ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರ ತಿರುಗಲಿದೆ, ಸಮಯ ಬರಲಿದೆ: ಡಿ.ಕೆ.ಶಿವಕುಮಾರ್‌ ಎಚ್ಚರಿಕೆ

Last Updated 7 ನವೆಂಬರ್ 2019, 19:20 IST
ಅಕ್ಷರ ಗಾತ್ರ

ಮೈಸೂರು: ‘ರಾಜಕಾರಣದ ಚಕ್ರವನ್ನು ಹೇಗೆ ತಿರುಗಿಸಬೇಕೆಂಬುದು ನನಗೂ ಗೊತ್ತಿದೆ. ಅಂಥ ಸಮಯ ಬರಲಿದ್ದು, ಆಗ ಚಕ್ರ ತಿರುಗಿಸೋಣ. ಯಾರೂ ಶಾಶ್ವತ ಅಲ್ಲ’ ಎಂದು ಶಾಸಕ, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಗುರುವಾರ ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾರ್ಮಿಕವಾಗಿ ನುಡಿದರು.

ಜಿಲ್ಲಾ ಕಾಂಗ್ರೆಸ್‌ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ಸಿಗಬೇಕಿದ್ದ ವೈದ್ಯಕೀಯ ಕಾಲೇಜನ್ನೇ ಕಿತ್ತುಕೊಂಡಿದ್ದಾರೆ. ಇನ್ನು ಇತರ ಶಾಸಕರ ಅನುದಾನ ಕಿತ್ತುಕೊಂಡಿರುವುದು ಯಾವ ಲೆಕ್ಕ?’ ಎಂದರು.

‘ಹಲವರನ್ನು ಬೆಳೆಸಿದ್ದೇನೆ, ಎಷ್ಟೋ ಮಂದಿಗೆ ಅಧಿಕಾರ ಕೊಟ್ಟಿದ್ದೇನೆ. ಆದರೆ, ಜಾತಿ ವ್ಯಾಮೋಹ, ಹಣಕ್ಕೆ ಮಾರಿಕೊಂಡಿಲ್ಲ. ಹಾಗೇನಾದರೂ ಇದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ನನ್ನ ಸ್ಟೈಲೇ ಬೇರೆ, ವಿಚಾರವೇ ಬೇರೆ. ಡಿಕೆಶಿ ಕರ್ನಾಟಕದ ಆಸ್ತಿ’ ಎಂದು ಹೇಳಿದರು.

‘ಮೈಸೂರಿನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸುವ ವಿಚಾರ ನನಗೆ ಗೊತ್ತಾಗಲಿಲ್ಲ. ಗೊತ್ತಿದ್ದರೆ ಸಿದ್ದರಾಮಯ್ಯ ಹಾಗೂ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೂ ಬರಲು ಹೇಳುತ್ತಿದ್ದೆ’ ಎಂದರು.

ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೈಸೂರಿಗೆ ಬಂದಿಳಿದ ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಿಂದ ಸ್ವಾಗತಿಸಿದರು.

ರೈಲು ನಿಲ್ದಾಣದಿಂದ ಕಾಂಗ್ರೆಸ್‌ ಭವನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ, ಕ್ರೇನ್‌ ನೆರವಿನಿಂದ ಸೇಬಿನ ಹಾರ ಹಾಕಿದರು. ಜೆಡಿಎಸ್‌ ಕಾರ್ಯಕರ್ತರೂ ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿದರು.

ಹರಕೆ ಸಲ್ಲಿಕೆ: ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಹರಕೆ ತೀರಿಸಿದರು.

10 ನಿಮಿಷ ಪ್ರಾರ್ಥನೆ ಸಲ್ಲಿಸಿದ ಅವರಿಗೆ ದೇವಾಲಯದ ವತಿಯಿಂದ ಶೇಷ ವಸ್ತ್ರ, ಪ್ರಸಾದ ನೀಡಲಾಯಿತು. ದೇವಾಲಯದಲ್ಲಿ ಉಪಾಹಾರ ಸೇವಿಸಿದರು.

ಡಿಕೆಶಿ ಮುಂದಿನ ಸಿ.ಎಂ: ತನ್ವೀರ್‌
ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದರು.

‘ಶಿವಕುಮಾರ್‌ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಬೇಕು. ಅವರ ಜೊತೆಗೆ ನಾವು ಇರುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್‌, ‘ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಕಾಂಗ್ರೆಸ್‌ನ ಎರಡು ಕಣ್ಣುಗಳು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT