೀಡುತ್ತಿರುವ ಪೋಸ್ಟ್‌ಗಳು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಜೆಟ್ ಮಂಡಿಸಿದ ಮರುದಿನದಿಂದಲೇ ಹಲವು ಪೊಲೀಸರು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನೋವು ಹೊರಹಾಕುತ್ತಿದ್ದಾರೆ.

‘ಔರಾದಕರ್ ವರದಿಯನ್ವಯ ಪೊಲೀಸರ ವೇತನ ಹೆಚ್ಚಳ ಮಾಡದಿರುವ ಸರ್ಕಾರದ ವಿರುದ್ಧ ನಮ್ಮ ಮುಂದಿನ ನಡೆ ಏನು ಎಂಬುದನ್ನು ಸದ್ಯದಲ್ಲೇ ಹೇಳಲಿದ್ದೇವೆ’ ಎಂಬ ಪೋಸ್ಟ್‌ ಹರಿದಾಡುತ್ತಿದ್ದು, ಅದು ಪ್ರತಿಭಟನೆಯ ಸುಳಿವು ನೀಡುತ್ತಿದೆ.

2016ರಲ್ಲಿ ಪೊಲೀಸರ ಪರವಾಗಿ ಪ್ರತಿಭಟನೆಗೆ ಕರೆ ನೀಡಿದ್ದ ವಿ. ಶಶಿಧರ್‌, ‘ಇನ್ನೊಂದು ಸಲ ಹೋರಾಟಕ್ಕೆ ಕರೆನೀಡಿ ಸರ್ – ನೊಂದ ಪೊಲೀಸ್’,  ‘ವಚನಭ್ರಷ್ಟ ಸಿಎಂ ವಿರುದ್ಧ ಸಿಡಿದೆದ್ದ ಪೊಲೀಸ್ ಸಮುದಾಯ’ ಹಾಗೂ ‘ಸರ್ಕಾರದ ಪೊಲೀಸರ ಬಗೆಗಿನ ಮಲತಾಯಿ ಧೋರಣೆ ವಿರುದ್ಧ ಪೊಲೀಸ್ ಕುಟುಂಬಗಳು, ಬೀದಿಗಿಳಿಯುವ ಕಾಲ ಸನ್ನಿಹಿತವಾಗಿದೆ’ ಎಂದು ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯದ ಹಲವು ಜಿಲ್ಲೆಗಳ ಪೊಲೀಸರು, ‘ಪ್ರತ್ಯಕ್ಷವಾಗಿ ಪ್ರತಿಭಟನೆಗೆ ಬೆಂಬಲ ನೀಡಿದರೆ, ಕರ್ತವ್ಯ ಲೋಪದ ಹೆಸರಿನಲ್ಲಿ ಕೆಲಸಕ್ಕೆ ಕುತ್ತು ಬರುತ್ತದೆ. ನಿಮ್ಮೊಂದಿಗೆ ಪರೋಕ್ಷವಾಗಿ ನಾವಿದ್ದೇವೆ. ಮುಂದುವರಿಯಿರಿ’ ಎಂದು  ಹೇಳಿದ್ದಾರೆ.

‘ಸರ್ಕಾರದಿಂದ ಸಿಸಿಬಿ ದುರ್ಬಳಕೆ’

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳ ಕುರಿತು ಬೆಂಗಳೂರು ಸಿಸಿಬಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಸಿಸಿಬಿಯ ಕೆಲವು ಅಧಿಕಾರಿಗಳು, ಪೋಸ್ಟ್‌ ಪ್ರಕಟಿಸಿದವರನ್ನು ಮುಖಾಮುಖಿಯಾಗಿ ಭೇಟಿಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ‘ಸರ್ಕಾರ, ಪ್ರತಿಭಟನೆ ಹತ್ತಿಕ್ಕುವುದಕ್ಕಾಗಿ ಸಿಸಿಬಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಕೆಲವು ಪೊಲೀಸರು ಆರೋಪಿಸುತ್ತಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !