ಶನಿವಾರ, ಅಕ್ಟೋಬರ್ 19, 2019
22 °C

‘ದೂರು ಸ್ವೀಕಾರಕ್ಕೆ ಗಡಿ ಕೇಳಬೇಡಿ’

Published:
Updated:

ಬೆಂಗಳೂರು: ‘ಪೊಲೀಸ್ ಠಾಣೆಗೆ ಬರುವ ದೂರುದಾರರನ್ನು ವ್ಯಾಪ್ತಿಯ ನೆಪವೊಡ್ಡಿ ವಾಪಸ್ ಕಳುಹಿಸುವಂತಿಲ್ಲ. ಎಫ್‌ಐಆರ್ ದಾಖಲಿಸುವಾಗ ವ್ಯಾಪ್ತಿ ಕೇಳದಂತೆ ಎಲ್ಲಾ ಠಾಣೆಗಳಿಗೆ ಒಂದು ತಿಂಗಳಲ್ಲಿ ಆದೇಶ ಹೊರಡಿಸಿ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ವಕೀಲ ಎಸ್. ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಮೊಹಮದ್ ನವಾಜ್ ಅವರಿದ್ದ ಪೀಠ ಈ ಆದೇಶ ನೀಡಿತು.

‘ಯಾವುದೇ ಠಾಣೆಗೆ ತೆರಳಿ ದೂರು ನೀಡಿದರೂ ಎಫ್ಐಆರ್ ದಾಖಲಿಸಬೇಕು. ಆ ನಂತರ ಅದನ್ನು ಸಂಬಂಧಪಟ್ಟ ಠಾಣೆಗಳಿಗೆ ಕಳುಹಿಸಬೇಕು. ದೂರು ಸ್ವೀಕರಿಸಲು ನಿರಾಕರಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಆದೇಶದಲ್ಲಿ ತಿಳಿಸಬೇಕು’ ಎಂದು ತಾಕೀತು ಮಾಡಿದೆ.

ಮನವಿ ಏನು: ‘ವ್ಯಾಪ್ತಿಯ ನೆಪವೊಡ್ಡಿ ದೂರುದಾರನ್ನು ಠಾಣೆಯಿಂದ ವಾಪಸ್ ಕಳುಹಿಸಬಾರದು ಎಂಬ ಸುಪ್ರೀಂಕೋರ್ಟ್ ನಿರ್ದೇಶನವಿದೆ.  ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಆದರೂ, ರಾಜ್ಯದಲ್ಲಿ ಜಾರಿಗೆ ಬಂದಿಲ್ಲ’ ಎಂಬುದು ಅರ್ಜಿದಾರರ ದೂರು.

Post Comments (+)