ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26 ಅಭ್ಯರ್ಥಿಗಳ ಠೇವಣಿ ಖೋತಾ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 1978ರ ಐತಿಹಾಸಿಕ ಉಪ ಚುನಾವಣೆ
Last Updated 2 ಮೇ 2019, 16:07 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1978ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದ 28 ಸ್ಪರ್ಧಾಳುಗಳ ಪೈಕಿ ಬರೋಬ್ಬರಿ 26 ಮಂದಿ ಠೇವಣಿ ಕಳೆದುಕೊಂಡಿದ್ದರು. ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಲೋಕಸಭೆ ಚುನಾವಣೆಗಳಲ್ಲಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದ ಚುನಾವಣೆ ಅದಾಗಿತ್ತು.

ಅಂದು ಕಾಂಗ್ರೆಸ್‌ನಿಂದ ಇಂದಿರಾಗಾಂಧಿ, ಜನತಾ ಪಕ್ಷದಿಂದ ವೀರೇಂದ್ರ ಪಾಟೀಲ್‌, 26 ಮಂದಿ ಪಕ್ಷೇತರರು ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಇಂದಿರಾ ವಿರುದ್ಧ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಕಣಕ್ಕಿಳಿಸಲು ಜನತಾ ಪಕ್ಷದ ನೇತಾರರು ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ, ಡಾ.ರಾಜ್‌ಕುಮಾರ್‌ ಅವರು ರಾಜಕೀಯ ಪ್ರವೇಶ ನಿರಾಕರಿಸಿದ್ದರು ಎಂದು ಮಾಜಿ ಸಚಿವ ಬಿ.ಎ. ಮೊಹಿದೀನ್‌ ‘ನನ್ನೊಳಗಿನ ನಾನು’ ಆತ್ಮಕಥನದಲ್ಲಿ ಬರೆದಿದ್ದಾರೆ.

ಇಂದಿರಾ ವಿರುದ್ಧ ಕಣಕ್ಕಿಳಿಯುವಂತೆ ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಅವರಿಗೂ ಒತ್ತಾಯ ಹೇರಿದ್ದರು, ಸ್ಪರ್ಧಿಸಲು ನಿರಾಕರಿಸಿದ್ದೆ ಎಂದು ‘ನನಸಾಗದ ಕನಸು’ ‍ಕೃತಿಯಲ್ಲಿ ಕಡಿದಾಳ್‌ ಬರೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಬೀರೂರು, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದವು. ಎಂಟು ಕ್ಷೇತ್ರಗಳ ಪೈಕಿ ಕಡೂರು ವಿಧಾನಸಭಾ ಕ್ಷೇತ್ರವೊಂದರಲ್ಲಿ ಜನತಾ ಪಕ್ಷದ ಶಾಸಕ ಕೆ.ಎಂ.ತಮ್ಮಯ್ಯ ಅವರನ್ನು ಬಿಟ್ಟರೆ ಉಳಿದ ಏಳೂ ಕ್ಷೇತ್ರಗಳಲ್ಲಿ ಇಂದಿರಾ ಕಾಂಗ್ರೆಸ್‌ನ ಶಾಸಕರು ಇದ್ದು, ಕ್ಷೇತ್ರದಲ್ಲಿ ಒಟ್ಟು 5,34,676 ಮತದಾರರು ಇದ್ದರು.

‘ಆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಜನತಾ ಪಕ್ಷದ ನಾಯಕರು ಚಿಕ್ಕಮಗಳೂರಿನಲ್ಲಿ ಬೀಡುಬಿಟ್ಟಿದ್ದರು. ನಾಯಕರು ಊರೂರು ತಿರುಗಿ ಮತಯಾಚನೆ ಮಾಡಿದ್ದರು. ನಾಯಕರನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ನಾಯಕರು ಹಿಂದಿಯಲ್ಲಿ ಹೇಳಿದ್ದನ್ನು, ಪಕ್ಕದಲ್ಲಿ ನಿಂತವರು ಕನ್ನಡದಲ್ಲಿ ಹೇಳುತ್ತಿದ್ದರು’ ಎಂದು ನಗರದ ರಾಮನಹಳ್ಳಿಯ 92 ವರ್ಷದ ಚನ್ನಬಸಪ್ಪ ನೆನಪಿಸಿಕೊಂಡರು.

1978ರ ನವೆಂಬರ್‌ 5ರಂದು ಮತದಾನ ನಡೆದಿತ್ತು. ಚುನಾವಣೆಯಲ್ಲಿ ಇಂದಿರಾ ಗಾಂಧಿ ಜಯ ಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ವೀರೇಂದ್ರ ಪಾಟೀಲ್‌ ಅವರನ್ನು 77,333 ಮತಗಳ ಅಂತರದಿಂದ ಸೋಲಿಸಿದ್ದರು. ಠೇವಣಿ ಕಳೆದುಕೊಂಡವರಲ್ಲಿ 18 ಅಭ್ಯರ್ಥಿಗಳು ಪಡೆದಿದ್ದ ತಲಾ ಮತಗಳು ಮೂರಂಕಿಯನ್ನೂ ದಾಟಿರಲಿಲ್ಲ.

‘ಮತ ಎಣಿಕೆಯಂದು (1978ರ ನ.8) ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಇರಲಿಲ್ಲ. ಎಣಿಕೆ ಪ್ರಗತಿಯ ಗಮನಿಸುತ್ತಿದ್ದ ನನಗೆ ದಿಲ್ಲಿಯಿಂದ ಇಂದಿರಾ ಗಾಂಧಿ ಮತ್ತು ಬೆಂಗಳೂರಿನಿಂದ ದೇವರಾಜ ಅರಸು ಅವರು ಟೆಲಿಫೋನಿನ ಮೂಲಕ ದಿನವಿಡಿ ಟ್ರಂಕ್‌ ಕಾಲ್‌ ‘ಕಂಪನಿ’ ಕೊಡುತ್ತಲೇ ಇದ್ದರು. ಶುಕ್ರವಾರ ಬೆಳಿಗ್ಗೆ ದೆಹಲಿಯ ವೆಲ್ಲಿಂಗ್‌ಟನ್‌ ಕ್ರೆಸೆಂಟಿನ ಮನೆಯಲ್ಲಿ ಇಂದಿರಾ ಗಾಂಧಿ ಅವರಿಗೆ ಅಂತಿಮ ಫಲಿತಾಂಶ ತಿಳಿಸಿ ಶುಭಕೋರಿದೆ. ಅವರ ಪ್ರತ್ರಿಕ್ರಿಯೆ ಹೀಗಿತ್ತು: ‘.... ಚಂದ್ರೇಗೌಡರೇ ಕಾಲಚಕ್ರದಲ್ಲಿ ನಾವೆಲ್ರೂ ಆಟದ ಬೊಂಬೆಗಳು.

ಇವತ್ತು ಗೆಲ್ಲಬಹುದು, ನಾಳೆ ಸೋಲಬಹುದು. ಕೊನೆಗೆ ಕಾಯಂ ಆಗಿ ಉಳಿಯುವುದು ನಾವು ಮಾಡುವ ಸತ್ಕಾರ್ಯ. ಒಳ್ಳೆಯ ಕಾರ್ಯ ಮಾಡಲು ದೇವರು ನಮಗೆ ಶಕ್ತಿ–ಅವಕಾಶ ಕೊಡಲಿ.... ಗೌಡಾಜಿ... ನೋಡಿ ನಾಳೆ ನಾನು ಇಂಗ್ಲೆಂಡಿಗೆ ಹೋಗುತ್ತಿದ್ದೇನೆ. ವಾಪಸಾದ ಬಳಿಕ ನಿಧಾನವಾಗಿ ಮಾತನಾಡುತ್ತೇನೆ. ಏತನ್ಮಧ್ಯೆ ಚಿಕ್ಕಮಗಳೂರಿನ ನನ್ನ ಮತದಾರ ಬಂಧುಗಳಿಗೆ, ನಿಮ್ಮ ಕುಟುಂಬಕ್ಕೆ ನನ್ನ ನಮಸ್ಕಾರ ತಿಳಿಸಿ ಎಂದಿದ್ದರು’ ಎಂದು ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಅವರು ‘ಪೂರ್ಣಚಂದ್ರ’ (ಚಿಂತನೆಗಳು ಮತ್ತು ಆತ್ಮಕಥೆ) ಕೃತಿಯಲ್ಲಿ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT