ಚಡಚಣನ ನಕಲಿ ಎನ್‌ಕೌಂಟರ್‌: ಆರೋಪಿ ಪೊಲೀಸರ ಕರಾಮತ್ತು..!

7
ನಕಲಿ ಎನ್‌ಕೌಂಟರ್‌ ಮುಚ್ಚಿಡಲು ಸುಳ್ಳು ದರೋಡೆ ಪ್ರಕರಣ ದಾಖಲಿಸಿದ್ದ ಪೊಲೀಸರು

ಚಡಚಣನ ನಕಲಿ ಎನ್‌ಕೌಂಟರ್‌: ಆರೋಪಿ ಪೊಲೀಸರ ಕರಾಮತ್ತು..!

Published:
Updated:

ವಿಜಯಪುರ: ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌ ಹಾಗೂ ಈತನ ಸಹೋದರ ಗಂಗಾಧರ ಚಡಚಣನ ನಿಗೂಢ ಕೊಲೆ ಪ್ರಕರಣ ಮುಚ್ಚಿ ಹಾಕಲು, ಚಡಚಣ ಪೊಲೀಸ್ ಠಾಣೆಯ ಆಗಿನ ಪಿಎಸ್‌ಐ, ಸಿಪಿಐ ವ್ಯವಸ್ಥಿತ ಪಿತೂರಿ ನಡೆಸಿರುವುದು ಬೆಳಕಿಗೆ ಬಂದಿದೆ.

ರಾಜ್ಯದ ಗಡಿ ಗ್ರಾಮ ಕೊಂಕಣಗಾಂವ್‌ನಲ್ಲಿ 2017ರ ಅ 30ರ ಸೋಮವಾರ ಮುಂಜಾನೆ ಪಿಎಸ್‌ಐ ಗೋಪಾಲ ಹಳ್ಳೂರ ಧರ್ಮರಾಜನ ನಕಲಿ ಎನ್‌ಕೌಂಟರ್‌ ನಡೆಸಿದ್ದರು. ಈ ಸಂದರ್ಭ ಪಕ್ಕದ ಗುಡಿಸಲಿನಲ್ಲಿದ್ದ ಧರ್ಮನ ಆರು ಸಹಚರರ ವಿರುದ್ಧ, ತಮ್ಮ ತಪ್ಪು ಮುಚ್ಚಿಕೊಳ್ಳಲು ಅ.31ರಂದು ಸಿಪಿಐ ಎಂ.ಬಿ.ಅಸೋಡೆ ಸುಳ್ಳು ಡಕಾಯಿತಿ ಪ್ರಕರಣ ದಾಖಲಿಸಿದ್ದರು.

ಲೋಣಿ ಕ್ರಾಸ್‌ ಬಳಿ ಡಕಾಯಿತಿ ನಡೆಸಲು ಹೊಂಚು ಹಾಕಿದ್ದ ಆರು ಡಕಾಯಿತರನ್ನು ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿ, ಜೈಲಿಗಟ್ಟಿದ್ದರು.

ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ಅಲೋಕ್‌ಕುಮಾರ್‌ ಅಧಿಕಾರ ಸ್ವೀಕರಿಸಿದ ಬಳಿಕ, ಭೀಮಾ ತೀರದ ರೌಡಿ ಶೀಟರ್‌ ಸಹೋದರರ ಕೊಲೆ ಪ್ರಕರಣಕ್ಕೆ ವಿಭಿನ್ನ ತಿರುವು ಸಿಕ್ಕಿತು. ನಕಲಿ ಎನ್‌ಕೌಂಟರ್‌ನ ಸೂತ್ರಧಾರಿ ಕಾಂಗ್ರೆಸ್‌ ಮುಖಂಡ ಮಹಾದೇವ ಭೈರಗೊಂಡ, ಪಿಎಸ್‌ಐ ಗೋಪಾಳ ಹಳ್ಳೂರ ಸೇರಿದಂತೆ ಹಲವರು ಜೈಲು ಪಾಲಾದರು. ನಾಪತ್ತೆಯಾಗಿರುವ ಸಿಪಿಐ ಇನ್ನೂ ಪತ್ತೆಯಾಗಿಲ್ಲ.

ಪ್ರಕರಣ ಸಿಐಡಿಗೆ ಹಸ್ತಾಂತರಗೊಂಡಿತು. ಈ ಸಂದರ್ಭವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ನಕಲಿ ಎನ್‌ಕೌಂಟರ್‌ ಬಳಿಕ ಪಿಎಸ್‌ಐ ಗೋಪಾಲ ಹಳ್ಳೂರ, ಸಿಪಿಐ ಎಂ.ಬಿ.ಅಸೋಡೆ ದಾಖಲಿಸಿದ್ದ ಕೆಲ ಪ್ರಮುಖ ಪ್ರಕರಣಗಳ ಮರು ತನಿಖೆಗೆ ಆದೇಶ ಹೊರಡಿಸಿ, ಬಸವನಬಾಗೇವಾಡಿ ಡಿವೈಎಸ್‌ಪಿ ಎಂ.ಮಹೇಶ್ವರಗೌಡ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿದ್ದರು.

ಡಕಾಯಿತಿ ಪ್ರಕರಣದ ತನಿಖೆ ನಡೆಸಿದ ಎಂ.ಮಹೇಶ್ವರಗೌಡ ಸುಳ್ಳು ದೂರು ದಾಖಲಿಸಿರುವುದನ್ನು ಪತ್ತೆ ಹಚ್ಚಿ ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ ಎಂಬುದು ಪೊಲೀಸ್ ಮೂಲಗಳಿಂದ ಖಚಿತಪಟ್ಟಿದೆ.

‘ಪ್ರಕರಣದಲ್ಲಿ ಸಿಲುಕಿಸಿದ್ದ ಆರು ಜನರಲ್ಲಿ ಐವರ ಮೇಲೆ ಯಾವುದೇ ದೂರು ದಾಖಲಿಲ್ಲ. ಹುಸೇನ್‌ ಎಂಬಾತ ಈ ಹಿಂದೆಯೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !