ಗರ್ಭ ನಿರೋಧಕ ಬಳಕೆಯಲ್ಲಿ ಗ್ರಾಮೀಣರೇ ಮುಂದು

7
ಗಂಡು ಸಂತಾನ ಇದ್ದವರಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಆಸಕ್ತಿ

ಗರ್ಭ ನಿರೋಧಕ ಬಳಕೆಯಲ್ಲಿ ಗ್ರಾಮೀಣರೇ ಮುಂದು

Published:
Updated:

ಬೆಂಗಳೂರು: ರಾಜ್ಯದಲ್ಲಿ ಗರ್ಭನಿರೋಧಕಗಳ ಬಳಕೆಯಲ್ಲಿ ನಗರ ಪ್ರದೇಶದವರಿಗಿಂತ ಗ್ರಾಮೀಣ ಪ್ರದೇಶದವರೇ ಒಂದು ಹೆಜ್ಜೆ ಮುಂದಿದ್ದಾರೆ.

ಅಚ್ಚರಿ ಸಂಗತಿಯೆಂದರೆ ಗಂಡು ಮಗು ಹೊಂದಿರುವ ದಂಪತಿಗೆ ಇವುಗಳ ಬಳಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ತಕ್ಷಣವೇ ಅಳವಡಿಸಿಕೊಳ್ಳುತ್ತಾರೆ. ಆದರೆ, ಹೆಣ್ಣು ಮಕ್ಕಳನ್ನು ಹೊಂದಿರುವವರು ಗಂಡು ಮಗುವಿಗಾಗಿ ಕಾತರಿಸಿ ಗರ್ಭನಿರೋಧಕ ಬಳಕೆಗೆ ಹಿಂದೇಟು ಹಾಕುತ್ತಾರೆ.

ನಾಲ್ಕನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ವರದಿಯ ಪ್ರಕಾರ, ರಾಜ್ಯದ ಗ್ರಾಮಾಂತರ ಭಾಗದಲ್ಲಿ ಶೇ 55 ಮತ್ತು ನಗರ ಪ್ರದೇಶದಲ್ಲಿ ಶೇ 48 ರಷ್ಟು ವಿವಾಹಿತರು ಗರ್ಭ ನಿರೋಧಕ ಬಳಸುತ್ತಿದ್ದಾರೆ. 

ಗರ್ಭನಿರೋಧಗಳ ಬಳಕೆಗೂ ದಂಪತಿಯ ಶೈಕ್ಷಣಿಕ ಮಟ್ಟಕ್ಕೂ ನೇರ ಸಂಬಂಧವಿದೆ. ಶಾಲೆಗೆ ಹೋಗದೇ ಇರುವವರಲ್ಲಿ ಮೂರನೇ ಎರಡಷ್ಟು ವಿವಾಹಿತ ಮಹಿಳೆಯರು ಯಾವುದೇ ಬಗೆಯ ಗರ್ಭ ನಿರೋಧಕವನ್ನು ಬಳಸಲು ತಯಾರಿರುತ್ತಾರೆ. 12 ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದವರಲ್ಲಿ ಈ ಪ್ರಮಾಣ ಮೂರನೇ ಒಂದರಷ್ಟಿದೆ. ಶಿಕ್ಷಣ ಪಡೆಯದ ಶೇ 65 ರಷ್ಟು ವಿವಾಹಿತ ಮಹಿಳೆಯರು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಮಾಡಿಸಿಕೊಳ್ಳುತ್ತಿದ್ದಾರೆ. ಹಿಂದುಗಳಿಗೆ ಹೋಲಿಸಿದರೆ ಮುಸ್ಲಿಂ ಮತ್ತು ಕ್ರೈಸ್ತ ಮಹಿಳೆಯರು ಗರ್ಭ ನಿರೋಧಕಗಳನ್ನು ಬಳಸುವುದು ಕಡಿಮೆ ಎಂದು ವರದಿ ತಿಳಿಸಿದೆ. 

ಶೇ 53 ರಷ್ಟು ಹಿಂದು ಮಹಿಳೆಯರು ಜನಸಂಖ್ಯೆ ನಿಯಂತ್ರಣ ದೃಷ್ಟಿಯಿಂದ ಗರ್ಭ ನಿರೋಧಗಳನ್ನು ಬಳಸಿದರೆ, ಮುಸ್ಲಿಂ ಮತ್ತು ಕ್ರೈಸ್ತ ಎರಡೂ ಸಮುದಾಯದಿಂದ ಸೇರಿ ಒಟ್ಟು ಶೇ 46 ರಷ್ಟು ಮಂದಿ ಬಳಕೆ ಮಾಡುತ್ತಿದ್ದಾರೆ.

ಗಂಡು ಮಗು ಹುಟ್ಟಿದರೆ ಸಾಕು: ಯಾವ ಕುಟುಂಬದಲ್ಲಿ ಗಂಡು ಮಗು ಇರುತ್ತದೆಯೋ ಅವರು ಗರ್ಭ ನಿರೋಧಕಗಳ ಬಳಕೆಗೆ ಅತಿ ಬೇಗನೆ ಮುಂದಾಗುತ್ತಾರೆ. ಇಂತಹ ಕುಟುಂಬಗಳಲ್ಲಿ ಸಾಮಾನ್ಯವಾಗಿ ಎರಡು ಮಕ್ಕಳಿರುತ್ತಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಅವರು ಬಯಸುವುದಿಲ್ಲ.  ಎರಡು ಮಕ್ಕಳು ಇರುವ ಕುಟುಂಬಗಳಲ್ಲಿ ಒಂದು ಗಂಡು ಮತ್ತೊಂದು ಹೆಣ್ಣು ಮಕ್ಕಳು ಇರುವಲ್ಲಿ ಶೇ 69 ರಷ್ಟು ದಂಪತಿ ಗರ್ಭ ನಿರೋಧಕ ಬಳಕೆಗೆ ಸುಲಭವಾಗಿ ಒಪ್ಪುತ್ತಾರೆ. ಆದರೆ, ಎರಡೂ ಹೆಣ್ಣು ಮಕ್ಕಳು ಇರುವ ಕುಟುಂಬಗಳಲ್ಲಿ ಇದಕ್ಕೆ ಒಪ್ಪುವವರ ಸಂಖ್ಯೆ ಶೇ 52 ಕ್ಕಿಂತಲೂ ಕಡಿಮೆ.

ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಮಹಿಳೆಯರಲ್ಲಿ ಶೇ 66 ರಷ್ಟು ಶಸ್ತ್ರ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರೆಗಳಲ್ಲೇ ಆಗಿವೆ. ಶೇ 61 ರಷ್ಟು ಜನ ಕಾಪರ್‌ಟಿಗಳಂತಹ ಗರ್ಭ ನಿರೋಧಕಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಗರ್ಭ ಧರಿಸುವುದನ್ನು ತಡೆಯಲು ಗುಳಿಗೆ ಮತ್ತು ಕಾಂಡೋಮ್‌ ಅಥವಾ ನಿರೋಧ್‌ಗಳನ್ನು ಬಹುಪಾಲು ದಂಪತಿ ಸರ್ಕಾರಿ ಆಸ್ಪತ್ರೆಗಳಿಂದಲೇ ಪಡೆಯುತ್ತಾರೆ. ಗುಳಿಗೆ ಬಳಸುವವರಲ್ಲಿ ಶೇ 29 ಮತ್ತು ಕಾಂಡೋಮ್‌ ಬಳಸುವವರಲ್ಲಿ ಶೇ 31 ರಷ್ಟು ಖಾಸಗಿಯಿಂದ ಪಡೆಯುತ್ತಿದ್ದಾರೆ.

ಒಟ್ಟು ಗರ್ಭ ನಿರೋಧಕಗಳ ಬಳಕೆದಾರರಲ್ಲಿ ಅರ್ಧದಷ್ಟು ಜನ ಆಧುನಿಕವಾದ ವಿಧಾನಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆರೋಗ್ಯ ಕಾರ್ಯಕರ್ತರು ಅಥವಾ ಕುಟುಂಬ ಕಲ್ಯಾಣ ಸಲಹೆಯನ್ನು ಆಧರಿಸಿ ಬಳಸುತ್ತಿದ್ದಾರೆ.

***

ಗರ್ಭ ನಿರೋಧಕ ಬಳಕೆ ಪ್ರಮಾಣ

ಸಂತಾನ ಶಕ್ತಿಹರಣ ಚಿಕಿತ್ಸೆ(ಮಹಿಳೆಯರು) 49%

ಸಂತಾನ ಶಕ್ತಿಹರಣ ಚಿಕಿತ್ಸೆ(ಪುರುಷರು) 0.1%

ಗುಳಿಗೆಗಳು 0.4%

ಕಾಪರ್‌ಟಿ/ಐಯುಡಿ 0.8%

ಇಂಜೆಕ್ಟೆಬಲ್‌ 0.1%

ಯಾವುದೇ ವಿಧಾನ ಬಳಸದೇ ಇರುವವರು 48%

***

ಕರ್ನಾಟಕ ತನ್ನ ಫಲವತ್ತತೆ ಪ್ರಮಾಣವನ್ನು ಶೇ 1.8ಕ್ಕೆ ತಗ್ಗಿಸುವಲ್ಲಿ ಯಶ‌ಸ್ವಿಯಾಗಿದೆ
- ಡಾ.ಹೇಮಾ ದಿವಾಕರ್‌, ಪ್ರಸೂತಿ ತಜ್ಞೆ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !