ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಮತದಾನ: ಇನ್ನು ಸೋಲು–ಗೆಲುವಿನ ಲೆಕ್ಕ

ಶಿವಮೊಗ್ಗ ಗರಿಷ್ಠ– ಗುಲಬರ್ಗಾ ಕನಿಷ್ಠ l ಫಲಿತಾಂಶಕ್ಕೆ ತಿಂಗಳು ಕಾಯಬೇಕು
Last Updated 23 ಏಪ್ರಿಲ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತದಾನ ಎರಡು ಹಂತಗಳಲ್ಲಿ ಮುಕ್ತಾಯಗೊಂಡಿದ್ದು, ವಿಜಯಲಕ್ಷ್ಮಿ ಯಾರ ಕೈ ಹಿಡಿಯಲಿದ್ದಾಳೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಉತ್ತರ ಹಾಗೂ ಮಧ್ಯ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆದಿದ್ದು, ಶೇ 67.28 ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ 1ರಷ್ಟು ಮತದಾನ ಜಾಸ್ತಿ ಆಗಿದೆ. ಈವರೆಗೆ ಬಂದಿರುವ ಮಾಹಿತಿ ಪ್ರಕಾರ ಶಿವಮೊಗ್ಗದಲ್ಲಿ ಗರಿಷ್ಠ ಮತದಾನ ಶೇ 76.26, ಗುಲಬರ್ಗಾದಲ್ಲಿ ಕನಿಷ್ಠ ಶೇ 57.58 ಮತದಾನ ಆಗಿದೆ. ಮತದಾನ ಮುಗಿದ ಬೆನ್ನಲ್ಲೇ ಬೆಟ್ಟಿಂಗ್‌ ಭರಾಟೆಯೂ ಜೋರಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಜಿದ್ದಾಜಿದ್ದಿನ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ಮಂಡ್ಯ ಕ್ಷೇತ್ರದಲ್ಲಿ ವಿಜಯಮಾಲೆ ಯಾರ ಮುಡಿಗೆ ಬೀಳಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಶೇ 80ರಷ್ಟು ಮಂದಿ ಹಕ್ಕು ಚಲಾಯಿಸಿರುವುದು ಗೆಲುವನ್ನು ಸುಲಭಗೊಳಿಸಿದೆ ಎಂಬ ಲೆಕ್ಕಾಚಾರದಲ್ಲಿ ಎರಡೂ ಕಡೆಯವರು ತೊಡಗಿದ್ದಾರೆ. ತುಮಕೂರಿನಲ್ಲಿ ಎಚ್‌.ಡಿ.ದೇವೇಗೌಡ ಹಾಗೂ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಗೆಲುವು ಸಹ ಮೈತ್ರಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ ಎಂಬ ವ್ಯಾಖ್ಯಾನಗಳು ನಡೆದಿವೆ.

ಎಸ್‌. ಬಂಗಾರಪ್ಪ ಹಾಗೂ ಬಿ.ಎಸ್‌.ಯಡಿಯೂರಪ್ಪ ಪುತ್ರರು ಸ್ಪರ್ಧೆ ಮಾಡಿರುವ ಶಿವಮೊಗ್ಗ ಕ್ಷೇತ್ರದ ಫಲಿತಾಂಶ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. ‘ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ನೇತೃತ್ವವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಹಿಸಿದ್ದು, ಮಗನನ್ನು ಸೋಲಿಸುವ ಮೂಲಕ ಅವರನ್ನು ಕಟ್ಟಿ ಹಾಕಬೇಕು’ ಎಂಬ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಶಿವಕುಮಾರ್‌ ಕಾರ್ಯತಂತ್ರ ಎಷ್ಟು ಫಲ ನೀಡಲಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಗರಿಗೆದರಿವೆ.

ಪರಮಾಪ್ತ ಸಿ.ಎಚ್‌.ವಿಜಯಶಂಕರ್‌ ಅವರನ್ನು ಮೈಸೂರಿನಲ್ಲಿ ಹಾಗೂ ತಾವು ಪ್ರತಿನಿಧಿಸುವ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರನ್ನು ಗೆಲ್ಲಿಸಿಕೊಂಡು ಬರುವುದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸವಾಲಾಗಿದೆ. ಹಾಸನ, ಬೆಂಗಳೂರು, ತುಮಕೂರು ಸೇರಿದಂತೆ ಮೈತ್ರಿ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳು ಹಾಗೂ ಪ್ರಮುಖವಾಗಿ ಮೈಸೂರು ಹಾಗೂ ಬಾಗಲಕೋಟೆ ಕ್ಷೇತ್ರಗಳ ಫಲಿತಾಂಶ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತೋರಿಸಲಿದೆ ಎಂಬ ವಾದಸರಣಿಯೂ ಶುರುವಾಗಿದೆ.

ಒಂಬತ್ತು ಸಲ ಶಾಸಕರಾಗಿ ಹಾಗೂ ಎರಡು ಸಲ ಸಂಸದರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಸಲ ಕಟ್ಟಿ ಹಾಕಲೇಬೇಕು ಎಂದು ‍ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಖುದ್ದು ರಣತಂತ್ರ ರೂಪಿಸಿದ್ದಾರೆ. ಇಲ್ಲಿ ಖರ್ಗೆ ಅವರ ಹಳೆಯ ಶಿಷ್ಯರೆಲ್ಲರೂ ಕಮಲ ಪಡೆಗೆ ಶಕ್ತಿ ತುಂಬುವ ಪ್ರಯತ್ನ ಮಾಡಿದ್ದಾರೆ. ಈ ಬಲದಿಂದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಅವರ ಅದೃಷ್ಟ ಖುಲಾಯಿಸಲಿದೆಯೇ ಅಥವಾ ಖರ್ಗೆ ಅವರ ಅನುಭವ ಕೈ ಹಿಡಿಯಲಿದೆಯೇ ಎಂಬ ವಿಶ್ಲೇಷಣೆಗಳು ನಡೆದಿವೆ.

ಶಾಂತಿಯುತ ಮತದಾನ

14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಕೆಲವು ಕಡೆಗಳಲ್ಲಿ ಮೈತ್ರಿಕೂಟದ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಘರ್ಷಣೆಗಳು ನಡೆದಿವೆ.

ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಚುನಾವಣೆ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಸಹಾಯಕ ಸುರೇಶ ಭೀಮಪ್ಪಾ ಸನದಿ (28) ಹೃದಯಾಘಾತದಿಂದ ನಿಧನರಾದರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಚುನಾವಣಾ ಸಿಬ್ಬಂದಿ ಎ.ಎನ್.ತಿಪ್ಪೇಸ್ವಾಮಿ ಹೃದಯಾಘಾತದಿಂದ ನಿಧನರಾದರು. ವಿಜಯಪುರ ಇಂಡಿ ತಾಲ್ಲೂಕಿನ ಐರಸಂಗ ಗ್ರಾಮದ ಮತಗಟ್ಟೆಯಲ್ಲಿ ಮತ ಹಾಕಿ ಹೊರಬಂದ ಮಹಿಳೆಯೊಬ್ಬರು ಕುಸಿದುಬಿದ್ದು ಮೃತಪಟ್ಟರು. ತಾಯಿ ತೀರಿಕೊಂಡರೂ ಸಿ.ಎನ್. ನಾಯಕ್ ಎಂಬುವರು ಹುಬ್ಬಳ್ಳಿಯ ಭವಾನಿನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಕೆಲವೆಡೆ ಮತಯಂತ್ರ ದೋಷದಿಂದ ಮತದಾನ ಪ್ರಕ್ರಿಯೆ ಆರಂಭ ವಿಳಂಬವಾಯಿತು. ಇನ್ನೂ ಕೆಲವು ಕಡೆ ಮೂಲಸೌಕರ್ಯಕ್ಕೆ ಆಗ್ರಹಿಸಿ ಜನರು ಮತದಾನ ಬಹಿಷ್ಕರಿಸಿದರು.

‘ಹೆಚ್ಚಿನ ದೋಷಪೂರಿತ ಇವಿಎಂಗಳನ್ನು ಬದಲಾಯಿಸಲಾಗಿದೆ. ಕಲಬುರ್ಗಿಯಲ್ಲಿ ಹೆಚ್ಚಿನ ತಾಪಮಾನ ಇದ್ದಿದ್ದರಿಂದ ಅಧಿಕ ವಿವಿಪ್ಯಾಟ್‌ಗಳಲ್ಲಿ ದೋಷ ಕಂಡುಬಂದಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT