ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಸೇವೆ ಪ್ರಶಂಸಿಸಿ ಹುರಿದುಂಬಿಸಬೇಕು: ದೀಪಾ ಚೋಳನ್

Last Updated 21 ಅಕ್ಟೋಬರ್ 2018, 4:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಗಡಿ ಕಾಯುವ, ಬಾಹ್ಯ ಶತ್ರುಗಳಿಂದ ರಾಷ್ಟ್ರವನ್ನು ರಕ್ಷಿಸುವ ಸೈನಿಕರ ಕಾರ್ಯವನ್ನು ಮುಕ್ತ ಮನಸ್ಸಿನಿಂದ ಹೊಗಳಲಾಗುತ್ತದೆ. ಅವರಷ್ಟೇ ದೇಶಕ್ಕೆ ದುಡಿಯುವ ಪೊಲೀಸ್ ಕಾರ್ಯವನ್ನು ಮೆಚ್ಚಿಕೊಂಡು ಪ್ರಶಂಸಿಸುವಲ್ಲಿ ಹಿಂದೆ ಬಿದ್ದಿದ್ದೇವೆ ಅನಿಸುತ್ತದೆ. ಕಳೆದ ವರ್ಷ ದೇಶದಲ್ಲಿ 414 ಮಂದಿ ಪೊಲೀಸರು ಕರ್ತವ್ಯದ ವೇಳೆ ಮೃತಪಟ್ಟಿರುವುದು, ಅವರ ಅಮೂಲ್ಯ ಸೇವೆಯ ದ್ಯೋತಕಎಂದರು.

ವಿವಿಧ ಇಲಾಖೆಗಳು ಒಂದೊಂದು ಜವಾಬ್ದಾರಿ ನಿರ್ವಹಿಸಿದರೆ, ಪೊಲೀಸ್ ಇಲಾಖೆಯದ್ದು ಹಲವು ಜವಾಬ್ದಾರಿ ನಿರ್ವಹಿಸುವ ಕೆಲಸ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವುದು, ಭದ್ರತೆ ನೀಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಈ ಒಂದೇ ಇಲಾಖೆ ಮಾಡುತ್ತದೆ ಎಂದು ಹೇಳಿದರು.

ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ ಇನ್ನಷ್ಟು ಅಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ವರ್ಷ ಹುತಾತ್ಮರಾದ ಪೊಲೀಸರ ಪಟ್ಟಿಯನ್ನು ಕಮಿಷನರ್ ಎಂ.ಎನ್. ನಾಗರಾಜ ವಾಚಿಸಿದರು. ಪೊಲೀಸ್ ಸೇವೆಯಯನ್ನು ನೆನೆಯುವ ಮಹತ್ವದ ದಿನ ಇದು ಎಂದು ಅವರು ಹೇಳಿದರು.

ದೀಪಾ ಚೋಳನ್, ನಾಗರಾಜ, ಡಿಸಿಪಿ ನೇಮಗೌಡ, ನಿವೃತ್ತ ಅಧಿಕಾರಿಗಳಾದ‌ ಪ್ರತಾಪನ್, ಅಣ್ವೇಕರ್, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಹುತಾತ್ಮ ಪೊಲೀಸರಿಗೆ ಪುಷ್ಪ ನಮನ ಸಲ್ಲಿಸಿದರು. ನಿವೃತ್ತ ಸಿಬ್ಬಂದಿಗೆ ಆರೋಗ್ಯ ಕಾರ್ಡ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT