ಬಿಜೆಪಿ ಅವಿಶ್ವಾಸ ಮಂಡಿಸಲಿ: ‘ದೋಸ್ತಿ’ ಪಕ್ಷಗಳ ಸವಾಲು

ಭಾನುವಾರ, ಜೂಲೈ 21, 2019
27 °C

ಬಿಜೆಪಿ ಅವಿಶ್ವಾಸ ಮಂಡಿಸಲಿ: ‘ದೋಸ್ತಿ’ ಪಕ್ಷಗಳ ಸವಾಲು

Published:
Updated:

ಬೆಂಗಳೂರು: ‘ಬಿಜೆಪಿಗೆ ಬಹುಮತ ಇದ್ದರೆ ವಿಧಾನಸಭೆಯಲ್ಲಿ ನಮ್ಮ ವಿರುದ್ಧ ಅವಿಶ್ವಾಸ ಮಂಡಿಸಲಿ’ ಎಂದು ‘ದೋಸ್ತಿ’ ಪಕ್ಷಗಳು ಸವಾಲು ಹಾಕಿವೆ.

ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನೌಪಚಾರಿಕವಾಗಿ ಮಾತುಕತೆ ನಡೆಯಿತು, ಎಂತಹುದೇ ಸವಾಲನ್ನು ಎದುರಿಸಲು ಸಿದ್ಧವಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣಬೈರೇಗೌಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ನಮ್ಮ ಸರ್ಕಾರ ಉರುಳಿಸಲು ಆರರಿಂದ ಏಳು ಬಾರಿ ‘ದಾಳಿ’ ನಡೆಸಿದ್ದಾರೆ. ಈ ನಿರಂತರ ದಾಳಿಯನ್ನೂ ಎದುರಿಸಿದ್ದೇವೆ. ಆದರೆ, ಈ ಬಾರಿ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಇದರಿಂದ ಪಾರಾಗಲು ಇರುವ ಮಾರ್ಗಗಳ ಬಗ್ಗೆಯೂ ಚರ್ಚೆ ನಡೆಸಿದೆವು’ ಎಂದವರು ವಿವರಿಸಿದರು.

‘ಬಿಜೆಪಿ ಕೇಂದ್ರ ಸರ್ಕಾರವನ್ನು ಉಪಯೋಗಿಸಿ ಮೈತ್ರಿ ಸರ್ಕಾರದ ಪತನಕ್ಕೆ ಯತ್ನಿಸಿದೆ. ನಮ್ಮ ಮಧ್ಯೆ ಇರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸರ್ಕಾರವನ್ನು ರಕ್ಷಿಸಲು ಸಂಕಲ್ಪ ಮಾಡಿದ್ದೇವೆ’ ಎಂದೂ ಹೇಳಿದರು.

‘ಬಿಜೆಪಿ ಈಗ ನಡೆಸುತ್ತಿರುವ ದಾಳಿಯನ್ನು ಧೈರ್ಯವಾಗಿ ಎದುರಿಸೋಣ, ಮೆಟ್ಟಿ ನಿಲ್ಲೋಣ ಎಂದು ಸಭೆಯಲ್ಲಿ ಮುಖ್ಯಮಂತ್ರಿಯವರು ತಿಳಿಸಿದರು. ಬಿಜೆಪಿಗೆ ಸಂಖ್ಯೆ ಇದ್ದರೆ ಅವಿಶ್ವಾಸ ಮಂಡಿಸಲಿ. ಈಗ ನಮ್ಮನ್ನು ತೊರೆದು ಹೋಗಿರುವ ಶಾಸಕರ ಮನವೊಲಿಸಿ ಕರೆತರುವ ಸಂಕಲ್ಪ ಮಾಡಿದ್ದೇವೆ. ಸರ್ಕಾರ ಮುಂದುವರಿಯಲಿದೆ. ಅದರಲ್ಲಿ ಸಂಶಯ ಬೇಡ ಎಂಬುದಾಗಿ ವಿಶ್ವಾಸ ತುಂಬಿದರು’ ಎಂದರು.

ವಿತ್ತೀಯ ಮಸೂದೆ: ನಾಳೆಯಿಂದ ಆರಂಭವಾಗುವ ಅಧಿವೇಶನದಲ್ಲಿ ವಿತ್ತೀಯ ಮಸೂದೆಗೆ ಅಂಗೀಕಾರ ಪಡೆಯಬೇಕು. ಆದರೆ, ಸರ್ಕಾರ ಅಲ್ಪಮತಕ್ಕೆ ಇಳಿದಿರುವುದರಿಂದ ಮಸೂದೆಗೆ ವಿಧಾನಸಭೆಯಲ್ಲಿ ಸೋಲುಂಟಾದರೆ ಏನೂ ಮಾಡಲು ಆಗುವುದಿಲ್ಲ. ಮಸೂದೆಯನ್ನು ಮತಕ್ಕೆ ಹಾಕಲು ತಯಾರಿದ್ದೇವೆ. ಯಾರಿಗೆ ಬಹುಮತ ಸಿಗುತ್ತದೆ ನೋಡೋಣ ಎಂದು ಹೇಳಿದರು. 

‘ದೋಸ್ತಿ’ಗಳ ಲೆಕ್ಕಾಚಾರವೇನು?
ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿದ ಬಳಿಕವಷ್ಟೇ ರಾಜೀನಾಮೆ ಪ್ರಕರಣ ಇತ್ಯರ್ಥಗೊಳ್ಳುತ್ತದೆ. ಅಲ್ಲಿಯವರೆಗೆ ಸರ್ಕಾರ ಸೇಫಾಗಿರುತ್ತದೆ. ಅಷ್ಟರಲ್ಲಿ ಕೆಲವು ಶಾಸಕರನ್ನಾದರೂ ಮನವೊಲಿಸಿ ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವುದು ‘ದೋಸ್ತಿ’ಗಳ ಲೆಕ್ಕಾಚಾರ.

ರಮೇಶ್‌ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ ಅವರನ್ನು ಅನರ್ಹಗೊಳಿಸುವ ಅರ್ಜಿಯನ್ನು ಈ ಹಿಂದೆಯೇ ಕಾಂಗ್ರೆಸ್‌ ಸಲ್ಲಿಸಿತ್ತು. ಅದರ ಬಗ್ಗೆ ತೀರ್ಪು ನೀಡಬೇಕು ಎಂದು ಕಾಂಗ್ರೆಸ್‌ ಮತ್ತೊಂದು ಅರ್ಜಿ ಸಲ್ಲಿಸಿದೆ. ಇವರನ್ನು ಅನರ್ಹಗೊಳಿಸಿ ಪಾಠ ಕಲಿಸುವುದು ಕಾಂಗ್ರೆಸ್‌ನ ಚಿಂತನೆ. ಈ ಮೂಲಕ ಉಳಿದ ಶಾಸಕರಲ್ಲಿ ಭಯ ಹುಟ್ಟಿಸುವುದು ಕಾರ್ಯತಂತ್ರವಾಗಿದೆ.

ರಾಮಲಿಂಗಾರೆಡ್ಡಿ ಅವರನ್ನು ಹೊರತುಪಡಿಸಿ ಉಳಿದ ಶಾಸಕರ ಅನರ್ಹತೆಗೂ ಕಾಂಗ್ರೆಸ್‌ ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಬಹುದಾಗಿದ್ದು, ಆ ಅವಧಿಯಲ್ಲಿ ಮನವೊಲಿಸಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮಾಡುವುದು ದೋಸ್ತಿಗಳ ಲೆಕ್ಕಾಚಾರವಾಗಿದೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !