ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಿಗೆ ‘ಸತ್ವ’ ಪರೀಕ್ಷೆಯ ಕಾಲ

Last Updated 28 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

‘ಒಂದು ಮತ ಎರಡು ಸರ್ಕಾರ’ ಎಂಬ ಕರೆ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವಕ್ಕೆ ಕರ್ನಾಟಕದಿಂದ 25 ಸಂಸದರ ಬಲ ಕೊಟ್ಟ ರಾಷ್ಟ್ರೀಯ ಪ್ರಧಾನ (ಸಂಘಟನಾ) ಕಾರ್ಯದರ್ಶಿ ಬಿ.ಎಲ್. ಸಂತೋಷ್‌, ರಾಜ್ಯದಲ್ಲಿರುವ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ‘ಅಲ್ಪಮತ’ದ ಸರ್ಕಾರವನ್ನು ತನ್ನ ಅಂಕೆಯಲ್ಲಿ ಆಡಿಸತೊಡಗಿದ್ದಾರೆ.

ಪ್ರಧಾನಿ ಮೋದಿ ನಿರ್ದೇಶನ, ಗೃಹ ಸಚಿವ ಅಮಿತ್ ಶಾ ಮಾರ್ಗದರ್ಶನ, ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾರ ದಿಗ್ದರ್ಶನದಲ್ಲಿ ನಡೆಯುತ್ತಿರುವ ಬಿಜೆಪಿ ಸರ್ಕಾರದ ಸದ್ಯದ ಬೃಹನ್ನಾಟಕದ ಪ್ರಮುಖ ಸೂತ್ರಧಾರಿ ಸಂತೋಷ ಅವರೇ ಎಂಬುದು ಈಗ ರಹಸ್ಯವೇನಲ್ಲ.

ಹಿಂದೆ ಅಧಿಕಾರ ಅನುಭವಿಸಿದ ಹಿರಿತಲೆಗಳು ಪಕ್ಷ ಕಟ್ಟಲು, ಕಮಲ ಪ್ರಕಾಶಿಸಲು ನಿರೀಕ್ಷಿತ ಮಟ್ಟದಲ್ಲಿ ಕೊಡುಗೆ ನೀಡದೇ ಇರುವುದು, ಕಾಂಗ್ರೆಸ್‌ ನಾಯಕರಂತೆಯೇ ಕುಟುಂಬ ರಾಜಕಾರಣದ ಶೈಲಿ ಬಿಜೆಪಿಯಲ್ಲೂ ಪ್ರಜ್ವಲಿಸಲು ತನಮನ ಧನ ಧಾರೆ ಎರೆದು ಪೋಷಿಸಿರುವುದು, ಜನ–ಸಂಘಟನೆಯ ಹಿತಕ್ಕಿಂತ ಸ್ವಂತ ಹಿತಕ್ಕೆ ಆದ್ಯತೆ ಕೊಟ್ಟಿರುವುದು ಹಾಗೂ ತಾವು ಶಾಶ್ವತವಾಗಿ ಗೆಲ್ಲುವುದಕ್ಕೆ ಬೇಕಾದ ಕೋಟೆಯನ್ನು ಕಟ್ಟಲು ಸೀಮಿತವಾಗಿರುವುದು ಈ ಬಾರಿ ಸರ್ಕಾರ ರಚನೆಯ ವೇಳೆ ಆಗಿರುವ ಅಚ್ಚರಿಯ ಬೆಳವಣಿಗೆಗೆ ಕಾರಣ ಎಂಬುದು ಸಂಘಪರಿವಾರದ ‘ಗರ್ಭಗುಡಿ’ಯಿಂದ ಹೊರಡುತ್ತಿರುವ ‘ಘಂಟಾ’ನಾದದ ಹೊರಾರ್ಥ.

ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಗಾಣಿಗ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ ಅವರನ್ನು ಮುಂಚೂಣಿಗೆ ತರಲಾಗಿದೆ. ಒಕ್ಕಲಿಗ ಕೋಟಾದಡಿ ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಪ್ರತಿಷ್ಠಾಪಿಸಿರುವುದರ ಹಿಂದೆ ವರಿಷ್ಠರ ದೂರಗಾಮಿ ಆಲೋಚನೆ ಇದೆ ಎಂಬುದು ನಾದದಿಂದ ಹೊಮ್ಮುತ್ತಿರುವ ಸಾರ.

ಹಾಗಂತ ಇದು ಹಿರಿಯರನ್ನು ಕಡೆಗಣಿಸಿ, ಹುಡುಗರನ್ನು ಮುಂದೆ ತರುವ ಜಾಳು ಲೆಕ್ಕಾಚಾರವಲ್ಲ. ಮೊದಲು ಈ ಪರಂಪರೆ ಆರ್‌ಎಸ್‌ಎಸ್‌ನಲ್ಲಿ ಶುರುವಾಯಿತು. ಅಟಲ ಬಿಹಾರಿ ವಾಜಪೇಯಿ ಕಾಲದಲ್ಲಿ ಪಕ್ಷವನ್ನು ಹಿರಿಯರು ಮುನ್ನಡೆಸುತ್ತಿದ್ದರೆ, ಸಂಘವನ್ನು ಅವರಿಗಿಂತ ವಯಸ್ಸಿನಲ್ಲಿ ಕಿರಿಯರಾದವರು ಸಂಘಟಿಸುತ್ತಿದ್ದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಪಕ್ಷದ ಹೆಗಲಿಗೆ ನೊಗಕೊಟ್ಟು ಮುನ್ನಡೆಸತೊಡಗಿದ ಮೇಲೆ ಪಕ್ಷದಲ್ಲೂ ಈ ಪದ್ಧತಿಗೆ ಚಾಲ್ತಿಗೆ ಬಂತು. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡಣವೀಸ್‌, ಹರ್ಯಾಣದಲ್ಲಿ ಮನೋಹರ ಲಾಲ್ ಖಟ್ಟರ್‌ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತಂದಿದ್ದು ಇದೇ ತರ್ಕದ ಮೇಲೆಯೇ ಎಂಬುದು ಸಂಘದವರ ಅಭಿಮತ.

ಆದರೆ, ಕರ್ನಾಟಕದಲ್ಲಿ ಇದು ಅಷ್ಟು ಸಲೀಸಿನ ದಾರಿಯಾಗಿರಲಿಲ್ಲ. ಅದಕ್ಕೆ ಕಾರಣ ಲಿಂಗಾಯತ ಸಮುದಾಯದ ಸದ್ಯದ ಪ್ರಭಾವಿ ನಾಯಕ ಯಡಿಯೂರಪ್ಪನವರ ವರ್ಚಸ್ಸು. ಹಿಂದೆ ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದಾಗ, ಪಕ್ಷ ಅಧೋಗತಿಗೆ ಇಳಿದು ಕೇವಲ 40 ಸ್ಥಾನಕ್ಕೆ ಸೀಮಿತವಾಗಬೇಕಾಯಿತು.ಅಂತಹ ಹೊತ್ತಿನಲ್ಲಿ ಪರ್ಯಾಯ ನಾಯಕತ್ವ ಲಿಂಗಾಯತ ಸಮುದಾಯದ ಜಗದೀಶ ಶೆಟ್ಟರ್ ಹೆಗಲಿಗೇರಿತ್ತು. ಲಿಂಗಾಯತರನ್ನು ಪ್ರಭಾವಿಸಿ ಹಿಡಿದಿಟ್ಟುಕೊಳ್ಳುವ ಮತ್ತೊಬ್ಬ ನಾಯಕ ಪಕ್ಷದಲ್ಲಿ ರೂಪುಗೊಳ್ಳಲೇ ಇಲ್ಲ.

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದವರು, ಸಚಿವರಾಗಿದ್ದವರು ಬಲಿಷ್ಠ–ಪ್ರಭಾವಿ ನಾಯಕನಾಗಿ ಬೆಳೆಯುವ ಮಹತ್ವಾಕಾಂಕ್ಷೆಯಲ್ಲಿ ತೊಡಗಿಕೊಳ್ಳಲೇ ಇಲ್ಲ. ಎಲ್ಲ ಹುದ್ದೆಗಳು ಸಿಕ್ಕಿದರೂ ಜಗದೀಶ ಶೆಟ್ಟರ್, ಹುಬ್ಬಳ್ಳಿ–ಧಾರವಾಡ ಸೀಮೆಯ ಆಚೆಗೆ ಪ್ರಾಬಲ್ಯವನ್ನು ಬೆಳೆಸಿಕೊಳ್ಳಲೇ ಇಲ್ಲ. ಪ್ರಭಾವಿಯಾಗುವ ಅವಕಾಶ ಇದ್ದರೂ ಹುಕ್ಕೇರಿಗೆ ಸೀಮಿತವಾದ ಉಮೇಶ ಕತ್ತಿ, ವಿವಾದಿತ ಹೇಳಿಕೆಗಳಿಗೆ ಸೀಮಿತವಾದರು. ಬಿಜೆಪಿಯಲ್ಲಿ ರಾಜ್ಯ ಮಟ್ಟದ ಒಕ್ಕಲಿಗ ನಾಯಕನಾಗುವ ಪರಮ ಆಸೆ ಇದ್ದರೂ ಆರ್. ಅಶೋಕ, ಪದ್ಮನಾಭನಗರದ ಪರಿಧಿ ಬಿಟ್ಟು ಹೊರಬರಲಿಲ್ಲ. ಅವಕಾಶ ಕೊಟ್ಟರೂ ಸಿ.ಟಿ.ರವಿ ಸಮುದಾಯವನ್ನು ಪ್ರಭಾವಿಸುವ ಮಟ್ಟಿಗೆ ನಾಯಕತ್ವದ ಜಾಣ್ಮೆ, ಸಾಮರ್ಥ್ಯ ತೋರಲಿಲ್ಲ. ಈ ಕಾರಣಗಳಿಂದಾಗಿ ಹೊಸಬರಲ್ಲಿ ನಾಯಕತ್ವದ ಗುಣ ಇದೆಯೇ ಎಂದು ಪರೀಕ್ಷಿಸುವ ಪ್ರಯೋಗವನ್ನು ಮಾಡಿದೆ.

ನಡ್ಡಾ ಖಡಕ್ ನುಡಿ

ಸಚಿವ ಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರು ಕಂಡಿದ್ದೇ ತಡ ಯಡಿಯೂರಪ್ಪನವರೇ ದಿಗ್ಭ್ರಮೆಗೆ ಒಳಗಾದರು. ಕೂಡಲೇ ಜೆ.ಪಿ. ನಡ್ಡಾಗೆಕರೆ ಮಾಡಿ ವಿವರ ಪಡೆಯಲು ಮುಂದಾದರು. ‘ಪಟ್ಟಿ ಕಳುಹಿಸಿದ್ದೇವೆ, ಅದರಂತೆ ಮುಂದುವರಿಯಿರಿ’ ಎಂದು ನಡ್ಡಾ ಖಡಕ್ ಆಗಿ ಹೇಳಿದರು. ‘ಪಟ್ಟಿಯಲ್ಲಿ ಅಶ್ವತ್ಥನಾರಾಯಣ, ಸವದಿ ಹೆಸರು ಆರಂಭದಲ್ಲೇ ಇದೆ. ಶೆಟ್ಟರ್, ಈಶ್ವರಪ್ಪ, ಅಶೋಕ ಹೆಸರು 6–7ರ ಸಾಲಿನಲ್ಲಿದೆ. ಅದನ್ನಾದರೂ ಬದಲು ಮಾಡಿ ಪಟ್ಟಿ ಕಳುಹಿಸಿಕೊಡಲು ಅವಕಾಶ ಕೊಡಿ’ ಎಂದು ಯಡಿಯೂರಪ್ಪ ಕೋರಿದರು. ‘ಉದ್ದೇಶಪೂರ್ವಕವಾಗಿಯೇ ಕಳುಹಿಸಿದ್ದೇವೆ ಅದನ್ನು ಪಾಲಿಸುವುದು ನಿಮ್ಮ ಕರ್ತವ್ಯ ಎಂದಷ್ಟೇ ನಡ್ಡಾ ಸಂದೇಶ ಕೊಟ್ಟರು’ ಎಂದು ಹಿರಿಯ ಸಚಿವರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT