ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ದಳಪತಿಗಳ ಗುದ್ದು

ವಿಧಾನಸಭೆ ವಿಸರ್ಜಿಸಿ: ಹೊರಟ್ಟಿ l ವಿವಾದಾತ್ಮಕ ಹೇಳಿಕೆ ಬೇಡ: ಎಚ್‌ಡಿಕೆ
Last Updated 18 ಮೇ 2019, 18:55 IST
ಅಕ್ಷರ ಗಾತ್ರ

ಬೆಂಗಳೂರು/ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ನಾಯಕರು ಮುಗಿಬಿದ್ದಿದ್ದಾರೆ.

‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ’ ಎಂದು ಕಾಂಗ್ರೆಸ್‌ ನಾಯಕನ ಅಭಿಮಾನಿಗಳು ಬೇಡಿಕೆ ಮಂಡಿಸಿದ್ದು ‘ಮೈತ್ರಿ’ ನಾಯಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು. ಈ ಬೇಡಿಕೆ ತಣ್ಣಗಾಗುತ್ತಿದ್ದಂತೆ ಜೆಡಿಎಸ್‌ ನಾಯಕರು ಮತ್ತೊಂದು ಸುತ್ತಿನ ಮಾತಿನ ಗುದ್ದು ನೀಡತೊಡಗಿರುವುದು ‘ಮೈತ್ರಿ’ಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದೆ.

ತಮ್ಮ ಪಕ್ಷದ ನಾಯಕರ ಹೇಳಿಕೆ ಅವಘಡಕ್ಕೆ ಕಾರಣವಾದೀತು ಎಂದು ಎಚ್ಚರಗೊಂಡ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗುವ ಮಹತ್ತರ ಘಟ್ಟದಲ್ಲಿ ನಾವಿದ್ದೇವೆ. ಬಿಜೆಪಿಯೇತರ ಸರ್ಕಾರ ರಚನೆಯೇ ನಮ್ಮೆಲ್ಲರ ಆಶಯ. ಮೈತ್ರಿಪಕ್ಷಗಳ ಮುಖಂಡರು ಇಂತಹ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದರಿಂದ ಆ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು. ಯಾರೂ ವಿವಾದಾತ್ಮಕ ಹೇಳಿಕೆ ನೀಡಬೇಡಿ’ ಎಂದು ಟ್ವೀಟ್ ಮೂಲಕ ಮನವಿ ಮಾಡಿದರು.

‘ಸಖ’ನ ವಿರುದ್ಧ ಕಿಡಿ: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಅವರಿಗೆ ಜನ್ಮದಿನದ ಶುಭ ಹಾರೈಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್‌, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

‘ಸಿದ್ದರಾಮಯ್ಯಇಲ್ಲದ ಅಧಿಕಾರ ಚಲಾಯಿಸುತ್ತಿದ್ದಾರೆ. ಎರಡು ಪಕ್ಷಗಳ ಸಮನ್ವಯಕ್ಕಾಗಿ ಸಮಿತಿ ರಚಿಸಲಾಗಿದೆ. ವಿಶ್ವನಾಥ್ ಸೇರ್ಪಡೆ ಇಷ್ಟವಿಲ್ಲ ಎನ್ನುವ ಅಧಿಕಾರ ಯಾರಿಗೂ ಇಲ್ಲ. ನಾನಾಗಲೀ, ದಿನೇಶ್ ಗುಂಡೂರಾವ್ ಆಗಲೀ ಸಮಿತಿಗೆ ಹೋಗಲು ಸಾಧ್ಯವಾಗಲೇ ಇಲ್ಲ. ಸಮನ್ವಯ ಸಮಿತಿ ಇರೋದು ವ್ಯಕ್ತಿಯೊಬ್ಬರ ಇಷ್ಟಕ್ಕಲ್ಲ’ ಎಂದು ಕಿಡಿಕಾರಿದರು.

ಬಾಗಲಕೋಟೆಯಲ್ಲಿ ಮಾತನಾಡಿದ ವಿಧಾನಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ, ‘ರಾಜ್ಯ ರಾಜಕೀಯದಲ್ಲಿ ಗೊಂದಲ ಹೆಚ್ಚಾಗುತ್ತಿದೆ. ಹೀಗಾಗಿ, ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ’ ಎಂದು ಹೇಳಿದರು.

‘ಮೇ 23ರ ನಂತರ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಹೇಳುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಈ ಎಲ್ಲ ಗೊಂದಲಗಳಿಗೆ ತೆರೆ ಹಾಡಲು ಚುನಾವಣೆ ಎದುರಿಸುವುದು
ಒಳ್ಳೆಯದು ಎನ್ನುವುದು ಜನರ ಅಭಿಪ್ರಾಯ’ ಎಂದು ಅವರು ಹೇಳಿದರು.

‘ಎರಡೂ ಪಕ್ಷಗಳು ಈಗಲಾದರೂ ಒಂದಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸಲಿ ಎಂದು ಹೀಗೆ ಹೇಳಿದ್ದೇನೆ. ವಿಧಾನಸಭೆ ವಿಸರ್ಜಿಸಿ ಮತ್ತೆ ಚುನಾವಣೆಗೆ ಹೋಗಲು ಯಾವ ಶಾಸಕರೂ ತಯಾರಿಲ್ಲ. ವಿರೋಧಿಗಳು ಗೊಂದಲ ಸೃಷ್ಟಿಸುವುದು ನಿಲ್ಲಿಸಲಿ ಎಂಬ ಕಾರಣಕ್ಕೆ ಹೀಗೆ ಹೇಳಿದ್ದೇನೆ’ ಎಂದರು.

ಸಿದ್ದರಾಮಯ್ಯ ಮೌನ: ಜೆಡಿಎಸ್ ನಾಯಕರ ಮಾತಿಗೆ ಎದಿರೇಟು ಕೊಡುತ್ತಿದ್ದ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ದೇವೇಗೌಡರಿಗೆ ಶುಭ ಕೋರಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ರೈತರು ಮತ್ತು ಗ್ರಾಮ ಭಾರತದ ಬಗೆಗಿನ ಅವರ ಕಾಳಜಿ ಹಾಗೂ ಇಳಿವಯಸ್ಸಿನಲ್ಲಿಯೂ ದಣಿವರಿಯದ ಹೋರಾಟದ ಕೆಚ್ಚು ನನಗೆ ಸದಾ ಪ್ರೇರಣೆ. ಅವರಿಗೆ ಆರೋಗ್ಯ ಮತ್ತು ಆಯುಷ್ಯವನ್ನು ಹಾರೈಸುತ್ತೇನೆ’ ಎಂದಿದ್ದಾರೆ.

‘ಹೊರಟ್ಟಿ ಹೇಳಿಕೆ ನೋಡಿದರೆ ಮೈತ್ರಿಯಲ್ಲಿ ಗೊಂದಲ ಉಲ್ಬಣಿಸಿರುವುದು ಸ್ಪಷ್ಟ. ಏನಾಗುತ್ತದೆ ಕಾದು ನೋಡೋಣ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸಿದ್ದರಾಮಯ್ಯ, ದಿನೇಶ್ ದೆಹಲಿಗೆ ದೌಡು

ಭಾನುವಾರ ನಡೆಯಲಿರುವ ಎಲ್ಲ ರಾಜ್ಯಗಳ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರ ಸಭೆಯಲ್ಲಿ ಭಾಗವಹಿಸಲು ದಿನೇಶ್‌ ಗುಂಡೂರಾವ್‌ ಮತ್ತು ಸಿದ್ದರಾಮಯ್ಯ ಶನಿವಾರ ಸಂಜೆ ದೆಹಲಿಗೆ ತೆರಳಿದರು.

ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಸಚಿವ ಡಿ.ಕೆ. ಶಿವಕುಮಾರ್‌ ಕೂಡಾ ಭಾನುವಾರ ಬೆಳಿಗ್ಗೆ ದೆಹಲಿಗೆ ತಲುಪಲಿದ್ದಾರೆ. ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆಯೂ ರಾಹುಲ್‌ ಗಾಂಧಿ ಜೊತೆ ರಾಜ್ಯ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT